ವಿಡಿಯೋ | ನೇಪಾಳ ಭೀಕರ ಪ್ರವಾಹದ ಕೆಸರಿನಡಿ ಹೂತುಹೋಗಿದ್ದ 97ರ ವೃದ್ಧೆ; ಆದ್ರೂ ಸಾವನ್ನು ಗೆದ್ದು ಬಂದ ಗಟ್ಟಿಗಿತ್ತಿ !

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ದುರಂತದ ನಡುವೆ, ವೃದ್ಧಾಶ್ರಮದ ಅವಶೇಷಗಳಡಿ ಸಿಲುಕಿದ್ದ 97 ವರ್ಷದ ಮಹಿಳೆಯೊಬ್ಬರು ಜೀವಂತವಾಗಿದ್ದು, ಅವರನ್ನು ಸುರಕ್ಷಿತವಾಗಿ ರಕ್ಷಿಸಿರುವ ಘಟನೆ ಆಶಾಕಿರಣವಾಗಿ ಮೂಡಿಬಂದಿದೆ.
ಪ್ರವಾಹದಲ್ಲಿ ಅವಶೇಷಗಳಡಿ ಸಿಲುಕಿದ್ದ ಗುನಾ ಮಾಯಾ ಬೊಹಾರಾ (97) ಅವರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಚೇತರಿಕೆಯ ಹಾದಿಯಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬುಧವಾರ ಸಂಭವಿಸಿದ ಹಠಾತ್ ಪ್ರವಾಹ (ಫ್ಲ್ಯಾಶ್ ಫ್ಲಡ್) ವೃದ್ಧಾಶ್ರಮವನ್ನು ಅಪ್ಪಳಿಸಿದಾಗ ಬೊಹಾರಾ ಅವಶೇಷಗಳಡಿ ಸಿಲುಕಿಕೊಂಡಿದ್ದರು. ಅವರನ್ನು ರಕ್ಷಿಸಲು ನೇಪಾಳ ಸೇನೆ ಹಾಗೂ ಪೊಲೀಸರು ಸುಮಾರು ನಾಲ್ಕು ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿದರು.
ಬೊಹಾರಾ ಅವರ ಹಿರಿಯ ಸಹೋದರನ ಮೊಮ್ಮಗ ದೀಪಕ ಬೊಹಾರಾ ವಿಶೇಷವಾಗಿ ಕಠ್ಮಂಡುವಿನಿಂದ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾದರು. ಈ ಕುರಿತು ಬಿಬಿಸಿ ನೇಪಾಳಿ ಸರ್ವಿಸ್‌ಗೆ ಮಾತನಾಡಿದ ಅವರು, “ನನ್ನ ದೊಡ್ಡಮ್ಮ ಯುದ್ಧದಲ್ಲಿ ಗೆದ್ದು ಬಂದ ಯೋಧೆಯಂತೆ ಕಾಣುತ್ತಿದ್ದರು” ಎಂದು ಭಾವುಕರಾದರು.

ರಕ್ಷಣಾ ಕಾರ್ಯಾಚರಣೆಯ ವೇಳೆ ತಮ್ಮ ಸಹೋದರ ಮತ್ತು ಮಗ ಮರಗಳಿಗೆ ಹಗ್ಗ ಕಟ್ಟಿ ಪ್ರವಾಹಪೀಡಿತ ಪ್ರದೇಶದ ಒಳಭಾಗಕ್ಕೆ ತೆರಳಿದ್ದರು. ಬಳಿಕ ಅವರು ಹಿಂದಿರುಗಿ, “ಗುನಾ ಮಾಯಾ ಇನ್ನೂ ಜೀವಂತವಾಗಿದ್ದಾರೆ. ಆದರೆ ಸುತ್ತಮುತ್ತ ಹಲವರು ಮೃತಪಟ್ಟಿರುವಂತೆ ಕಾಣುತ್ತಿದೆ” ಎಂದು ತಿಳಿಸಿದ್ದಾಗಿ ದೀಪಕ ವಿವರಿಸಿದ್ದಾರೆ.
ಕೊನೆಗೆ ಅವಶೇಷಗಳಡಿಯಿಂದ ಹೊರತೆಗೆದ ಬೊಹಾರಾ ಅವರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಜೆಸಿಬಿ (ಎಕ್ಸ್ಕವೇಟರ್) ಯಂತ್ರದ ಬಕೆಟ್ ಬಳಸಲಾಯಿತು. 97 ವರ್ಷದ ವೃದ್ಧೆ ಎಕ್ಸ್ಕವೇಟರ್ ಬಕೆಟ್‌ನಲ್ಲಿ ಕುಳಿತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಿಬಿಸಿ ನೇಪಾಳಿ ವರದಿ ಪ್ರಕಾರ, ಬೊಹಾರಾ ಅವರು ಪ್ರವಾಹ ಸಂಭವಿಸಿದ ವೇಳೆ ವೃದ್ಧಾಶ್ರಮದಲ್ಲೇ ವಾಸವಾಗಿದ್ದರು. ಪ್ರವಾಹದ ಅಬ್ಬರದಿಂದ ಕಟ್ಟಡ ಕುಸಿದು, ಅದರ ಅವಶೇಷಗಳಡಿ ಅವರು ಸಿಲುಕಿಕೊಂಡಿದ್ದರು. ಸುಮಾರು ನಾಲ್ಕು ಗಂಟೆಗಳ ಪ್ರಯತ್ನದ ಬಳಿಕ ಪೊಲೀಸರು ಮತ್ತು ನೇಪಾಳ ಸೇನೆಯ ಸಿಬ್ಬಂದಿ ಅವರನ್ನು ಜೀವಂತವಾಗಿ ಹೊರತೆಗೆದರು.ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಈ ವೃದ್ಧೆ ಅವಶೇಷಗಳ ನಡುವೆ ಜೀವಂತವಾಗಿ ಪತ್ತೆಯಾದ ನಂತರ ಅವರ ಚಿತ್ರ ವಿಶ್ವದ ಗಮನ ಸೆಳೆದಿದೆ.

ಬುಧವಾರ ಸಂಭವಿಸಿದ ಪ್ರವಾಹದಲ್ಲಿ ಇದುವರೆಗೆ ಕನಿಷ್ಠ 734 ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಇನ್ನೂ ಸುಮಾರು 3000kfkU ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ನಾಪತ್ತೆಯಾದವರಲ್ಲಿ 300ಕ್ಕೂ ಹೆಚ್ಚು ಭಾರತೀಯರು ಸೇರಿದ್ದಾರೆ ಎಂದು ವರದಿಗಳು ತಿಳಿಸಿವೆ.
ವಿಜ್ಞಾನಿಗಳ ಪ್ರಕಾರ, ಟಿಬೆಟ್ ಗಡಿಗೆ ಹೊಂದಿಕೊಂಡಿರುವ ಹಿಮಾಲಯ ಪ್ರದೇಶದಲ್ಲಿ ಹಿಮನದಿ ಹಿಮ ಬಂಡೆ (ಗ್ಲೇಶಿಯರ್) ಕುಸಿತಗೊಂಡಿರುವುದೇ ಈ ದುರಂತಕ್ಕೆ ಪ್ರಮುಖ ಕಾರಣವಾಗಿರಬಹುದು. ಇದರಿಂದ ನೇಪಾಳದ ರಸುವಾ ಜಿಲ್ಲೆಯ ಭೋಟೆ ಕೋಶಿ ನದಿಯಲ್ಲಿ ಹಠಾತ್‌ ಭಾರೀ ಪ್ರಮಾಣದ ಪ್ರವಾಹ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಪ್ರಮುಖ ಸುದ್ದಿ :-   ನಿಮ್ಗೆ 'ಸಹಾ’ ಸಿನಿಮಾ ಇಷ್ಟವಾಗ್ಲಿಲ್ಲ ಅಂದ್ರೆ ಸರ್ಕಲ್‌ನಲ್ಲಿ ತಲೆ ಬೋಳಿಸಿಕೊಳ್ತೇನೆ: ಪ್ರೇಕ್ಷಕರಿಗೆ ನಟಿಯ ಚಾಲೆಂಜ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement