ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸ್ ಠಾಣೆಯ (Haliyal Police Station) ಪಿಎಸ್ಐಗಳ ಪೋಸ್ಟಿಂಗ್ ಹಾಗೂ ಲಂಚದ ವ್ಯವಹಾರಕ್ಕೆ ಸಂಬಂಧಿಸಿದಂತೆ ಆಡಿಯೊ ವೈರಲ್ ಅದ ಬೆನ್ನಲ್ಲಿಯೇ ಮೂವರು ಪಿಎಸ್ಐಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಲಂಚದ ಆಡಿಯೊ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರಿಂದ ಎಚ್ಚೆತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಗಂಭೀರ ಆರೋಪ ಎದುರಿಸುತ್ತಿದ್ದ ಮೂರು ಪಿಎಸ್ಐಗಳನ್ನು ಅಮಾನತುಗೊಳಿಸಿದ್ದಾರೆ ಎನ್ನಲಾಗಿದೆ. ಹಳಿಯಾಳ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್ಐ ಕಿರಣ್ ಪಾಟೀಲ್, ಅಪರಾಧ ವಿಭಾಗದ ಪಿಎಸ್ಐ ಕೃಷ್ಣ ಹಾಗೂ ಈ ಹಿಂದೆ ಹಳಿಯಾಳದಲ್ಲಿ ಕರ್ತವ್ಯ ನಿರ್ವಹಿಸಿದ್ದ ಪಿಎಸ್ಐ ವಿನೋದ್ ರೆಡ್ಡಿ ಅಮಾನತುಗೊಂಡ ಅಧಿಕಾರಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಆಡಿಯೋದಲ್ಲಿ ಪೊಲೀಸ್ ಠಾಣೆಯ ಪ್ರಮುಖ ಹುದ್ದೆಯ ಪೋಸ್ಟಿಂಗ್ ವಿಚಾರವಾಗಿ ಹಣದ ಮಾತುಕತೆ ನಡೆದಿರುವ ಆರೋಪ ಕೇಳಿಬಂದಿತ್ತು. ಇದಲ್ಲದೆ ಠಾಣೆಯಿಂದ ಮಾಸಿಕವಾಗಿ ಹಣ ನೀಡುವ ವಿಚಾರ ಹಾಗೂ ಮೇಲಧಿಕಾರಿಗಳಿಗೆ ಹಣ ತಲುಪಿಸುವ ಕುರಿತು ಚರ್ಚೆ ನಡೆದಿದೆ ಎಂಬ ಆರೋಪವೂ ಆಡಿಯೋ ವೈರಲ್ ಆದ ಬಳಿಕ ಕೇಳಿಬಂದಿತ್ತು.
ಆಡಿಯೋ ಸಾರ್ವಜನಿಕ ವಲಯಕ್ಕೆ ಬಂದ ತಕ್ಷಣ ಪ್ರಕರಣ ಕೇವಲ ಪೊಲೀಸ್ ಇಲಾಖೆಯೊಳಗಿನ ವಿಚಾರವಾಗಿ ಉಳಿಯಲಿಲ್ಲ. ಜೆಡಿಎಸ್ ಕೂಡ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ಹಂಚಿಕೊಂಡು ಗಂಭೀರ ಆರೋಪ ಮಾಡಿತ್ತು. ಪರಿಣಾಮವಾಗಿ ಪೋಸ್ಟಿಂಗ್ ಮತ್ತು ಹಣದ ವ್ಯವಹಾರದ ಆರೋಪ ತೀವ್ರ ಚರ್ಚೆಗೆ ಗ್ರಾಸವಾಯಿತು.
ಪೊಲೀಸ್ ಇಲಾಖೆಯ ಘನತೆಗೆ ಕುತ್ತು ತಂದಿರುವ ಈ ಆಡಿಯೋ ವೈರಲ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ಸಮಗ್ರ ತನಿಖೆಗೆ ಆದೇಶಿಸಿದ್ದರು. ತನಿಖಾ ತಂಡವು ನಡೆಸಿದ ತನಿಖೆಯಲ್ಲಿ ಪಿಎಸ್ಐಗಳ ಅಕ್ರಮ ಮತ್ತು ಕರ್ತವ್ಯಲೋಪ ಮೇಲ್ನೋಟಕ್ಕೆ ಸಾಬೀತಾಗಿದೆ ಎಂಬ ವರದಿಯ ಆಧಾರದ ಮೇಲೆ ಈ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ