ನೌಕಾಪಡೆಗೆ ಐಎನ್ಎಸ್ ನಿಪುಣ್ ಸೇರ್ಪಡೆ : ಭಾರತಕ್ಕೆ ಈ ಆಳ ಸಮುದ್ರ ಡೈವಿಂಗ್ ಹಡಗುಗಳು ಏಕೆ ಬೇಕು? ಇದರ ವಿಶೇಷತೆ ಏನು?

ಮುಂಬೈ: ಭಾರತೀಯ ನೌಕಾಪಡೆಯು ಸೋಮವಾರ (ಆಗಸ್ಟ್‌ 31) ಮುಂಬೈನ ನೌಕಾ ಡಾಕ್‌ಯಾರ್ಡ್‌ನಲ್ಲಿ ನಿಸ್ಟಾರ್‌ ವರ್ಗದ (Nistar-Class) ಎರಡನೇ ಡೈವಿಂಗ್‌ ಸಪೋರ್ಟ್‌ ವೆಸೆಲ್‌ (DSV) ‘ಐಎನ್‌ಎಸ್‌ ನಿಪುಣ್‌’ ಅನ್ನು ಅಧಿಕೃತವಾಗಿ ಸೇವೆಗೆ ಸೇರ್ಪಡೆಗೊಳಿಸಿದೆ. ತನ್ನ ಚಿಹ್ನೆಯಲ್ಲಿ ತಿಮಿಂಗಿಲ (Whale) ಮತ್ತು ಡೈವಿಂಗ್‌ ಹೆಲ್ಮೆಟ್‌ ಹೊಂದಿರುವ ಈ ವಿಶೇಷ ಹಡಗು, ಪಶ್ಚಿಮ ನೌಕಾ ಕಮಾಂಡ್‌ನ ಆಳಸಮುದ್ರ ಡೈವಿಂಗ್‌, ಜಲಾಂತರ್ಗಾಮಿ ತುರ್ತು ಕಾರ್ಯಾಚರಣೆ (Underwater Intervention) ಮತ್ತು ಜಲಾಂತರ್ಗಾಮಿ ರಕ್ಷಣಾ (Submarine Rescue) ಕಾರ್ಯಾಚರಣೆಗಳ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಿದೆ.
ಡೈವಿಂಗ್‌ ಸಪೋರ್ಟ್‌ ವೆಸೆಲ್‌ (DSV) ಎಂದರೇನು?
ಡಿಎಸ್‌ವಿ ಎಂದರೆ ನೌಕಾಪಡೆಯು ಸಮುದ್ರದ ಆಳದಲ್ಲಿ ದೀರ್ಘಕಾಲದವರೆಗೆ ಸಂಕೀರ್ಣ ಕಾರ್ಯಾಚರಣೆಗಳನ್ನು ನಡೆಸಲು ನೆರವಾಗುವ ವಿಶೇಷ ಪ್ಲಾಟ್‌ಫಾರ್ಮ್‌ ನೌಕೆಯಾಗಿದೆ. ಹಡಗುಗಳು, ಜಲಾಂತರ್ಗಾಮಿಗಳು ಮತ್ತು ಇತರ ಜಲಾಂತರ್ಗಾಮಿಗಳ ಪರಿಶೀಲನೆ, ದುರಸ್ತಿ, ರಕ್ಷಣೆ, ಹಾಗೂ ತುರ್ತು ಕಾರ್ಯಗಳಿಗೆ ಡಿಎಸ್‌ವಿ ಅಗತ್ಯವಾಗುತ್ತದೆ.
ಇಂತಹ ಹಡಗುಗಳಲ್ಲಿ ಸುಧಾರಿತ ಡೈವಿಂಗ್‌ ವ್ಯವಸ್ಥೆಗಳು, ವಿಶೇಷ ಉಪಕರಣಗಳು, ವೈದ್ಯಕೀಯ ಸೌಲಭ್ಯಗಳು ಮತ್ತು ಕಾರ್ಯಾಚರಣಾ ಬೆಂಬಲ ವ್ಯವಸ್ಥೆಗಳು ಲಭ್ಯವಿದ್ದು, ಇದು ಕರಾವಳಿ ಮೂಲಸೌಕರ್ಯಗಳ ಅವಲಂಬನೆಯನ್ನು ಕಡಿಮೆ ಮಾಡಿ ಸಮುದ್ರದಲ್ಲೇ ತ್ವರಿತ ಸ್ಪಂದನೆ ನೀಡಲು ನೆರವಾಗುತ್ತವೆ.
ಭಾರತೀಯ ನೌಕಾಪಡೆಗೆ ಡಿಎಸ್‌ವಿ ಏಕೆ ಅಗತ್ಯ?
ಭಾರತೀಯ ನೌಕಾಪಡೆಯು ಕೇವಲ ಜಲಾಂತರ್ಗಾಮಿಗಳನ್ನು ನಿರ್ವಹಿಸುವುದಲ್ಲದೆ, ಹಿಂದೂ ಮಹಾಸಾಗರ ಪ್ರದೇಶದಲ್ಲಿ (Indian Ocean Region) ವ್ಯಾಪಕ ಡೈವಿಂಗ್‌ ಕಾರ್ಯಾಚರಣೆಗಳನ್ನೂ ನಡೆಸುತ್ತದೆ. ಇವುಗಳಲ್ಲಿ ಜಲಾಂತರ್ಗಾಮಿ ರಕ್ಷಣಾ ಕಾರ್ಯಾಚರಣೆಗಳು, ಸಮುದ್ರದಡಿಯ ಪರಿಶೀಲನೆಗಳು, ತಾಂತ್ರಿಕ ಪರೀಕ್ಷೆಗಳು, ಸಮುದ್ರದಲ್ಲಿ ಮುಳುಗಿದ ಹಡಗು, ವಿಮಾನ ಅಥವಾ ಇತರ ವಸ್ತುಗಳ ಪತ್ತೆ ಹಚ್ಚುವಿಕೆ ಹಾಗೂ
ಸಾಲ್ವೇಜ್‌ (Salvage) ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ.
 ಈ ಕಾರ್ಯಾಚರಣೆಗಳಲ್ಲಿ ಡೈವರ್‌ಗಳು ದೀರ್ಘಕಾಲ ಸಮುದ್ರದಡಿಯಲ್ಲೇ ಉಳಿಯಬೇಕಾಗುವುದರಿಂದ, ಅವರ ಸುರಕ್ಷಿತ ಇಳಿಕೆ-ಏರಿಕೆ, ಉಪಕರಣ ಸಾಗಣೆ ಹಾಗೂ ವೈದ್ಯಕೀಯ ನೆರವಿಗೆ ಡಿಎಸ್‌ವಿ ಅತ್ಯಗತ್ಯವಾಗಿದೆ.
ಹಿಂದೆ ಭಾರತೀಯ ನೌಕಾಪಡೆಯು ರಷ್ಯಾ ಮೂಲದ ಜಲಾಂತರ್ಗಾಮಿ ರಕ್ಷಣಾ ಹಡಗುಗಳು ಹಾಗೂ ಕರಾವಳಿ ಸೌಲಭ್ಯಗಳ ಮೇಲೆ ಅವಲಂಬಿತವಾಗಿತ್ತು. ಆದರೆ ದೀರ್ಘಕಾಲ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸುವ ಹಾಗೂ ಬಹುಆಯಾಮದ (Multi-domain) ಅವುಗಳ ಸಾಮರ್ಥ್ಯಗಳು ಸೀಮಿತವಾಗಿದ್ದವು.
ದೇಶೀಯ ನಿರ್ಮಾಣದ ಮಹತ್ವದ ಯೋಜನೆ
ಈ ಕೊರತೆಯನ್ನು ನಿವಾರಿಸಲು 2018ರ ಸೆಪ್ಟೆಂಬರ್‌ನಲ್ಲಿ ಭಾರತೀಯ ನೌಕಾಪಡೆಯು ವಿಶಾಖಪಟ್ಟಣದ ಹಿಂದುಸ್ತಾನ್‌ ಶಿಪ್‌ಯಾರ್ಡ್‌ ಲಿಮಿಟೆಡ್‌ (HSL) ಜೊತೆ ಎರಡು ಡಿಎಸ್‌ವಿ ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಂಡಿತ್ತು. ಈ ಯೋಜನೆಯಡಿ ನಿರ್ಮಿತ ಮೊದಲ ಹಡಗು ಐಎನ್‌ಎಸ್‌ ನಿಸ್ಟಾರ್‌ ಕಳೆದ ವರ್ಷ ಜುಲೈನಲ್ಲಿ ಸೇವೆಗೆ ಸೇರ್ಪಡೆಯಾಗಿತ್ತು. ಇದೀಗ ಎರಡನೇ ಹಡಗು ಐಎನ್‌ಎಸ್‌ ನಿಪುಣ್‌ ಸೇರ್ಪಡೆಯಾಗಿದ್ದು, ದೇಶದ ಜಲಾಂತರ್ಗಾಮಿ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿದೆ.
ಸುಮಾರು 9,000 ಟನ್‌ ತೂಕದ ಈ ಹಡಗು ಆಳಸಮುದ್ರ ಡೈವಿಂಗ್‌ ಹಾಗೂ ಸಮುದ್ರದಲ್ಲಿನ ರಕ್ಷಣಾ ಕಾರ್ಯಾಚರಣೆಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಹಡಗಿನ ಚಿಹ್ನೆಯಲ್ಲಿರುವ  ತಿಮಿಂಗಿಲ – ದೀರ್ಘಕಾಲದ ಆಳಸಮುದ್ರ ಸಹಿಷ್ಣುತೆಯ ಸಂಕೇತವಾದರೆ, ಆಧುನಿಕ ಡೈವಿಂಗ್‌ ಹೆಲ್ಮೆಟ್‌ – ಕಾರ್ಯಾಚರಣೆಯ ಕೇಂದ್ರಬಿಂದುವಾದ ಡೈವರ್‌ನ ಸಂಕೇತ ಎಂದು ನೌಕಾಪಡೆ ಹೇಳಿದೆ.
ಅತ್ಯಾಧುನಿಕ ತಾಂತ್ರಿಕ ಸಾಮರ್ಥ್ಯಗಳು
ಐಎನ್‌ಎಸ್‌ ನಿಪುಣ್‌ನಲ್ಲಿ ಸುಧಾರಿತ ಡೈವಿಂಗ್‌ ವ್ಯವಸ್ಥೆಗಳನ್ನು ಅಳವಡಿಸಲಾಗಿದ್ದು, ಇದು ಡೀಪ್‌ ಸೀ ಸ್ಯಾಚುರೇಷನ್‌ ಡೈವಿಂಗ್‌ (Deep Sea Saturation Diving) ಕಾರ್ಯಾಚರಣೆಗಳನ್ನು ನಡೆಸಬಲ್ಲದು. ಸ್ಯಾಚುರೇಷನ್‌ ಡೈವಿಂಗ್‌ ಎಂದರೆ ಡೈವರ್‌ಗಳು ಹೆಚ್ಚಿನ ಒತ್ತಡದ ವಾತಾವರಣದಲ್ಲಿ ದೀರ್ಘಕಾಲ ಉಳಿದು ಆಳ ಸಮುದ್ರದಲ್ಲಿ ಕೆಲಸ ನಿರ್ವಹಿಸುವ ತಂತ್ರಜ್ಞಾನವಾಗಿದೆ.
ಹಡಗು ಪ್ರಮುಖ ಸೌಲಭ್ಯಗಳಾದ ವಿಶೇಷ ಡೈವಿಂಗ್‌ ಉಪಕರಣಗಳು, ಸೈಡ್‌ ಡೈವಿಂಗ್‌ ಸ್ಟೇಜ್‌, ರಿಮೋಟ್‌ಲಿ ಆಪರೇಟೆಡ್‌ ವೆಹಿಕಲ್‌ಗಳು(ROVs), ಡೈವರ್‌ಗಳ ಮೇಲ್ವಿಚಾರಣಾ ವ್ಯವಸ್ಥೆ, ಸಾಲ್ವೇಜ್‌ ಕಾರ್ಯಾಚರಣಾ ವ್ಯವಸ್ಥೆಗಳು, ಜಲಾಂತರ್ಗಾಮಿ ರಕ್ಷಣಾ ಸಪೋರ್ಟ್‌ ವ್ಯವಸ್ಥೆಗಳನ್ನು ಒಳಗೊಂಡಿವೆ. ರಿಮೋಟ್‌ಲಿ ಆಪರೇಟೆಡ್‌ ವೆಹಿಕಲ್‌ಗಳು ಡೈವರ್‌ಗಳ ಮೇಲ್ವಿಚಾರಣೆ, ಸಮುದ್ರದಡಿಯ ಪರಿಶೀಲನೆ ಹಾಗೂ ಮುಳುಗಿದ ವಸ್ತುಗಳ ಪತ್ತೆ ಮತ್ತು ಮರುಪಡೆಯುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಡಿಎಸ್‌ಆರ್‌ವಿ (DSRV)ಗೆ ‘ಮದರ್‌ ಶಿಪ್‌’
ಐಎನ್‌ಎಸ್‌ ನಿಪುಣ್‌ನ ಅತ್ಯಂತ ಮಹತ್ವದ ಪಾತ್ರವೆಂದರೆ ಇದು ಡೀಪ್‌ ಸಬ್‌ಮರ್ಜೆನ್ಸ್‌ ರೆಸ್ಕ್ಯೂ ವೆಸೆಲ್‌ (DSRV) ಗೆ ‘ಮದರ್‌ ಶಿಪ್‌’ ಆಗಿ ಕಾರ್ಯನಿರ್ವಹಿಸುತ್ತದೆ. ಜಲಾಂತರ್ಗಾಮಿಯಲ್ಲಿ ಅಪಘಾತ ಸಂಭವಿಸಿದಾಗ ಅಥವಾ ತುರ್ತು ಪರಿಸ್ಥಿತಿ ಉದ್ಭವಿಸಿದಾಗ, ಡಿಎಸ್‌ಆರ್‌ವಿ ಸಮುದ್ರದ ಆಳಕ್ಕೆ ತೆರಳಿ ಸಿಲುಕಿರುವ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಬಲ್ಲದು.
ಭಾರತವು 2016ರ ಮಾರ್ಚ್‌ನಲ್ಲಿ ಬ್ರಿಟನ್‌ನ ಜೇಮ್ಸ್‌ ಫಿಶರ್‌ ಡಿಫೆನ್ಸ್‌ ಸಂಸ್ಥೆಯಿಂದ ಎರಡು ಡಿಎಸ್‌ಆರ್‌ವಿ ವ್ಯವಸ್ಥೆಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಡಿಎಸ್‌ಆರ್‌ವಿಗಳ ವಿಶೇಷತೆಯೆಂದರೆ 650 ಮೀಟರ್‌ ಆಳದವರೆಗೆ ರಕ್ಷಣಾ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದ್ದು, ಮೊದಲ ಡಿಎಸ್‌ಆರ್‌ವಿ 2018ರಲ್ಲಿ ಮುಂಬೈಗೆ ಪೂರೈಕೆಯಾಗಿತ್ತು. ಎರಡನೇ ಡಿಎಸ್‌ಆರ್‌ವಿ 2019ರಲ್ಲಿ ವಿಶಾಖಪಟ್ಟಣಕ್ಕೆ ಪೂರೈಕೆಯಾಗಿದೆ.
ಹೈಪರ್‌ಬಾರಿಕ್‌ ಲೈಫ್‌ಬೋಟ್‌ ವಿಶೇಷತೆ
ಐಎನ್‌ಎಸ್‌ ನಿಪುಣ್‌ನಲ್ಲಿ ಸ್ವಯಂ ಚಾಲಿತ ಹೈಪರ್‌ಬಾರಿಕ್‌ ಲೈಫ್‌ಬೋಟ್‌ ಅಳವಡಿಸಲಾಗಿದೆ. ಇದು ಒತ್ತಡ ನಿಯಂತ್ರಿತ (Pressurised) ರಕ್ಷಣಾ ದೋಣಿಯಾಗಿದ್ದು, ಡೈವರ್‌ಗಳನ್ನು ತುರ್ತು ಸಂದರ್ಭಗಳಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸುವ ಸಾಮರ್ಥ್ಯ ಹೊಂದಿದೆ. ಡೈವಿಂಗ್‌ ಕಂಪ್ರೆಷನ್‌ ಚೇಂಬರ್‌ಗಳೊಂದಿಗೆ ಕಾರ್ಯನಿರ್ವಹಿಸುವ ವ್ಯವಸ್ಥೆ ಹಾಗೂ ಸುಧಾರಿತ ನ್ಯಾವಿಗೇಷನ್‌ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆ.
ಹಡಗಿನಲ್ಲಿ  ಅತ್ಯಾಧುನಿಕ ನ್ಯಾವಿಗೇಷನ್‌ ವ್ಯವಸ್ಥೆಗಳು, ಪ್ಲಾಟ್‌ಫಾರ್ಮ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ, ನಿಖರವಾದ ಸ್ಟೇಷನ್‌ ಕೀಪಿಂಗ್‌ ತಂತ್ರಜ್ಞಾನ,
ಜಲಾಂತರ್ಗಾಮಿ ತುರ್ತು ವ್ಯವಸ್ಥೆಗಳು ಹಾಗೂ ವಿಶೇಷ ವೈದ್ಯಕೀಯ ಸಪೋರ್ಟಿಂಗ್‌ ಸೌಲಭ್ಯಗಳನ್ನು ಅಳವಡಿಸಲಾಗಿವೆ. ಇವುಗಳ ನೆರವಿನಿಂದ ನಿಪುಣ್‌ ಸಮುದ್ರದಡಿಯಲ್ಲಿನ ಸಂಕೀರ್ಣ ಕಾರ್ಯಾಚರಣೆಗಳಿಗೆ ಸಮಗ್ರ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.
ಭಾರತದ ಜಲಾಂತರ್ಗಾಮಿ ಭದ್ರತೆಗೆ ಹೊಸ ಆಯಾಮ
ನೌಕಾ ತಜ್ಞರ ಪ್ರಕಾರ, ಡಿಎಸ್‌ವಿ ಹಡಗುಗಳ ಮಹತ್ವ ಕೇವಲ ಡೈವಿಂಗ್‌ ಕಾರ್ಯಾಚರಣೆಗಳಿಗೆ ಸೀಮಿತವಲ್ಲ. ಹಿಂದೂ ಮಹಾಸಾಗರದಂತಹ ವಿಶಾಲ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಭಾರತೀಯ ನೌಕಾಪಡೆಗೆ ಸಮುದ್ರದಡಿಯ ದೀರ್ಘಕಾಲದ ಕಾರ್ಯಾಚರಣೆಗಳನ್ನು ನಿರ್ವಹಿಸುವ ಸಾಮರ್ಥ್ಯವು ರಾಷ್ಟ್ರೀಯ ಸಮುದ್ರ ಭದ್ರತೆಯ ಪ್ರಮುಖ ಅಂಶವಾಗಿದೆ. ಜಲಾಂತರ್ಗಾಮಿ ನೌಕೆಗೆ ಅಪಘಾತ ಸಂಭವಿಸಿದರೆ, ಪ್ರತಿ ನಿಮಿಷವೂ ಅಮೂಲ್ಯವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಡಿಎಸ್‌ವಿ ಮತ್ತು ಡಿಎಸ್‌ಆರ್‌ವಿ ಸಂಯೋಜನೆ ಜೀವ ರಕ್ಷಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
ಪ್ರಾದೇಶಿಕ ಹಾಗೂ ಜಾಗತಿಕ ಮಟ್ಟದ ಪಾತ್ರ
ದೇಶೀಯವಾಗಿ ನಿರ್ಮಿತ ಡಿಎಸ್‌ವಿ ಹಡಗುಗಳ ಸೇರ್ಪಡೆಯಿಂದ ಭಾರತವು ಜಲಾಂತರ್ಗಾಮಿ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ವಿಶೇಷ ಪರಿಣತಿ ಸಾಧಿಸುತ್ತಿದೆ. ಮತ್ತು ಉಪಕರಣಗಳನ್ನು ದೇಶದಲ್ಲೇ ಅಭಿವೃದ್ಧಿಪಡಿಸುತ್ತಿದೆ. ದೇಶವು ಪ್ರಾದೇಶಿಕ ರಾಷ್ಟ್ರಗಳಿಗೆ ಜಲಾಂತರ್ಗಾಮಿ ರಕ್ಷಣಾ ನೆರವು ನೀಡುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವರ್ಷ ನಡೆದ ‘ಎಕ್ಸರ್‌ಸೈಸ್‌ ಪೆಸಿಫಿಕ್‌ ರೀಚ್‌ 2025’ ಅಭ್ಯಾಸದಲ್ಲಿ ಐಎನ್‌ಎಸ್‌ ನಿಸ್ಟಾರ್‌ ಭಾಗವಹಿಸಿ, ಅಂತಾರಾಷ್ಟ್ರೀಯ ಜಲಾಂತರ್ಗಾಮಿ ರಕ್ಷಣಾ ಕಾರ್ಯಾಚರಣೆಗಳು ಹಾಗೂ ವಿವಿಧ ನೌಕಾಪಡೆಗಳ ನಡುವಿನ ಸಹಕಾರ ಸಾಮರ್ಥ್ಯವನ್ನು ಯಶಸ್ವಿಯಾಗಿ ಪ್ರದರ್ಶಿಸಿತ್ತು.
ಐಎನ್‌ಎಸ್‌ ನಿಪುಣ್‌ ಸೇರ್ಪಡೆಯೊಂದಿಗೆ ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ರಕ್ಷಣಾ ಮತ್ತು ಆಳಸಮುದ್ರ ಕಾರ್ಯಾಚರಣಾ ಸಾಮರ್ಥ್ಯವು ಹೊಸ ಎತ್ತರಕ್ಕೇರಿದ್ದು, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಸಮುದ್ರ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement