ಬೆಂಗಳೂರು : ತುರ್ತು ವಿಚಾರಣೆಗೆ ಕೋರಿದ್ದ 250ಕ್ಕೂ ಹೆಚ್ಚು ಅರ್ಜಿಗಳನ್ನು ಬುಧವಾರ ವಿಚಾರಣೆ ನಡೆಸುವ ಮೂಲಕ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಇದೇ ಮೊದಲ ಬಾರಿಗೆ ಹೈಕೋರ್ಟ್ ಕಲಾಪಗಳ ಇತಿಹಾಸದಲ್ಲೇ ಹೊಸ ದಾಖಲೆ ಬರೆದರು. ಅವರು ಒಟ್ಟು 550ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ನಡೆಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಬುಧವಾರ (ಸೆಪ್ಟೆಂಬರ್ 2) ಬೆಳಿಗ್ಗೆ ಎಂದಿನ ಕಲಾಪದಲ್ಲಿ ತುರ್ತು ವಿಚಾರಣೆಗೆ ಕೋರಲಾದ 250ಕ್ಕೂ ಹೆಚ್ಚು ಮೆಮೊ ಸ್ವೀಕರಿಸಿ ಅವುಗಳನ್ನು ಮಧ್ಯಾಹ್ನದ ಕಲಾಪ ಪಟ್ಟಿಗೆ ಅಣಿಗೊಳಿಸುವಂತೆ ಆದೇಶಿಸಿದರು. ಬೆಳಗಿನ ಕಲಾಪದಲ್ಲಿ ಎಂದಿನಂತೆ ನಿಗದಿಯಾಗಿದ್ದ 318 ಅರ್ಜಿಗಳ ವಿಚಾರಣೆ ಪೂರೈಸಿದ ಅವರು ಭೋಜನ ಸಮಯದ ನಂತರ 2:30ಕ್ಕೆ ಆರಂಭಿಸಿದ ಕಲಾಪವನ್ನು ರಾತ್ರಿ 8:07ಕ್ಕೆ ಮುಕ್ತಾಯ ಗೊಳಿಸಿದರು.
ನ್ಯಾ.ಎಂ.ನಾಗಪ್ರಸನ್ನ ಅವರ ಪೀಠದ ವಿಚಾರಣಾ ಪಟ್ಟಿಯಲ್ಲಿ ಬುಧವಾರ 318 ಅರ್ಜಿಗಳ ವಿಚಾರಣೆಗೆ ನಿಗದಿಯಾಗಿತ್ತು. ಬೆಳಗ್ಗೆ ವಕೀಲರು ತಮ್ಮ ಅರ್ಜಿಗಳ ತುರ್ತು ವಿಚಾರಣೆಗೆ ತೆಗೆದುಕೊಳ್ಳುವಂತೆ ಕೋರಿ 240ಕ್ಕೂ ಹೆಚ್ಚು ಮೊಮೊ ಸಲ್ಲಿಸಿದರು. ಆ ಮೆಮೊಗಳನ್ನು ಸ್ವೀಕರಿಸಿದ ನ್ಯಾಯಮೂರ್ತಿಗಳು, ಅಷ್ಟೂ ಅರ್ಜಿಗಳನ್ನು ಮಧ್ಯಾಹ್ನದ ಕಲಾಪದಲ್ಲಿ ವಿಚಾರಣೆಗೆ ನಿಗದಿಪಡಿಸುವಂತೆ ಕೋರ್ಟ್ ಆಫೀಸರ್‌ಗೆ ಸೂಚಿಸಿದರು. ಅದರೊಂದಿಗೆ 558 ಅರ್ಜಿಗಳನ್ನು (ತಕರಾರು ಮತ್ತು ಕ್ರಿಮಿನಲ್) ವಿಚಾರಣೆಗೆ ನಿಗದಿಯಾದವು.
ಒಂದು ದಿನದ ಕಲಾಪದ ಅವಧಿಯಲ್ಲಿ ಒಟ್ಟು 534 ರಿಟ್ ಮತ್ತು ಕ್ರಿಮಿನಲ್ ಅರ್ಜಿಗಳ ವಿಚಾರಣೆ ಪೂರೈಸಿ ಅವುಗಳಲ್ಲಿ ಒಟ್ಟು 85 ಅರ್ಜಿಗಳನ್ನು ವಿಲೇವಾರಿ ಮಾಡಿದರು.
ದಿನದ ಕಲಾಪವು ಸಂಜೆ 4:30ಕ್ಕೆ ಮುಗಿದರೂ, ನ್ಯಾಯಮೂರ್ತಿಗಳು ಹೆಚ್ಚುವರಿಯಾಗಿ ಮೂರೂವರೆ ಗಂಟೆ ಕಾಲ ಕಲಾಪ ನಡೆಸಿದರು. ನ್ಯಾ.ನಾಗಪ್ರಸನ್ನ ಅವರು ವಕೀಲ ವೃಂದದಿಂದ ನೇರವಾಗಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ 2019ರ ನವೆಂಬರ್‌ನಲ್ಲಿ ನೇಮಕಗೊಂಡ ನಂತರ ಪ್ರಕರಣಗಳ ವಿಲೇವಾರಿಯಲ್ಲಿ ವಿನೂತನ ದಾಖಲೆಗಳನ್ನು ನಿರ್ಮಿಸುತ್ತಿರುವುದು ಗಮನಾರ್ಹವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ