ಅಕ್ಷರ ಸೇವೆಯ ಅಪ್ರತಿಮ ಸಾಧಕ ಪ್ರೊಫೆಸರ್‌ ‘ಯಾದವಾಡ ಸರ್’

(ಶನಿವಾರ , ಸೆಪ್ಟಂಬರ್‌ ೫ರಂದು ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಲೇಖನ)
೬೬ ವರ್ಷ ವಯಸ್ಸಿನ ಶಿಕ್ಷಣ ತಜ್ಞರಾದ ಡಾ. ಸುಭಾಸ ಬಸಪ್ಪ ಯಾದವಾಡ (ಜನನ: ೦೧-೦೬-೧೯೬೦) ಅವರು ಕಳೆದ ನಾಲ್ಕು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹಾಗೂ ತಮ್ಮದೇ ಆದ ಕೊಡುಗೆಗಳನ್ನು ನೀಡುವ ಮೂಲಕ ‘ಯಾದವಾಡ ಸರ್’ ಎಂದೇ ಪ್ರಸಿದ್ಧರಾಗಿದ್ದಾರೆ.
ಸದ್ಯ ಹುಬ್ಬಳ್ಳಿಯ ಉಣಕಲ್ ಶ್ರೀನಗರ ಕ್ರಾಸ್‌ನಲ್ಲಿ ವಾಸವಾಗಿರುವ ಇವರು, ೯ನೇ ತರಗತಿಯ ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಮಂಡಿಸಿದ ಪ್ರಬಂಧಕ್ಕೆ ಪಿಎಚ್.ಡಿ. ಪದವಿಯನ್ನೂ ಪಡೆದಿದ್ದಾರೆ. ಗಣಿತ, ವಿಜ್ಞಾನ, ಶಿಕ್ಷಕರ ತರಬೇತಿ ಶಿಕ್ಷಣ, ಶಿಕ್ಷಣ ಬೋಧನೆಯ ಆಯೋಜನೆ ಮತ್ತು ಹಣಕಾಸು ನಿರ್ವಹಣೆ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಸಂಶೋಧನೆ, ಪರಿಸರ ಶಿಕ್ಷಣ, ಭಾರತದಲ್ಲಿ ಹೊರಹೊಮ್ಮುತ್ತಿರುವ ಹೊಸ ಶಿಕ್ಷಣದ ಆಯಾಮಗಳು ಮೊದಲಾದ ವಿಷಯಗಳ ಬಗ್ಗೆ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡು ಕೆಲಸ ಮಾಡುತ್ತಿದ್ದಾರೆ.
ಇವರ ಮಾರ್ಗದರ್ಶನದಲ್ಲಿ ೨೦ ವಿದ್ಯಾರ್ಥಿಗಳು ಎಂ.ಫಿಲ್. ಪದವಿ ಪಡೆದಿದ್ದಾರೆ. ಜತೆಗೆ ೨೫ಕ್ಕೂ ಹೆಚ್ಚು ಎಂ.ಇಡಿ. ವಿದ್ಯಾರ್ಥಿಗಳಿಗೆ ಡಿಸರ್ಟೇಷನ್ (ಕಿರು ಪ್ರಬಂಧ) ಮಂಡಿಸಲು ನೆರವಾಗಿದ್ದಾರೆ. ಹಲವಾರು ವಿದ್ಯಾರ್ಥಿಗಳಿಗೆ ಸಕ್ರಿಯ ಸಂಶೋಧನೆಗೆ ಸಂಬಂಧಪಟ್ಟಂತೆ ಮಾರ್ಗದರ್ಶನ ಮಾಡಿದ್ದಾರೆ. ೯ ಸಂಶೋಧನಾ (ಪಿಎಚ್.ಡಿ.) ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದು, ಈ ಪೈಕಿ ಮೂವರು ಈಗಾಗಲೇ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇವರ ೧೧೧ಕ್ಕೂ ಹೆಚ್ಚಿನ ಗ್ರಂಥಗಳು ಪ್ರಕಟವಾಗಿವೆ.
ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಇವರು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಅದರಲ್ಲೂ ವಿಶೇಷವಾಗಿ ಬಿ.ಇಡಿ. ಮತ್ತು ಎಂ.ಇಡಿ. ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಓದಲು ಸಹಕಾರಿಯಾಗುವ ಸುಮಾರು ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದು, ಅವು ವಿದ್ಯಾರ್ಥಿಗಳ ಅಧ್ಯಯನಕ್ಕೆ ನೆರವಾಗುತ್ತಿವೆ. ಇವುಗಳಲ್ಲಿ ಅನೇಕ ಪುಸ್ತಕಗಳು ಎರಡು ಮತ್ತು ಮೂರನೇ ಮುದ್ರಣವನ್ನು ಕಂಡಿರುವುದು ವಿಶೇಷವಾಗಿದೆ. ಇದಲ್ಲದೇ ಬೋಧನೆಯಲ್ಲಿ ನಾವೀನ್ಯತೆ ತರುವ ನಿಟ್ಟಿನಲ್ಲಿ ಬೋಧನಾ ಕ್ರಮವನ್ನು ಅಭಿವೃದ್ಧಿಪಡಿಸುವುದು, ಬೆಳೆಯುತ್ತಿರುವ ಭಾರತದಲ್ಲಿ ಶಿಕ್ಷಣ ಹೇಗಿರಬೇಕೆಂಬ ಬಗ್ಗೆ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸುವುದು, ಪರಿಸರ ಶಿಕ್ಷಣಕ್ಕೆ ಸಂಬಂಧಿಸಿದ ಪಠ್ಯಕ್ರಮದಲ್ಲಿ ವಿನೂತನತೆ ತರುವುದು, ಶಿಕ್ಷಣ ವ್ಯವಸ್ಥೆಯ ನಿರ್ವಹಣೆಗೆ ಸಂಬಂಧಿಸಿದಂತೆ ಅಮೂಲ್ಯವಾದ ಸಲಹೆಗಳನ್ನು ನೀಡುವುದು – ಹೀಗೆ ಹಲವು ರಂಗಗಳಲ್ಲಿ ಡಾ. ಯಾದವಾಡ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ಮಾಡುತ್ತಿದ್ದಾರೆ.

ಪ್ರಮುಖ ಸುದ್ದಿ :-   ಆರ್‌ಜಿ ಕರ್ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ : ಸಾಕ್ಷ್ಯ ನಾಶ ಆರೋಪ ಹೊತ್ತ ಪಾಣಿಹಟಿ ಪುರಸಭೆ ಮಾಜಿ ಅಧ್ಯಕ್ಷ ಬೆಂಗಳೂರಲ್ಲಿ ಬಂಧನ

ಶೈಕ್ಷಣಿಕ ಅನುಭವ:
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ (ಅಕಾಡೆಮಿಕ್ ಕೌನ್ಸಿಲ್), ಸೆನೆಟ್ ಸದಸ್ಯರಾಗಿ, ಬಿ.ಇಡಿ. ಕಾಲೇಜುಗಳ ಸ್ಥಳೀಯ ವಿಚಾರಣಾ ಸಮಿತಿ (ಎಲ್‌ಐಸಿ)ಗಳ ಸದಸ್ಯರಾಗಿ, ಬಾಗಲಕೋಟೆ ಜಿಲ್ಲೆಯ ಪದವಿ ಕಾಲೇಜುಗಳ ಸ್ಥಳೀಯ ವಿಚಾರಣಾ ಸಮಿತಿಗಳ ಸದಸ್ಯರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ವಿಚಕ್ಷಣಾ ದಳದ ಸದಸ್ಯರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಪರೀಕ್ಷಾ ಮಂಡಳಿಯ ಸದಸ್ಯರಾಗಿ, ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾ ಮಂಡಳಿಯ ಸದಸ್ಯರಾಗಿ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಸಮನ್ವಯ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಡಾ. ಯಾದವಾಡ ಅವರು ‘ಕೌನ್ಸಿಲ್ ಆಫ್ ಟೀಚರ್ಸ್ ಎಜುಕೇಶನ್’, IATE ಗಳ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಟೀಚರ್-ಎಜುುಕೇಟರ್ಸ್ ಅಸೋಸಿಯೇಷನ್‌ನ ಕಾರ್ಯದರ್ಶಿಯಾಗಿರುವ ಡಾ. ಯಾದವಾಡ ಅವರು, ಹಾನಗಲ್‌ನ ಜವಾಹರ ನವೋದಯ ವಿದ್ಯಾಲಯದ ಸಲಹಾ ಮಂಡಳಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಪ್ರಶಸ್ತಿ-ಪುರಸ್ಕಾರಗಳು:
ಡಾ. ಸುಭಾಸ ಯಾದವಾಡ ಅವರಿಗೆ ನವದೆಹಲಿಯ ಇಂಡಿಯಾ ಇಂಟರ್‌ನ್ಯಾಷನಲ್ ಫ್ರೆಂಡ್‌ಷಿಪ್ ಸೊಸೈಟಿಯಿಂದ ‘ವಿಕಾಸ ರತ್ನ’, ನವದೆಹಲಿಯ ಇಂಟರ್‌ನ್ಯಾಷನಲ್ ಪಬ್ಲಿಷಿಂಗ್ ಹೌಸ್‌ನಿಂದ ‘ಬೆಸ್ಟ್ ಸಿಟಿಜನ್ ಆಫ್ ಇಂಡಿಯಾ’ ಪ್ರಶಸ್ತಿಗಳು ಲಭಿಸಿವೆ. ಅಲ್ಲದೇ ಹಾನಗಲ್‌ನ ಕುಮಾರಸ್ವಾಮಿಗಳ ಪುಣ್ಯಸ್ಮರಣೋತ್ಸವ ಸಮಿತಿಯ ವತಿಯಿಂದ ೭೦ನೇ ವರ್ಷಾಚರಣೆಯ ಸಂದರ್ಭದಲ್ಲಿ ಇವರಿಗೆ ಸನ್ಮಾನ ಮಾಡಲಾಗಿದೆ. ಬೆಂಗಳೂರಿನ ಸಾಗರ ಸಂಗಮ ಸಂಸ್ಥೆಯಿಂದ ‘ಸರಸ್ವತಿ ಸಮ್ಮಾನ’, ವಿಜಯಪುರ ಜಿಲ್ಲೆಯ ಆಹೇರಿಯ ‘ಬಸವಜ್ಯೋತಿ’ ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ.
ಡಾ. ಯಾದವಾಡ ಅವರು ‘ಡೈಮೆನ್ಷನ್ಸ್ ಆಫ್ ಎಜುಕೇಶನ್’ ಎಂಬ ತ್ರೈಮಾಸಿಕ ಪತ್ರಿಕೆಯ ಸಹ-ಸಂಪಾದಕರಾಗಿ ಹಾಗೂ ‘ಶಿಕ್ಷಣ ಸೌಧ’ ಎಂಬ ಕನ್ನಡ ತ್ರೈಮಾಸಿಕ ಪತ್ರಿಕೆಯ ಸಹ-ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ-2026 ಪ್ರಕಟ : ಪಟ್ಟಿ ಇಲ್ಲಿದೆ

ಡಾ. ಯಾದವಾಡ ಅವರು ಇದುವರೆಗೆ ಸುಮಾರು ೨೫ಕ್ಕೂ ಹೆಚ್ಚು ರಾಷ್ಟ್ರಮಟ್ಟದ ಹಾಗೂ ರಾಜ್ಯಮಟ್ಟದ ವಿಚಾರಸಂಕಿರಣಗಳಲ್ಲಿ ಭಾಗವಹಿಸಿದ್ದು, ಪದವಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸುಮಾರು ೩೦ ವರ್ಷಗಳು ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸುಮಾರು ಎಂಟು ವರ್ಷಗಳ ಅನುಭವವನ್ನು ಹೊಂದಿದ್ದಾರೆ.
೧೯೮೭ರ ಆಗಸ್ಟ್ ೧ರಂದು ಗದಗದ ಜೆ.ಪಿ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದ ಇವರು, ವಿಜಯಪುರದ ಬಿಎಲ್‌ಡಿ‌ಇ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೆಲೆಕ್ಷನ್ ಸ್ಕೇಲ್ ಉಪನ್ಯಾಸಕರಾಗಿ, ಹಾನಗಲ್ ಪಟ್ಟಣದ ಎಸ್‌ಕೆಸಿಇ ಕಾಲೇಜಿನ, ಬಾಗಲಕೋಟೆಯ ಬಿವಿವಿ ಶಿಕ್ಷಣ ಮಹಾವಿದ್ಯಾಲಯದ, ಗದಗದ ಜೆಟಿವಿಪಿ ಶಿಕ್ಷಣ ಸಂಸ್ಥೆಯ ಡಾ. ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯದ ಮತ್ತು ಧಾರವಾಡದ ಸತ್ತೂರಿನ ವಿ.ಎಚ್. ಮರದ ಎಂ.ಇಡಿ. ಮತ್ತು ಗ್ರಾಮೀಣ ಬಿ.ಇಡಿ. ಕಾಲೇಜಿನ ಪ್ರಾಚಾರ್ಯರಾಗಿ ಸುದೀರ್ಘವಾದ ಸೇವೆ ಸಲ್ಲಿಸಿದ್ದಾರೆ.
ತಂದೆ ಬಸಪ್ಪ, ತಾಯಿ ಸುಶೀಲಾ, ಪತ್ನಿ ಶಶಿಕಲಾ, ಗಣಿತ ಶಾಸ್ತ್ರದ ಉಪನ್ಯಾಸಕಿಯಾಗಿರುವ ಮಗಳು ಐಶ್ವರ್ಯಾ, ಹಾಗೂ ಮಗ ವರುಣ ಅವರನ್ನು ಸದಾ ಸ್ಮರಿಸುತ್ತಾರೆ. ಅವರ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದ ಹಲವಾರು ವಿದ್ಯಾರ್ಥಿಗಳು ಶಿಕ್ಷಕರಾಗಿ ರಾಜ್ಯಾದ್ಯಂತ ಸೇವೆ ಸಲ್ಲಿಸುತ್ತಿದ್ದಾರೆ. ಶಿಸ್ತು ಹಾಗೂ ಸಮಯ ಪ್ರಜ್ಞೆಯನ್ನು ಅಳವಡಿಸಿಕೊಂಡಿರುವ ಡಾ. ಯಾದವಾಡ ಅವರು ಶಿಕ್ಷಕರಿಗೆಲ್ಲಾ ಮಾದರಿಯಾಗಿದ್ದಾರೆ.
ಡಾ. ಯಾದವಾಡ ಅವರು ಮೊದಲಿನಂತೆ ಗುರು-ಕುಲ ಪದ್ಧತಿ ಜಾರಿಗೆ ಬರಬೇಕು, ಪರೀಕ್ಷಾ ಪದ್ಧತಿಗಳಲ್ಲಿ ಸುಧಾರಣೆಯಾಗಬೇಕು, ಶಿಕ್ಷಕರಿಗೆ ಬೋಧನೆ ಹೊರತಾಗಿ ಇಂದು ಬೇರೆ ಬೇರೆ ಕಾರ್ಯಗಳನ್ನು ವಹಿಸುತ್ತಿದ್ದು ಅವರನ್ನು ಶೈಕ್ಷಣಿಕ ಪ್ರಗತಿಗೆ ಹೆಚ್ಚು ಉಪಯೋಗಿಸಬೇಕು ಮತ್ತು ಶಿಕ್ಷಕರಿಗೆ ಇನ್ನೂ ಹೆಚ್ಚಿನ ಸವಲತ್ತುಗಳನ್ನು ಕಲ್ಪಿಸಬೇಕೆಂದು ಅಭಿಪ್ರಾಯಪಡುತ್ತಾರೆ.
-ಡಾ. ಬಿ. ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು-ಹುಬ್ಬಳ್ಳಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement