ಕಾಶ್ಮೀರ : ಎನ್‌ಕೌಂಟರ್‌ನಲ್ಲಿ ಲಷ್ಕರ್ ಉಗ್ರ ಸಂಘಟನೆ ಕಮಾಂಡರನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರ : ಜಮ್ಮು-ಕಾಶ್ಮೀರದ ಬುಡ್ಗಾಂ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (LeT) ಉಗ್ರ ಸಂಘಟನೆಯ ಕಮಾಂಡರ್ ಯಾಸಿರ್ ಹತ್ಯೆಯಾಗಿದ್ದಾನೆ.
“ಆಪರೇಷನ್ ಅಶ್ದಾರ್” ವೇಳೆ ಹತನಾದ ಉಗ್ರನನ್ನು ಲಷ್ಕರ್-ಎ-ತೊಯ್ಬಾ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಪಾಕಿಸ್ತಾನಿ ಪ್ರಜೆ ಯಾಸಿರ್ ಎಂದು ಜಮ್ಮು-ಕಾಶ್ಮೀರ ಪೊಲೀಸರು ‘ಎಕ್ಸ್’ (X) ಸಾಮಾಜಿಕ ಜಾಲತಾಣದಲ್ಲಿ ದೃಢಪಡಿಸಿದ್ದಾರೆ.
ಭಯೋತ್ಪಾದಕರು ಅಡಗಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ವಿಶೇಷ ಪಡೆಗಳು (Special Forces) ಹಾಗೂ 53 ರಾಷ್ಟ್ರಿಯ ರೈಫಲ್ಸ್ (Rashtriya Rifles) ಒಳಗೊಂಡ ಜಂಟಿ ತಂಡವು ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ ಯಾಸಿರ್ ಹತನಾಗಿದ್ದಾನೆ.

ಯಾರು ಈ ಯಾಸಿರ್?
ವರದಿಗಳ ಪ್ರಕಾರ, ಯಾಸಿರ್ ಆರಂಭದಲ್ಲಿ ಲಷ್ಕರ್-ಎ-ತೊಯ್ಬಾದ ಕುಖ್ಯಾತ ಸುಲೈಮಾನ್ ಮೂಸಾ ಗುಂಪಿನ ಸದಸ್ಯನಾಗಿದ್ದ. ಆದರೆ ಸುಮಾರು ಒಂದು ವರ್ಷದ ಹಿಂದೆ ಆತ ಗುಂಪಿನಿಂದ ಬೇರ್ಪಟ್ಟು ಸ್ವತಂತ್ರವಾಗಿ ಕಾರ್ಯಾಚರಣೆ ನಡೆಸಲು ಆರಂಭಿಸಿದ್ದ. ಭದ್ರತಾ ಸಂಸ್ಥೆಗಳು ಯಾಸಿರ್‌ನ ಚಟುವಟಿಕೆಗಳ ಮೇಲೆ ನಿರಂತರ ನಿಗಾ ಇಟ್ಟಿದ್ದವು. ವಿಶೇಷವಾಗಿ ಬುಡ್ಗಾಂ ಜಿಲ್ಲೆಯ ಯೂಸ್ಮಾರ್ಗ್ (Yusmarg) ಪ್ರದೇಶದಲ್ಲಿ ಆತನ ಚಲನವಲನಗಳನ್ನು ಕೆಲವು ಸಮಯದಿಂದಲೇ ಗಮನಿಸಲಾಗುತ್ತಿತ್ತು. ಸುಲೈಮಾನ್ ಮೂಸಾ ಗುಂಪಿನಿಂದ ಪ್ರತ್ಯೇಕವಾದ ಬಳಿಕ ಯಾಸಿರ್ ಆ ಭಾಗದಲ್ಲಿ ಲಷ್ಕರ್ ಸಂಘಟನೆಯ ಪ್ರಮುಖ ಕಾರ್ಯಕರ್ತನಾಗಿ ಹೊರಹೊಮ್ಮಿದ್ದ ಎನ್ನಲಾಗಿದೆ.
ಯೂಸ್ಮಾರ್ಗ್‌ನ ಎತ್ತರದ ಪ್ರದೇಶಗಳಲ್ಲಿ ಯಾಸಿರ್‌ನ ಉಪಸ್ಥಿತಿ ಕಂಡುಬಂದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದ್ದು, ಅದು ಅಂತಿಮವಾಗಿ ಎನ್‌ಕೌಂಟರ್‌ಗೆ ಕಾರಣವಾಯಿತು.

ಪ್ರಮುಖ ಸುದ್ದಿ :-   ವಿಡಿಯೊ | ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಕಾಮುಕ ; ಆತನಿಗೆ ಕಚ್ಚಿ-ಓಡಿಸಿ ಮಹಿಳೆ ರಕ್ಷಿಸಿದ ಬೀದಿನಾಯಿಗಳು!

ಯಾಸಿರ್‌  ಜಾಲದ ತನಿಖೆ
ಯಾಸಿರ್ ಹತ್ಯೆಯಾದ ಬಳಿಕ ಆತನ ಸಂಪರ್ಕ ಜಾಲ, ಇತರ ಲಷ್ಕರ್ ಉಗ್ರರೊಂದಿಗಿನ ನಂಟು ಹಾಗೂ ಪ್ರದೇಶದಲ್ಲಿ ಆತ ನಡೆಸುತ್ತಿದ್ದ ಚಟುವಟಿಕೆಗಳ ಕುರಿತು ತನಿಖೆ ತೀವ್ರಗೊಳಿಸಲಾಗಿದೆ. ಇತ್ತೀಚಿನ ಉಗ್ರ ಚಟುವಟಿಕೆಗಳ ಯೋಜನೆ, ಅನುಷ್ಠಾನ ಅಥವಾ ನೆರವು ನೀಡುವಲ್ಲಿ ಯಾಸಿರ್ ಯಾವುದೇ ಪಾತ್ರ ವಹಿಸಿದ್ದಾನೆಯೇ ಎಂಬುದನ್ನೂ ಭದ್ರತಾ ಸಂಸ್ಥೆಗಳು ಪರಿಶೀಲಿಸುತ್ತಿವೆ.
ಸುಲೈಮಾನ್ ಮೂಸಾ ಯಾರು?
ಹಾಶಿಂ ಮೂಸಾ ಎಂದೂ ಪರಿಚಿತನಾಗಿದ್ದ ಸುಲೈಮಾನ್ ಮೂಸಾ, 2025ರಲ್ಲಿ ನಡೆದ ಪಹಲ್ಗಾಮ್ ಉಗ್ರ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾಗಿದ್ದ. ಆ ದಾಳಿಯ ಕೆಲವು ತಿಂಗಳ ಬಳಿಕ ಶ್ರೀನಗರದ ದಾಚಿಗಾಮ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಆತನನ್ನು ಹೊಡೆದುರುಳಿಸಲಾಗಿತ್ತು.

ಅಶ್ದಾರ್ ಗಲಿ ಪ್ರದೇಶದಲ್ಲಿ ಮತ್ತೊಬ್ಬ ಉಗ್ರ ಹತ
ಶುಕ್ರವಾರ ಬುಡ್ಗಾಂ ಜಿಲ್ಲೆಯ ಅಶ್ದಾರ್ ಗಲಿ ಅರಣ್ಯ ಪ್ರದೇಶದಲ್ಲಿ ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದವು. ಪುಲ್ವಾಮಾ ಜಿಲ್ಲೆಯ ಪಖೇರ್ಪೋರಾ ಪ್ರದೇಶದಿಂದ ಉಗ್ರರ ಗುಂಪೊಂದು ಬುಡ್ಗಾಂನ ಯೂಸ್ಮಾರ್ಗ್ ಕಡೆಗೆ ಚಲಿಸುತ್ತಿದೆ ಎಂಬ ಗುಪ್ತಚರ ಮಾಹಿತಿ ದೊರೆತಿತ್ತು.
ಈ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದವು. ಕಾರ್ಯಾಚರಣೆಯ ವೇಳೆ ಅನುಮಾನಾಸ್ಪದ ಚಲನವಲನ ಕಂಡುಬಂದ ಹಿನ್ನೆಲೆಯಲ್ಲಿ ಯೋಧರು ಉಗ್ರರನ್ನು ಶರಣಾಗಲು ಸೂಚಿಸಿದರು.
ಆದರೆ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ ಎರಡೂ ಕಡೆಯ ನಡುವೆ ತೀವ್ರ ಗುಂಡಿನ ಚಕಮಕಿ ನಡೆಯಿತು. ಈ ಗುಂಡಿನ ಕಾಳಗದಲ್ಲಿ ಒಬ್ಬ ಉಗ್ರನನ್ನು ಹೊಡೆದುರುಳಿಸಲಾಯಿತು. ಎನ್‌ಕೌಂಟರ್ ಸ್ಥಳದಿಂದ ಒಂದು ಎಕೆ-47 ರೈಫಲ್ ಕೂಡ ವಶಪಡಿಸಿಕೊಳ್ಳಲಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಗಳನ್ನು ಭದ್ರತಾ ಪಡೆಗಳು ಮತ್ತಷ್ಟು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಈ ಎನ್‌ಕೌಂಟರ್ ಮಹತ್ವದ ಯಶಸ್ಸಾಗಿ ಪರಿಗಣಿಸಲಾಗಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಚಿನ್ನದ ಉಂಗುರಗಳಿದ್ದ ಪೆಟ್ಟಿಗೆಯೊಂದಿಗೆ ಮಹಿಳೆ ಪರಾರಿ ; ಬೆನ್ನಟ್ಟಿ ಹಿಡಿದ ಚಿನ್ನಾಭರಣ ಅಂಗಡಿ ಮಾಲೀಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement