ಯಲ್ಲಾಪುರ : ಅರಬೈಲ್​ ಘಟ್ಟದಲ್ಲಿ ಭೀಕರ ಅಪಘಾತ: ತಾಯಿ-ಮಗಳು ಸಾವು

ಕಾರವಾರ : ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗಳು ಸಾವಿಗೀಡಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ.
ಕಾರೊಂದು ಎರಡು ಲಾರಿಗಳ ನಡುವೆ ಸಿಲುಕಿ ಸಂಪೂರ್ಣವಾಗಿ ಜಖಂಗೊಂಡಿದ್ದು, ಕಾರಿನಲ್ಲಿದ್ದ ಮಹಾರಾಷ್ಟ್ರದ ಪುಣೆ ಮೂಲದ ತಾಯಿ ಹಾಗೂ ಮಗಳು ಮೃತಪಟ್ಟಿದ್ದಾರೆ. ಕಾರು ಚಾಲಕ ಗಾಯಗೊಂಡಿದ್ದಾರೆ.
ಭಾನುವಾರ ರಾತ್ರಿ ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಪ್ರವಾಸಕ್ಕೆಂದು ಬಂದಿದ್ದ ಪುಣೆಯ ಹಡಪ್ಸರ್‌ನ ತ್ರಿವೇಣಿ ನಗರದ ನಿವಾಸಿಗಳಾದ 59 ವರ್ಷದ ಶರ್ಮಿಳಾ ರಾಜನ್ ಕುಲ್ತೆ ಹಾಗೂ 32 ವರ್ಷದ ಮಗಳು ಮೃಣ್ಮಯಿ ರಾಜನ್ ಕುಲ್ತೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹೊಸಪೇಟೆ ಮೂಲದ 55 ವರ್ಷದ ಕಾರು ಚಾಲಕ ಆಲಂ ಬಾಷಾ ಗಾಯಗೊಂಡಿದ್ದಾರೆ.

ತಾಯಿ ಮಗಳು ರಾಜ್ಯದ ಬಾದಾಮಿ ಸೇರಿದಂತೆ ಇತರ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಆಗಮಿಸಿದ್ದರು. ಹೊಸಪೇಟೆಯಿಂದ ಕಾರನ್ನು ಬಾಡಿಗೆ ಪಡೆದು ಗೋಕರ್ಣದತ್ತ ಹೋಗುವಾಗ ಭಾನುವಾರ ರಾತ್ರಿ ಕಾರು ಯಲ್ಲಾಪುರ ತಾಲೂಕಿನ ಅರಬೈಲ್​ ಘಟ್ಟದ ಬಳಿ ತಲುಪುತ್ತಿದ್ದಾಗ, ಯಲ್ಲಾಪುರದಿಂದ ಅಂಕೋಲಾ ಕಡೆಗೆ ವೇಗವಾಗಿ ಬಂದ ಲಾರಿ ಕಾರಿಗೆ ಹಿಂದಿನಿಂದ ಬಲವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರು ಮುಂದಿದ್ದ ಮತ್ತೊಂದು ಲಾರಿ ಅಪ್ಪಳಿಸಿ ಎರಡು ಬೃಹತ್ ವಾಹನಗಳ ಮಧ್ಯೆ ಸಿಲುಕಿ ಅಪ್ಪಚ್ಚಿಯಾಗಿದೆ. ಈ ಭೀಕರ ಸರಣಿ ಅಪಘಾತದ ವೇಳೆ ಸಮೀಪದಲ್ಲಿದ್ದ ಮತ್ತೊಂದು ಕಾರಿಗೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಪ್ರಮುಖ ಸುದ್ದಿ :-   ಬೇಲೂರು: ಎರಡು ಮದಗಜಗಳ ಭೀಕರ ಕಾದಾಟ ; ಮನೆ ಮೇಲೆ ಬಿದ್ದ ಮರ

ತೀವ್ರವಾಗಿ ಗಾಯಗೊಂಡಿದ್ದ ತಾಯಿ ಹಾಗೂ ಮಗಳನ್ನು ಆಸ್ಪತ್ರೆಗೆ ಒಯ್ದರೂ ಮಾರ್ಗಮಧ್ಯವೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಗಾಯಗೊಂಡ ಚಾಲಕನಿಗೆ ಚಿಕಿತ್ಸೆ ನೀಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಗಾಯಗೊಂಡ ಕಾರು ಚಾಲಕ ನೀಡಿದ ದೂರಿನ ಮೇರೆಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಲಾರಿ ಚಾಲಕನ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement