ಕಾರವಾರ: ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ಅಸ್ವಸ್ಥಗೊಂಡ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ)ರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕಾರವಾರ ತಹಶೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಫಂಡರೀನಾಥ ನಾಯ್ಕ ಎಂಬವರಿಗೆ ಮಂಗಳವಾರ ಬೆಳಗ್ಗೆ ಕೆಲಸದ ವೇಳೆಯಲ್ಲೇ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಅವರು ಕಚೇರಿಯಲ್ಲೇ ಕುಸಿದುಬಿದ್ದಿದ್ದು, ಇದನ್ನು ಕಂಡ ಸಹೋದ್ಯೋಗಿಗಳು
ತಕ್ಷಣವೇ ಅವರನ್ನು ತಹಶೀಲ್ದಾರ್ ಅವರ ಜೀಪ್ನಲ್ಲಿ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ತುರ್ತು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲೇ ಸಿಬ್ಬಂದಿಯೊಬ್ಬರು ಅಕಾಲಿಕವಾಗಿ ನಿಧನರಾದ ಸುದ್ದಿ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಹಾಗೂ ಅವರ ಪರಿಚಿತರಲ್ಲಿ ಶೋಕದ ವಾತಾವರಣ ಉಂಟು ಮಾಡಿದೆ. ಸಹೋದ್ಯೋಗಿಗಳು ಮೃತರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ