ಸೋಂದಾ : ವೇದಮೂರ್ತಿ ಮಾಧವ ಪರಾಂಜಪೆಗೆ ಮಹಾರಾಷ್ಟ್ರದ ‘ಮಹಾಕವಿ ಕಾಳಿದಾಸ ಸಂಸ್ಕೃತ ಸಾಧನಾ’ ಪ್ರಶಸ್ತಿ

ಶಿರಸಿ: ಪ್ರಾಚೀನ ವೇದ ಪರಂಪರೆಯ ಸಂರಕ್ಷಣೆ, ಅಧ್ಯಯನ ಹಾಗೂ ಅಧ್ಯಾಪನ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಶಿರಸಿ ತಾಲೂಕಿನ ಸೋಂದಾ ಮೂಲದ ವೇದಮೂರ್ತಿ ಮಾಧವ ಪರಾಂಜಪೆ ಅವರಿಗೆ ಮಹಾರಾಷ್ಟ್ರ ಸರ್ಕಾರದ ಪ್ರತಿಷ್ಠಿತ “ಮಹಾಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ” ಲಭಿಸಿದೆ. ಈ ಮೂಲಕ ಸೋಂದಾ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ವಲಯಕ್ಕೆ ಮತ್ತೊಂದು ಹೆಮ್ಮೆಯ ಗರಿ ಸೇರ್ಪಡೆಯಾಗಿದೆ.
ಮಾಧವ ಪರಾಂಜಪೆ ಅವರು ಗೋಕರ್ಣದ ಖ್ಯಾತ ವಿದ್ವಾಂಸ ಕೇಶವಶಾಸ್ತ್ರಿ ಜೋಗ್ಳೇಕರ್ ಅವರ ಮಾರ್ಗದರ್ಶನದಲ್ಲಿ ವೇದ ಶಿಕ್ಷಣವನ್ನು ಆರಂಭಿಸಿದ್ದರು. ಬಳಿಕ ಪುಣೆಯ ಸಹಸ್ರಬುದ್ಧೆ ಸಮಾಧಿ ಮಂದಿರದಲ್ಲಿ ಗಹನವಾದ ವೇದಾಧ್ಯಯನ ನಡೆಸಿದರು.
ಸ್ವ-ಅಧ್ಯಯನಕ್ಕೆ ಮಾತ್ರ ಸೀಮಿತವಾಗದೆ, ಪ್ರಾಚೀನ ವೇದಜ್ಞಾನವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯದಲ್ಲಿ ಅವರು ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.

ಅವರ ಮಾರ್ಗದರ್ಶನದಲ್ಲಿ ಆರು ಮಂದಿ ವಿದ್ಯಾರ್ಥಿಗಳು ಅತ್ಯಂತ ಕಠಿಣವೆಂದು ಪರಿಗಣಿಸಲ್ಪಡುವ ‘ದಶಗ್ರಂಥ’ ಸಹಿತ ಪೂರ್ಣ ವೇದಾಧ್ಯಯನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಅಪಾರ ಪರಿಶ್ರಮ, ಶ್ರದ್ಧೆ ಮತ್ತು ಆಳವಾದ ಜ್ಞಾನ ಬೇಕಾದ ಇಂತಹ ಶಿಕ್ಷಣವನ್ನು ಶಿಷ್ಯರಿಗೆ ಧಾರೆಯೆರೆದು ಸಿದ್ಧಗೊಳಿಸಿರುವುದು ಅವರ ಅಧ್ಯಾಪನ ಸಾಮರ್ಥ್ಯ ಹಾಗೂ ಗುರು-ಶಿಷ್ಯ ಪರಂಪರೆಯ ಮೇಲಿನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಸಂಸ್ಕೃತ ಭಾಷೆ, ವೇದ ಸಂಸ್ಕೃತಿ ಮತ್ತು ಭಾರತೀಯ ಜ್ಞಾನಪರಂಪರೆಯ ಸಂರಕ್ಷಣೆ ಹಾಗೂ ಪ್ರಸಾರಕ್ಕಾಗಿ ಜೀವಮಾನವಿಡೀ ಶ್ರಮಿಸುತ್ತಿರುವ ವಿದ್ವಾಂಸರನ್ನು ಗುರುತಿಸಿ ನೀಡಲಾಗುವ ಈ ಪ್ರಶಸ್ತಿಯು, ಪರಾಂಜಪೆ ಅವರ ದೀರ್ಘಕಾಲದ ಸಾಧನೆಗೆ ಸಂದ ಗೌರವವಾಗಿದೆ.
ಜಿಲ್ಲೆಯ ಮಣ್ಣಿನ ಪ್ರತಿಭೆಯೊಬ್ಬರು ಹೊರರಾಜ್ಯದ ಅತ್ಯುನ್ನತ ಸಾಂಸ್ಕೃತಿಕ ಪುರಸ್ಕಾರಕ್ಕೆ ಭಾಜನರಾಗಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಅವರ ಸಾಧನೆಗೆ ವಿವಿಧ ವಲಯಗಳಿಂದ ಅಭಿನಂದನೆಗಳು ವ್ಯಕ್ತವಾಗಿವೆ.

ಪ್ರಮುಖ ಸುದ್ದಿ :-   ಹಿಂಗಾರು ಮಳೆ ಸಮೃದ್ಧವಾಗಿ ಸುರಿಯಲಿದೆ ; ದಕ್ಷಿಣ ಭಾರತದಲ್ಲಿ ಪ್ರಕೃತಿ ವಿಕೋಪದ ಲಕ್ಷಣವಿದೆ ; ಕೋಡಿಮಠ ಶ್ರೀಗಳ ಭವಿಷ್ಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement