ಹಿಂಗಾರು ಮಳೆ ಸಮೃದ್ಧವಾಗಿ ಸುರಿಯಲಿದೆ ; ದಕ್ಷಿಣ ಭಾರತದಲ್ಲಿ ಪ್ರಕೃತಿ ವಿಕೋಪದ ಲಕ್ಷಣವಿದೆ ; ಕೋಡಿಮಠ ಶ್ರೀಗಳ ಭವಿಷ್ಯ

ಹಾಸನ: ಮುಂಗಾರು ಮಳೆ ಕೊರತೆಯಾದರೂ ಹಿಂಗಾರು ಮಳೆ ಸಮೃದ್ಧವಾಗಿ ಸುರಿದು ರೈತರಿಗೆ-ಜನರಿಗೆ ಪರಿಹಾರ ದೊರೆಯಲಿದೆ. ದಕ್ಷಿಣ ಭಾರತದಲ್ಲೂ ಭೀಕರ ಪ್ರಕೃತಿ ವಿಕೋಪಗಳು ಸಂಭವಿಸುವ ಲಕ್ಷಣಗಳಿವೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಹಾಸನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ವರ್ಷದ ಕುರಿತು ತಾವು ಮೊದಲೇ ಭವಿಷ್ಯ ಹೇಳಿದ್ದಾಗಿ ತಿಳಿಸಿದರು. “ಮುಂಗಾರು ಮಳೆ ವಿರಳವಾಗಿರುತ್ತದೆ, ಆದರೆ ಹಿಂಗಾರು ಮಳೆ ಉತ್ತಮವಾಗಿ ಆಗುತ್ತದೆ. ಜನಸಂಖ್ಯೆ ಹೆಚ್ಚಾಗುತ್ತದೆ. ಅನ್ನ, ಆಹಾರ ಹಾಗೂ ನೀರಿನ ಕೊರತೆ ಉಂಟಾಗುತ್ತದೆ. ಸಾವು-ನೋವುಗಳು ಹೆಚ್ಚಾಗುತ್ತವೆ. ಕೆಲವು ಪ್ರದೇಶಗಳಲ್ಲಿ ಭೀಕರ ಪ್ರವಾಹಗಳು ಸಂಭವಿಸುತ್ತವೆ ಎಂದು ನಾನು ಮೊದಲೇ ಹೇಳಿದ್ದೆ. ಈಗ ಅದು ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ” ಎಂದು ಹೇಳಿದರು.
ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದಿದ್ದರೂ ಹಿಂಗಾರು ಮಳೆ ಸಮೃದ್ಧಿಯಾಗಿ ಸುರಿಯುವ ಲಕ್ಷಣಗಳಿವೆ. ಕೆರೆಗಳು ಮತ್ತು ಕಟ್ಟೆಗಳು ತುಂಬಲಿದ್ದು, ನೀರಿನ ಕೊರತೆಯ ಬಗ್ಗೆ ಹೆಚ್ಚಿನ ಆತಂಕ ಅಗತ್ಯವಿಲ್ಲ. ಹಿಂಗಾರು ಮಳೆ ಉತ್ತಮವಾಗಿರುವುದರಿಂದ ಶೇಕಡಾ 90ರಷ್ಟು ಜನರಿಗೆ ಪರಿಹಾರ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಮುಖ ಸುದ್ದಿ :-   ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ನೇಮಕ; ಯಾವ ಜಿಲ್ಲೆಗೆ ಯಾರು ? ಪಟ್ಟಿ ಇಲ್ಲಿದೆ

ದಕ್ಷಿಣ ಭಾರತದಲ್ಲೂ ಪ್ರಕೃತಿ ವಿಕೋಪದ ಸಾಧ್ಯತೆ
ಉತ್ತರ ಭಾರತ ಮತ್ತು ನೇಪಾಳದಲ್ಲಿ ನಡೆದಿರುವ ಘಟನೆಗಳ ಮಾದರಿಯಲ್ಲೇ ದಕ್ಷಿಣ ಭಾರತದಲ್ಲೂ ಪ್ರಕೃತಿ ವಿಕೋಪಗಳು ಸಂಭವಿಸುವ ಲಕ್ಷಣಗಳಿವೆ. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಸ್ವಾಮೀಜಿ ಹೇಳಿದರು.
“ದೇಶಗಳು ನೀರಿನಲ್ಲಿ ಮುಳುಗುವಂತಹ ಪರಿಸ್ಥಿತಿಗಳು, ಅತಿವೃಷ್ಟಿ, ಜನರು ನಿಯಂತ್ರಣ ತಪ್ಪುವ ಸವಾಲುಗಳು ಎದುರಾಗಲಿವೆ ಎಂದು ನಾನು ಕಳೆದ ಎರಡು-ಮೂರು ವರ್ಷಗಳಿಂದ ಹೇಳುತ್ತಲೇ ಬಂದಿದ್ದೇನೆ. ಆಡಳಿತ ನಡೆಸುವವರಲ್ಲೂ ಅತೃಪ್ತಿ ಹೆಚ್ಚಾಗುತ್ತದೆ” ಎಂದು ಅವರು ಹೇಳಿದರು.

ಪ್ರಕೃತಿಯ ವಿರುದ್ಧದ ಮಾನವ ಚಟುವಟಿಕೆಗಳಿಂದ ಪರಿಸರ ಸಮತೋಲನ ಹದಗೆಟ್ಟಿದೆ ಎಂದು ಅಭಿಪ್ರಾಯಪಟ್ಟ ಅವರು, “ಜಗತ್ತಿನಾದ್ಯಂತ ಲಕ್ಷಾಂತರ ಬೋರ್‌ವೆಲ್‌ಗಳನ್ನು ಕೊರೆದು ಭೂಗರ್ಭದ ನೀರನ್ನು ಅತಿಯಾಗಿ ಬಳಸಲಾಗಿದೆ. ಇದರಿಂದ ಭೂಮಿಯ ಸಹಜ ಸಮತೋಲನಕ್ಕೆ ಧಕ್ಕೆಯಾಗಿದೆ. ಪರಿಣಾಮವಾಗಿ ಪ್ರವಾಹಗಳು ಮತ್ತು ಭೂಕಂಪನಗಳಂತಹ ಘಟನೆಗಳು ಹೆಚ್ಚಾಗುತ್ತಿವೆ” ಎಂದು ಹೇಳಿದರು.
“ಭೂಮಿಯನ್ನು ಅತಿಯಾಗಿ ಕೊರೆದ ಪರಿಣಾಮ ನೀರು ಸ್ಥಿರವಾಗಿ ಉಳಿಯದೆ ಅನಿಯಂತ್ರಿತವಾಗಿ ಹರಿಯುತ್ತಿದೆ. ಇದರಿಂದ ಹಲವು ಕಡೆ ಸಾವು-ನೋವುಗಳು ಸಂಭವಿಸುತ್ತಿವೆ. ಇಂತಹ ಸಂದರ್ಭಗಳಲ್ಲಿ ನಾವು ಭಗವಂತನನ್ನು ಪ್ರಾರ್ಥಿಸುವುದೇ ಪರಿಹಾರ. ದೇವರ ಕೃಪೆಯಿಂದ ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳು ತಪ್ಪಲಿ ಎಂದು ಪ್ರಾರ್ಥಿಸೋಣ” ಎಂದು ಸ್ವಾಮೀಜಿ ಹೇಳಿದರು.

ಪ್ರಮುಖ ಸುದ್ದಿ :-   ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ನೇಮಕ; ಯಾವ ಜಿಲ್ಲೆಗೆ ಯಾರು ? ಪಟ್ಟಿ ಇಲ್ಲಿದೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement