ಶಿರಸಿ: ಉದ್ದೇಶಿತ ತಾಳಗುಪ್ಪ-ಸಿದ್ದಾಪುರ-ಶಿರಸಿ-ಮುಂಡಗೋಡ-ಹುಬ್ಬಳ್ಳಿ ರೈಲ್ವೆ ಯೋಜನೆಯನ್ನು ಸರಕು ಸಾಗಣೆ (ಗೂಡ್ಸ್) ರೈಲುಗಳ ಸಂಚಾರಕ್ಕೂ ಅನುಕೂಲವಾಗುವಂತೆ ಡಬಲ್ ಟ್ರ್ಯಾಕ್ ಯೋಜನೆಯನ್ನಾಗಿ ರೂಪಿಸಿ ಶೀಘ್ರ ಅನುಷ್ಠಾನಗೊಳಿಸಬೇಕು ಎಂದು ‘ಶಿರಸಿ ಮುಖ್ಯ ನಾಲಾ (ರಾಜಕಾಲುವೆ) ಹಾಗೂ ನಗರಾಭಿವೃದ್ಧಿ ಹೋರಾಟ ಸಮಿತಿ’ಯು ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದೆ. ಶುಕ್ರವಾರ ಶಿರಸಿಯ ಸಹಾಯಕ ಆಯುಕ್ತ ಚಂದ್ರಶೇಖರ ಜಿ.ಆರ್ ಮೂಲಕ ಮನವಿ ಸಲ್ಲಿಸಲಾಯಿತು.
ಪ್ರಸ್ತುತ ಈ ಯೋಜನೆಯ ವಿಸ್ತೃತ ಯೋಜನಾ ವರದಿ (DPR) ತಯಾರಿಕೆಗೆ ಹೈದರಾಬಾದ್ ಮೂಲದ ಖಾಸಗಿ ಸಂಸ್ಥೆಗೆ ಟೆಂಡರ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಪ್ರಮುಖ ವಾಣಿಜ್ಯ ಬೆಳೆಗಳ ತವರೂರು ಎನಿಸಿರುವ ಮಲೆನಾಡು ಭಾಗಕ್ಕೆ ಡಬಲ್ ಟ್ರ್ಯಾಕ್ ನಿರ್ಮಾಣವೇ ಸೂಕ್ತ. ಇದರಿಂದ ಈ ಭಾಗದ ರೈತರಿಗೆ ಲಾಭವಾಗಲಿದೆ ಎಂಬ ಸಮಿತಿ ಹೇಳಿದೆ.
ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳಿಂದ ಪ್ರತಿವರ್ಷ ಸುಮಾರು 350 ಕೋಟಿ ರೂ. ಮೌಲ್ಯದ ಅಡಿಕೆ, 125 ಕೋಟಿ ರೂ. ಮೌಲ್ಯದ ತೆಂಗು ಹಾಗೂ 23.87 ಕೋಟಿ ರೂ. ಮೌಲ್ಯದ ಕಾಳುಮೆಣಸು ಸೇರಿದಂತೆ ಏಲಕ್ಕಿ, ಶುಂಠಿ ಮತ್ತು ಕೋಕೋ ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿವೆ. ಈ ಬೆಳೆಗಳಲ್ಲಿ ಶೇ. 75 ರಷ್ಟು ಕೃಷಿ ಉತ್ಪನ್ನಗಳು ದೇಶ-ವಿದೇಶಗಳಿಗೆ ರವಾನೆಯಾಗುತ್ತವೆ. ಸದ್ಯ ಭಾರಿ ಗಾತ್ರದ ಟ್ರಕ್ಗಳ ಮೂಲಕ ರಸ್ತೆ ಮಾರ್ಗವಾಗಿ ಇವುಗಳನ್ನು ಸಾಗಿಸಲಾಗುತ್ತಿದ್ದು, ರೈಲು ಮಾರ್ಗ ಲಭ್ಯವಾದರೆ ಕಂಟೇನರ್ ಮೂಲಕ ಸರಕು ರವಾನಿಸಿ ಕೃಷಿ ಉತ್ಪನ್ನಗಳಿಗೆ ಉತ್ತಮ ಮೌಲ್ಯ ಪಡೆಯಬಹುದು. ಇದರಿಂದ ರಸ್ತೆ ಸಾರಿಗೆಯ ಮೇಲಿನ ಒತ್ತಡ ಕಡಿಮೆಯಾಗಿ, ರಸ್ತೆ ನಿರ್ವಹಣೆಗೆ ವೆಚ್ಚವಾಗುವ ಸರ್ಕಾರದ ಭಾರಿ ಪ್ರಮಾಣದ ಹಣ ಉಳಿತಾಯವಾಗುತ್ತದೆ ಈಗಾಗಲೇ ಹುಬ್ಬಳ್ಳಿ-ಅಂಕೋಲಾ ಡಬಲ್ ಟ್ರ್ಯಾಕ್ ರೈಲು ಯೋಜನೆಗೆ ನೋಟಿಫಿಕೇಶನ್ ಮಾಡಲಾಗಿದೆ. ಯಾವುದೇ ಯೋಜನೆಗೆ ಪದೇಪದೇ ಭೂಸ್ವಾಧೀನ ಪ್ರಕ್ರಿಯೆ ನಡೆಸುವುದರಿಂದ ಸರ್ಕಾರದ ಹಣ ಪೋಲಾಗುತ್ತದೆ. ಆದ್ದರಿಂದ ಆರಂಭದಲ್ಲೇ ತಾಳಗುಪ್ಪ-ಹುಬ್ಬಳ್ಳಿ ಮಾರ್ಗವನ್ನು ಡಬಲ್ ಟ್ರ್ಯಾಕ್ ಆಗಿ ರೂಪಿಸುವುದು ಸೂಕ್ತ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ದೇವಿಕೊಪ್ಪ ಬಳಿ ಜಂಕ್ಷನ್ ; ಸಲಹೆ
ತಾಳಗುಪ್ಪ-ಸಿದ್ದಾಪುರ-ಶಿರಸಿ-ಮುಂಡಗೋಡ-ಹುಬ್ಬಳ್ಳಿ ಯೋಜನೆಯ ಮಾರ್ಗ ಬದಲಾವಣೆಯ ಕುರಿತೂ ಪ್ರಮುಖ ಸಲಹೆ ನೀಡಲಾಗಿದ್ದು, ಮುಂಡಗೋಡಿನಿಂದ ತಡಸ ಬಳಿ ಹಾವೇರಿ-ಹುಬ್ಬಳ್ಳಿ ರೈಲು ಮಾರ್ಗಕ್ಕೆ ಜೋಡಿಸುವ ಬದಲು, ಮುಂಡಗೋಡಿನಿಂದ ಕಲಘಟಗಿ ತಾಲೂಕಿನ ದೇವಿಕೊಪ್ಪ ಬಳಿ ಜಂಕ್ಷನ್ ನಿರ್ಮಿಸಿ ಉದ್ದೇಶಿತ ಹುಬ್ಬಳ್ಳಿ-ಅಂಕೋಲಾ ಮಾರ್ಗಕ್ಕೆ ಸೇರಿಸಬೇಕು. ಇದರಿಂದ ಮುಂಡಗೋಡಿನ ಬಹುತೇಕ ಗ್ರಾಮೀಣ ಭಾಗಗಳಿಗೆ ನೇರ ರೈಲು ಸಂಪರ್ಕ ಸಿಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಶಿರಸಿ ಮುಖ್ಯ ನಾಲಾ (ರಾಜಕಾಲುವೆ) ಹಾಗೂ ನಗರಾಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ದೀಪಕ ರೇವಣಕರ, ಕೆ.ಎಚ್.ಬಿ ಕಾಲನಿ ನಿವಾಸಿಗಳ ಸಂಘದ ಅಧ್ಯಕ್ಷ ಜಿ.ಎಲ್. ಹೆಗಡೆ ಹಾಗೂ ನಿವೃತ್ತ ಸಂಪಾದಕ ಅಶೋಕ ಹಾಸ್ಯಗಾರ ಮೊದಲಾದವರಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ