ಟಿ.ನರಸೀಪುರ : ಠಾಣೆ ಮುಂದೆ ಅಹೋರಾತ್ರಿ ಧರಣಿಗೆ ಮುಂದಾದ ಬಿಜೆಪಿ ನಾಯಕರು | ಆರ್‌.ಅಶೋಕ, ಸೇರಿ ಹಲವರು ಪೊಲೀಸರ ವಶಕ್ಕೆ

ಮೈಸೂರು : ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಮೈಸೂರು ಜಿಲ್ಲೆ ಟಿ. ನರಸೀಪುರ ಇನ್ಸ್​​ಪೆಕ್ಟರ್ ಧನಂಜಯ ಅವರು ನೀಡಿದ ಹೇಳಿಕೆಗೆ ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ನಾಯಕರು ಭಾನುವಾರ ಟಿ. ನರಸೀಪುರ ಪೊಲೀಸ್‌ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು.
ಇನ್‌ಸ್ಪೆಕ್ಟರ್ ಅಮಾನತಿಗೆ ಆಗ್ರಹಿಸಿ ಗಣೇಶನ ಮೂರ್ತಿ ಹಿಡಿದು ಮೆರವಣಿಗೆ ಹಾಗೂ ಅಹೋರಾತ್ರಿ ಧರಣಿಗೆ ಮುಂದಾದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ, ಸಂಸದ ಯದುವೀರ ಒಡೆಯರ್, ಮಾಜಿ ಸಂಸದ ಪ್ರತಾಪ ಸಿಂಹ ಮತ್ತು ಶಾಸಕ ಶ್ರೀವತ್ಸ ಸೇರಿದಂತೆ ಹಲವು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜ್ಯದಲ್ಲಿ ಹಿಂದೂ ವಿರೋಧಿ ಹಾಗೂ ತಾಲಿಬಾನಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕರು, ಇನ್‌ಸ್ಪೆಕ್ಟರ್ ಧನಂಜಯ ಅವರನ್ನು ಅಮಾನತು ಮಾಡುವವರೆಗೂ ಅಹೋರಾತ್ರಿ ಧರಣಿ ನಡೆಸುವುದಾಗಿ ಪಟ್ಟುಹಿಡಿದರು. ಆದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆ ಧಾವಿಸಿತು.

ಬಿಜೆಪಿಯವರು ಅಧಿಕಾರಿಯನ್ನು ಅಮಾನತು ಮಾಡುವವರೆಗೂ ಅಹೋರಾತ್ರಿ ಧರಣಿ ನಡೆಸುವುದಾಗಿ ಪಟ್ಟು ಸಡಿಲಿಸದ  ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪಟ್ಟಣದಲ್ಲಿ ಬಿಗಿ ಪೊಲೀಸ್‌ ಭದ್ರತೆ ಏರ್ಪಡಿಸಲಾಗಿದೆ.
ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಮೈಸೂರು ಜಿಲ್ಲೆ ಟಿ. ನರಸೀಪುರ ಇನ್ಸ್​​ಪೆಕ್ಟರ್ ಧನಂಜಯ ಅವರು ಮಸೀದಿ ಮುಂದೆ ಪಟಾಕಿ ಸಿಡಿಸಿದ್ರೆ, ಗ್ರಹಚಾರ ಬಿಡಿಸ್ತೇನೆ ಎಂದು ಎಚ್ಚರಿಕೆ ನೀಡಿದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೊ ವೈರಲ್‌ ಆದ ಬಳಿಕ ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಇನ್ಸ್​​ಪೆಕ್ಟರ್ ಧನಂಜಯ್​ ಅವರ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಮಾಜಿ ಸಂಸದ ಪ್ರತಾಪ ಸಿಂಹ ಅವರು, ಇನ್ನೊಂದು ಸಲ ಆ ರೀತಿ ಮಾತನಾಡಿದ್ರೆ ಠಾಣೆಗೆ ನುಗ್ಗುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು.

ಪ್ರಮುಖ ಸುದ್ದಿ :-   ಕರ್ನಾಟಕ ಕಾಂಗ್ರೆಸ್ಸಿನ 'ಕೆಪಿಸಿಸಿ ಕನೆಕ್ಟ್ ಸೆಂಟರ್‌ʼಗೆ ಪದಾಧಿಕಾರಿಗಳ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement