ಅಮೆರಿಕದ ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ಬಹಿರಂಗಪಡಿಸಿರುವ ದಾಖಲೆಗಳ ಪ್ರಕಾರ, ಅಲ್‌ಖೈದಾ ಮಾಜಿ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಭಾರತದ ಮೇಲೂ ಉಗ್ರ ದಾಳಿ ನಡೆಸುವ ಉದ್ದೇಶ ಹೊಂದಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಅಮೆರಿಕದ ಗುಪ್ತಚರ ಸಂಸ್ಥೆ ‘ಸಿಐಎ’ (CIA) ಬಹಿರಂಗಗೊಳಿಸಿರುವ ಅತ್ಯಂತ ರಹಸ್ಯ ದಾಖಲೆಗಳಿಂದ ಈ ಮಾಹಿತಿ ಬಹಿರಂಗವಾಗಿದೆ.
2001ರ ಸೆಪ್ಟೆಂಬರ್ 11ರಂದು ನ್ಯೂಯಾರ್ಕ್‌ನ ವಿಶ್ವ ವಾಣಿಜ್ಯ ಕೇಂದ್ರ (ವರ್‌ಲ್ಡ್ ಟ್ರೇಡ್ ಸೆಂಟರ್) ಮೇಲೆ ನಡೆದ ಭೀಕರ 9/11 ಉಗ್ರ ದಾಳಿಯ 25ನೇ ವರ್ಷದ ಸ್ಮರಣಾರ್ಥವಾಗಿ ಸಿಐಎ ಶುಕ್ರವಾರ 70ಕ್ಕೂ ಹೆಚ್ಚು ಅಧ್ಯಕ್ಷೀಯ ಗುಪ್ತಚರ ವರದಿಗಳು (Presidential Intelligence Briefs) ಹಾಗೂ 100ಕ್ಕೂ ಹೆಚ್ಚು ಪುಟಗಳ ದಾಖಲೆಗಳನ್ನು ಸಾರ್ವಜನಿಕಗೊಳಿಸಿದೆ.
ಈ ದಾಖಲೆಗಳಲ್ಲಿ 1998ರ ಆಗಸ್ಟ್ 28ರ ದಿನಾಂಕದ ಗುಪ್ತಚರ ವರದಿಯೊಂದು ಒಸಾಮಾ ಬಿನ್ ಲಾಡೆನ್ ಹಲವು ದೇಶಗಳ ಮೇಲೆ ಉಗ್ರ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಎಂದು ಉಲ್ಲೇಖಿಸಿದೆ. ಆ ಪಟ್ಟಿಯಲ್ಲಿ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ದಾಳಿ ನಡೆಸಲು ಬಯಸಿದ್ದ ಎಂದು ಉಲ್ಲೇಖಿಸಲಾಗಿದೆ.
ಭಾರತ, ಈಜಿಪ್ಟ್, ಕುವೈತ್, ಸೌದಿ ಅರೇಬಿಯಾ, ಪಾಕಿಸ್ತಾನ, ಯೆಮನ್, ಉಗಾಂಡಾ ಹಾಗೂ “ಬಹುಶಃ” ನೈಜೀರಿಯಾವೂ ಸೇರಿವೆ. ಆದರೆ ದಾಖಲೆಗಳ ಕೆಲವು ಭಾಗಗಳನ್ನು ಇನ್ನೂ ರಹಸ್ಯವಾಗಿಯೇ ಉಳಿಸಲಾಗಿದ್ದು, ಮಾಹಿತಿಯ ಮೂಲವನ್ನು ಬಹಿರಂಗಪಡಿಸಲಾಗಿಲ್ಲ.
“ಬಿನ್ ಲಾಡಿನ್ ಟೆರರಿಸ್ಟ್ ನೆಟ್‌ವರ್ಕ್ ಸ್ಟಿಲ್ ಎ ಥ್ರೆಟ್” (Bin Ladin Terrorist Network Still a Threat) ಎಂಬ ಶೀರ್ಷಿಕೆಯ ಈ ವರದಿಯಲ್ಲಿ ಭಾರತದಲ್ಲಿ ಯಾವ ಸ್ಥಳವನ್ನು ಗುರಿಯಾಗಿಸಲಾಗಿತ್ತು, ದಾಳಿ ಯಾವಾಗ ನಡೆಯಬೇಕಿತ್ತು ಅಥವಾ ಅದಕ್ಕಾಗಿ ರೂಪಿಸಲಾದ ಕಾರ್ಯಾಚರಣೆಯ ನಿಖರ ವಿವರಗಳ ಬಗ್ಗೆ ಯಾವುದೇ ಮಾಹಿತಿ ನೀಡಲಾಗಿಲ್ಲ.
ದಾಖಲೆಗಳ ಪ್ರಕಾರ, ಉತ್ತರ ಅಮೆರಿಕ, ಯುರೋಪ್ ಮತ್ತು ಪೂರ್ವ ಏಷ್ಯಾದಲ್ಲಿ ಬಿನ್ ಲಾಡೆನ್ ಹೊಂದಿದ್ದ ಸಂಘಟಿತ ಜಾಲತಾಣಗಳು, ಈ ಪ್ರದೇಶಗಳಲ್ಲಿನ ಅಮೆರಿಕದ ಹಿತಾಸಕ್ತಿಗಳ ಮೇಲೂ ದಾಳಿ ನಡೆಸುವ ಸಾಧ್ಯತೆಯ ವರದಿಗಳಿಗೆ ವಿಶ್ವಾಸಾರ್ಹತೆಯನ್ನು ನೀಡುತ್ತವೆ ಎಂದು ಸಿಐಎ ಅಂದಿನ ಮೌಲ್ಯಮಾಪನದಲ್ಲಿ ತಿಳಿಸಿತ್ತು.
ಅಮೆರಿಕವು ಅಫ್ಗಾನಿಸ್ತಾನದಲ್ಲಿನ ಅಲ್‌ಖೈದಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ನಂತರವೂ ಬಿನ್ ಲಾಡೆನ್ ಹಾಗೂ ಇತರ ಉಗ್ರ ನಾಯಕರು ಬದುಕುಳಿದಿದ್ದರು ಮತ್ತು ಅವರ ಸಂವಹನ ಜಾಲವೂ ಸಕ್ರಿಯವಾಗಿತ್ತು ಎಂದು ವರದಿ ಹೇಳಿದೆ. ಕೆಲವು ಉಗ್ರ ತರಬೇತಿ ಶಿಬಿರಗಳಲ್ಲಿ ತರಬೇತಿಯನ್ನು ಪುನರಾರಂಭಿಸಲಾಗಿದ್ದು, ಇತರ ಶಿಬಿರಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿತ್ತು ಎಂಬ ಮಾಹಿತಿಯನ್ನೂ ಅದು ದಾಖಲಿಸಿದೆ.
ಇದೇ ವೇಳೆ, ಅಫ್ಗಾನಿಸ್ತಾನದಲ್ಲಿನ ಅಲ್‌ಖೈದಾ ಶಿಬಿರಗಳ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸುವ ಕೆಲವೇ ಗಂಟೆಗಳ ಮೊದಲು ಬಿನ್ ಲಾಡೆನ್ ಅಮೆರಿಕ ಹಾಗೂ ಬ್ರಿಟನ್ ವಿರುದ್ಧ ಮತ್ತಷ್ಟು ದಾಳಿಗಳನ್ನು ನಡೆಸಲು ಮುಂದಾಗಿದ್ದ ಎಂಬ ಮಾಹಿತಿಯೂ ವರದಿಯಲ್ಲಿ ಉಲ್ಲೇಖವಾಗಿದೆ.
ಇದಲ್ಲದೆ, ಈತ ಕನಿಷ್ಠ 60 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಗಳು ಮತ್ತು ಮಿತ್ರ ಸಂಘಟನೆಗಳ ಜಾಲವನ್ನು ಬಳಸಿಕೊಂಡು ದಾಳಿಗಳನ್ನು ನಡೆಸುವಂತೆ ಕರೆ ನೀಡುವ ಸಾಧ್ಯತೆಯಿದೆ ಎಂದು ಗುಪ್ತಚರ ವರದಿ ಎಚ್ಚರಿಕೆ ನೀಡಿತ್ತು.
ಸಿಐಎ ಬಿಡುಗಡೆ ಮಾಡಿದ ಅಧ್ಯಕ್ಷೀಯ ಗುಪ್ತಚರ ವರದಿಗಳು 1998ರಿಂದ 2001ರ ಅವಧಿಯಲ್ಲಿ ಅಮೆರಿಕದ ಮೇಲೆ ಸಂಭವಿಸಬಹುದಾದ ಉಗ್ರ ದಾಳಿಗಳ ಬಗ್ಗೆ ಗುಪ್ತಚರ ಸಂಸ್ಥೆ ಹಲವು ಬಾರಿ ಅಂದಿನ ಅಧ್ಯಕ್ಷರಿಗೆ ಎಚ್ಚರಿಕೆ ನೀಡಿದ್ದುದನ್ನು ತೋರಿಸುತ್ತದೆ. ಈ ದಾಖಲೆಗಳು ಬಿಲ್ ಕ್ಲಿಂಟನ್ ಅಧ್ಯಕ್ಷರಾಗಿದ್ದ ಅವಧಿಯಿಂದ ಆರಂಭವಾಗಿ ಜಾರ್ಜ್ ಡಬ್ಲ್ಯು. ಬುಶ್ ಆಡಳಿತದ ಆರಂಭಿಕ ವರ್ಷಗಳವರೆಗಿನ ಮಾಹಿತಿಯನ್ನು ಒಳಗೊಂಡಿವೆ.
ಈ ದಾಖಲೆಗಳ ಬಿಡುಗಡೆಯು “ಅಮೆರಿಕದ ಇತಿಹಾಸದ ಅತ್ಯಂತ ಕರಾಳ ಕ್ಷಣಗಳಲ್ಲಿ ಒಂದಾದ 9/11 ದಾಳಿಗೆ ಮುನ್ನ ಹಾಗೂ ಅದರ ಮರುದಿನದ ಅವಧಿಯಲ್ಲಿ ಸಿದ್ಧಗೊಂಡ ಅತ್ಯಂತ ಸೂಕ್ಷ್ಮ ಗುಪ್ತಚರ ಪ್ರಕಟಣೆಗಳ ಕುರಿತು ಇದುವರೆಗಿನ ಅತ್ಯಂತ ಅಪೂರ್ವ ಪಾರದರ್ಶಕತೆಯನ್ನು ಒದಗಿಸುತ್ತದೆ” ಎಂದು ಸಿಐಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
2001ರ ಸೆಪ್ಟೆಂಬರ್ 11ರಂದು ಅಲ್‌ಖೈದಾದ 19 ಉಗ್ರರು ನಾಲ್ಕು ವಾಣಿಜ್ಯ ವಿಮಾನಗಳನ್ನು ಅಪಹರಿಸಿದ್ದರು. ಅವುಗಳಲ್ಲಿ ಎರಡು ವಿಮಾನಗಳು ನ್ಯೂಯಾರ್ಕ್‌ನ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಗೋಪುರಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಆ ಪ್ರತಿಷ್ಠಿತ ಕಟ್ಟಡಗಳು ಸಂಪೂರ್ಣ ಕುಸಿದು ಬಿದ್ದವು.
ಮೂರನೇ ವಿಮಾನವು ಅಮೆರಿಕದ ರಕ್ಷಣಾ ಇಲಾಖೆ ಕೇಂದ್ರ ಕಚೇರಿಯಾದ ಪೆಂಟಗನ್‌ಗೆ ಡಿಕ್ಕಿ ಹೊಡೆದರೆ, ನಾಲ್ಕನೇ ವಿಮಾನವು ಶ್ವೇತಭವನ ಅಥವಾ ಅಮೆರಿಕ ಸಂಸತ್ತನ್ನು ಗುರಿಯಾಗಿಸಿಕೊಂಡಿತ್ತು ಎಂದು ನಂಬಲಾಗಿದೆ. ಆದರೆ ಪ್ರಯಾಣಿಕರು ಉಗ್ರರ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಿದ ಪರಿಣಾಮ ಆ ವಿಮಾನವು ಪೆನ್ಸಿಲ್ವೇನಿಯಾದ ಹೊಲವೊಂದರಲ್ಲಿ ಪತನಗೊಂಡಿತ್ತು.
ಈ ದಾಖಲೆಗಳು 9/11 ದಾಳಿಗೆ ಹಲವು ವರ್ಷಗಳ ಮುನ್ನವೇ ಒಸಾಮಾ ಬಿನ್ ಲಾಡೆನ್ ಜಾಗತಿಕ ಮಟ್ಟದಲ್ಲಿ ಉಗ್ರ ಚಟುವಟಿಕೆಗಳನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದ ಹಾಗೂ ಭಾರತವೂ ಅವನ ಸಂಭಾವ್ಯ ಗುರಿಗಳ ಪಟ್ಟಿಯಲ್ಲಿ ಸೇರಿತ್ತು ಎಂಬ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿವೆ.


ನಿಮ್ಮ ಕಾಮೆಂಟ್ ಬರೆಯಿರಿ