ರಾಜ್ಯದ ಬರಪೀಡಿತ ತಾಲೂಕುಗಳ ರೈತರಿಗೆ ದೊಡ್ಡ ರಿಲೀಫ್: ಬ್ಯಾಂಕ್ ಸಾಲ ಮರುಪಾವತಿಗೆ ವಿನಾಯಿತಿ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ಮುಂದುವರಿದಿರುವ ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೊಳಗಾದ ರೈತರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ (ಎಸ್‌ಎಲ್‌ಬಿಸಿ)ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದು, ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಮರುಪಾವತಿಗೆ ಸಂಬಂಧಿಸಿದಂತೆ ವಿಶೇಷ ಪರಿಹಾರ ಯೋಜನೆಯನ್ನು ಪ್ರಕಟಿಸಿದೆ. ಬರಪೀಡಿತ ರೈತ ಸಾಲಗಾರರಿಗೆ ಪರಿಹಾರ ಕ್ರಮಗಳನ್ನು ಜಾರಿಗೊಳಿಸುವ ಕುರಿತು ಸೆಪ್ಟೆಂಬರ್ 10ರಂದು ವಿಶೇಷ ಸಭೆ ನಡೆಸಿ, ರೈತರಿಗೆ ಸಮಗ್ರ ಪರಿಹಾರ ಪ್ಯಾಕೇಜ್ ನೀಡಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ.
ಸಾಲ ಮರುಪಾವತಿಗೆ 12 ತಿಂಗಳ ಕಾಲಾವಕಾಶ (ಮೊರಟೋರಿಯಂ) ನೀಡುವುದರ ಜೊತೆಗೆ, ಒಟ್ಟು ಸಾಲ ಮರುಪಾವತಿಯ ಅವಧಿಯನ್ನು ವಿಸ್ತರಿಸಿ ರೈತರಿಗೆ ನೆರವಾಗಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರವು ರಾಜ್ಯದ 24 ಜಿಲ್ಲೆಗಳ ವ್ಯಾಪ್ತಿಯ 101 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಈ ಸಭೆ ವಿಶೇಷ ಮಹತ್ವ ಪಡೆದುಕೊಂಡಿದೆ. ಘೋಷಿತ ತಾಲ್ಲೂಕುಗಳಲ್ಲಿ 89 ತಾಲ್ಲೂಕುಗಳು ತೀವ್ರ ಬರಪೀಡಿತವಾಗಿದ್ದರೆ, 12 ತಾಲ್ಲೂಕುಗಳು ಮಧ್ಯಮ ಪ್ರಮಾಣದ ಬರದಿಂದ ಬಾಧಿತವಾಗಿವೆ.
ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಗಳ ಅನ್ವಯ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ ಅರ್ಹ ಸಾಲಗಾರರಿಗೆ ವಿವಿಧ ಪರಿಹಾರ ಕ್ರಮಗಳನ್ನು ಜಾರಿಗೊಳಿಸಲು ಬ್ಯಾಂಕಿಂಗ್ ವಲಯ ಒಪ್ಪಿಗೆ ಸೂಚಿಸಿದೆ. ಅದರಂತೆ, ಬರಪೀಡಿತ ರೈತರಿಗೆ ಸಾಲ ಮರುಪಾವತಿಯಲ್ಲಿ 12 ತಿಂಗಳ ಕಾಲಾವಕಾಶ (ಮೊರಟೋರಿಯಂ) ನೀಡಲಾಗುತ್ತದೆ.

ಪ್ರಮುಖ ಸುದ್ದಿ :-   ‘ನೋಡದೆ, ಟೆಲಿಪ್ರಾಂಪ್ಟರ್ ಇಲ್ಲದೆ ಬಿಜೆಪಿ ನಾಯಕರು ವಂದೇ ಮಾತರಂನ 6 ಚರಣಗಳನ್ನು ಹಾಡಿದ್ರೆ ರಾಜೀನಾಮೆ’: ಸಚಿವ ಪ್ರಿಯಾಂಕ್ ಖರ್ಗೆ ಸವಾಲು

ಒಟ್ಟು ಸಾಲ ಮರುಪಾವತಿ ಅವಧಿ ವಿಸ್ತರಣೆ
ಅಲ್ಲದೆ, ಮಧ್ಯಮ ಪ್ರಮಾಣದ ಬರಪೀಡಿತ ತಾಲ್ಲೂಕುಗಳಲ್ಲಿ ಒಟ್ಟು ಸಾಲ ಮರುಪಾವತಿ ಅವಧಿಯನ್ನು ಗರಿಷ್ಠ 36 ತಿಂಗಳವರೆಗೆ (3 ವರ್ಷ) ವಿಸ್ತರಿಸಲು ಹಾಗೂ ತೀವ್ರ ಬರಪೀಡಿತ ತಾಲ್ಲೂಕುಗಳಲ್ಲಿ ಸಾಲ ಮರುಪಾವತಿ ಅವಧಿಯನ್ನು 60 ತಿಂಗಳವರೆಗೆ (5 ವರ್ಷ) ವಿಸ್ತರಿಸಲು ನಿರ್ಧರಿಸಲಾಗಿದೆ.
ಈ ಪರಿಹಾರ ಪ್ಯಾಕೇಜ್‌ ವ್ಯಾಪ್ತಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ (ಕೆಸಿಸಿ) ಸಾಲಗಳು, ಹೂಡಿಕೆ ಆಧಾರಿತ ಕೃಷಿ ಸಾಲಗಳು, ಹೈನುಗಾರಿಕೆ, ಮೀನುಗಾರಿಕೆ, ರೇಷ್ಮೆ ಕೃಷಿ ಸೇರಿದಂತೆ ಇತರೆ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ನೀಡಲಾದ ಸಾಲಗಳನ್ನೂ ಒಳಪಡಿಸಲಾಗಿದೆ.
ಕೇವಲ ಹಳೆಯ ಸಾಲ ಮರುಪಾವತಿ ಮುಂದೂಡುವುದು ಮಾತ್ರವಲ್ಲದೆ, ಇದರ ಜೊತೆಗೆ ರೈತರ ತುರ್ತು ಅಗತ್ಯಕ್ಕೆ ಅನುಗುಣವಾಗಿ ಬ್ಯಾಂಕುಗಳು ತಮ್ಮ ನಿಯಮಾವಳಿಗಳಂತೆ ಹೊಸ ಸಾಲಗಳನ್ನು ವಿತರಿಸಲು ನಿರ್ಧರಿಸಲಾಗಿದೆ.
ಅಲ್ಲದೆ, ಸರ್ಕಾರವು ಮುಂದೆ ಮತ್ತೆ ಯಾವುದೇ ಹೊಸ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದರೆ, ಈ ಪರಿಹಾರದ ಕ್ರಮಗಳು ಪ್ರತ್ಯೇಕ ಎಸ್‌ಎಲ್‌ಬಿಸಿ ಸಭೆಯ ಅಗತ್ಯವಿಲ್ಲದೇ ಸ್ವಯಂಚಾಲಿತವಾಗಿ ಅವುಗಳಿಗೂ ಅನ್ವಯವಾಗಲಿದೆ.
ಸಭೆಯಲ್ಲಿ ಕೈಗೊಂಡಿರುವ ಪರಿಹಾರ ಕ್ರಮಗಳನ್ನು ಬ್ಯಾಂಕ್‌ಗಳು ಅಕ್ಟೋಬರ್ 11ರೊಳಗೆ ಜಾರಿಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿ, 2027ರ ಜನವರಿ 9ರೊಳಗೆ ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಲಾಗಿದೆ.

ಪ್ರಮುಖ ಸುದ್ದಿ :-   ರೇಣುಕಸ್ವಾಮಿ ಕೊಲೆ ಪ್ರಕರಣ : ಪ್ರದೋಷ್ ಮಾಫಿ ಸಾಕ್ಷಿಗೆ ಮತ್ತೆ ಕೋರ್ಟ್ ಒಪ್ಪಿಗೆ, ದರ್ಶನ್ ಅರ್ಜಿ ವಜಾ

ಬಲವಂತದ ವಸೂಲಾತಿಗೆ ನಿಷೇಧ

ಈ ವರ್ಷ ಬರ ಪರಿಸ್ಥಿತಿ ಎದುರಿಸುತ್ತಿರುವುದರಿಂದ ರೈತರಿಂದ ಯಾವುದೇ ರೀತಿಯ ಬಲವಂತದ ಸಾಲ ವಸೂಲಾತಿ ಮಾಡದಂತೆ ಕಟ್ಟುನಿಟ್ಟಿನ ‘ಝೀರೋ ಟಾಲರೆನ್ಸ್’ (Zero Tolerance) ನೀತಿಯನ್ನು ಜಾರಿಗೆ ತರಲಾಗಿದೆ. ರೈತರಿಂದ ಬರುವ ದೂರುಗಳಿಗೆ ಜಿಲ್ಲಾಡಳಿತ ತಕ್ಷಣವೇ ಸ್ಪಂದಿಸಬೇಕು ಮತ್ತು ಯಾವುದೇ ವಸೂಲಾತಿ ಪ್ರಕ್ರಿಯೆಗೂ ಮುನ್ನ ಬ್ಯಾಂಕುಗಳನ್ನು ಸಂಪರ್ಕಿಸಬೇಕು ಎಂದು ಸೂಚಿಸಲಾಗಿದೆ.
ಜಿಲ್ಲಾಧಿಕಾರಿಗಳು (DCs), ಸಿಇಒಗಳು ಮತ್ತು ಜಿಲ್ಲಾ ಪ್ರಮುಖ ಬ್ಯಾಂಕ್ ವ್ಯವಸ್ಥಾಪಕರ (LDMs) ಜೊತೆಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮತ್ತು ದುರಂತ ನಿರ್ವಹಣೆ ಇಲಾಖೆಗಳ ಕಾರ್ಯದರ್ಶಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ರೈತರಿಗೆ ಈ ಯೋಜನೆಗಳ ಮಾಹಿತಿ ತಲುಪಿಸಲಿದ್ದಾರೆ.
ಸಹಕಾರ ವಲಯದ ಸಾಲ ಸೌಲಭ್ಯ: ಸಹಕಾರ ಬ್ಯಾಂಕುಗಳ ಸಾಲ ಮರುಪಾವತಿ ಅವಧಿ ವಿಸ್ತರಣೆಗೆ ಸಂಬಂಧಿಸಿದಂತೆ ನಬಾರ್ಡ್ (NABARD) ಹಾಗೂ ರಾಜ್ಯ ಸರ್ಕಾರದ ಹಂತದಲ್ಲಿ ಚರ್ಚಿಸಿ ಶೀಘ್ರದಲ್ಲೇ ಸೂಕ್ತ ಪರಿಹಾರ ರೂಪಿಸಲಾಗುವುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement