ನವದೆಹಲಿ: ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ 2024ನೇ ಸಾಲಿನ ದಾದಾಸಾಹೇಬ ಫಾಲ್ಕೆ ಪ್ರಶಸ್ತಿಗೆ ಕನ್ನಡದ ಹಿರಿಯ ನಟ ಅನಂತ ನಾಗ್ ಭಾಜನರಾಗಿದ್ದಾರೆ. ಭಾರತೀಯ ಸಿನೆಮಾಕ್ಕೆ ಅವರು ನೀಡಿದ ಅಮೋಘ ಕೊಡುಗೆಯನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಅವರಿಗೆ ಘೋಷಿಸಲಾಗಿದೆ.
ಗುಜರಾತ್ನ ಕೆವಾಡಿಯಾದಲ್ಲಿ 2026ರ ಸೆಪ್ಟೆಂಬರ್ 22 ರಂದು ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಂತನಾಗ್ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ದಾದಾಸಾಹೇಬ ಫಾಲ್ಕೆ ಪ್ರಶಸ್ತಿಯನ್ನು ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವೆಂದು ಪರಿಗಣಿಸಲಾಗುತ್ತದೆ ಮತ್ತು ಭಾರತೀಯ ಚಿತ್ರರಂಗದ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ವ್ಯಕ್ತಿಯೊಬ್ಬರಿಗೆ ಇದನ್ನು ನೀಡಲಾಗುತ್ತದೆ.ವರನಟ ಡಾ. ರಾಜಕುಮಾರ ಅವರಿಗೆ ದೊರೆತ ಸುಮಾರು 30 ವರ್ಷಗಳ ಈಗ ಕನ್ನಡಕ್ಕೆ ಈ ಪ್ರಶಸ್ತಿ ಒಲಿದುಬಂದಿದೆ.
1970ರ ದಶಕದಲ್ಲಿ ಸಮಾನಾಂತರ ಸಿನೆಮಾ ಚಳವಳಿಯ ಪ್ರಮುಖ ಮುಖಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ ಅನಂತ ನಾಗ್, ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಸಿನೆಮಾಗಳಲ್ಲಿ ಅಭಿನಯಿಸಿ, ಸಹಜ ಅಭಿನಯ, ಬಹುಮುಖ ಪ್ರತಿಭೆ ಮತ್ತು ಸೂಕ್ಷ್ಮ ಭಾವಾಭಿವ್ಯಕ್ತಿಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದಾರೆ.
ಅನಂತ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. “ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ದಿಗ್ಗಜ ನಟ ಅನಂತ ನಾಗ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಹಲವು ದಶಕಗಳಿಂದ ಅವರ ಸಹಜ ಅಭಿನಯ, ಅಸಾಧಾರಣ ಬಹುಮುಖ ಪ್ರತಿಭೆ ಮತ್ತು ಕಲಾತ್ಮಕ ಮೆರುಗು ಭಾರತೀಯ ಚಿತ್ರರಂಗದ ಮೇಲೆ, ವಿಶೇಷವಾಗಿ ಕನ್ನಡ ಚಿತ್ರರಂಗದ ಮೇಲೆ ಅಳಿಸಲಾಗದ ಗುರುತು ಮೂಡಿಸಿದೆ” ಎಂದು ಮೋದಿ ಹೇಳಿದ್ದಾರೆ.
ಅಲ್ಲದೆ, “ಅವರು ನಿರ್ವಹಿಸಿದ ಪ್ರತಿಯೊಂದು ಪಾತ್ರಕ್ಕೂ ನೈಜತೆಯನ್ನು ತುಂಬಿದ್ದಾರೆ. ನಿಜಕ್ಕೂ ಒಬ್ಬ ವಿಶಿಷ್ಟ ಕಲಾವಿದನಿಗೆ ಸಲ್ಲಬೇಕಾದ ಗೌರವ ಇದಾಗಿದೆ” ಎಂದು ಪ್ರಧಾನಿ ಪ್ರಶಂಸಿಸಿದ್ದಾರೆ.
ಅನಂತ ನಾಗ್ ಅವರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅಭಿನಂದನೆ ಸಲ್ಲಿಸಿದ್ದು, ಇದು ಕನ್ನಡಿಗರಿಗೆ ಅತ್ಯಂತ ಹೆಮ್ಮೆಯ ಹಾಗೂ ಸಂತಸದ ಕ್ಷಣ ಎಂದು ಹೇಳಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ಅನಂತ ನಾಗ್, ಹಿಂದಿ, ಮರಾಠಿ, ತೆಲುಗು ಮತ್ತು ಮಲಯಾಳಂ ಭಾಷೆಗಳ ಸಿನೆಮಾಗಳು ಹಾಗೂ ದೂರದರ್ಶನ ಕ್ಷೇತ್ರಗಳಲ್ಲಿಯೂ ಗಮನಾರ್ಹ ಕೊಡುಗೆ ನೀಡಿದ್ದಾರೆ.ಖ್ಯಾತ ನಿರ್ದೇಶಕ ಶ್ಯಾಮ್ ಬೆನೆಗಲ್ ನಿರ್ದೇಶನದ ‘ಅಂಕುರ್’ (1974), ‘ನಿಶಾಂತ್’ (1975), ‘ಭೂಮಿಕಾ’ (1977) ಮತ್ತು ‘ಕೊಂಡೂರ’ (1978) ಸೇರಿದಂತೆ ಹಲವು ಕಲಾತ್ಮಕ ಚಿತ್ರಗಳು ಆರಂಭಿಕ ಹಂತದಲ್ಲೇ 78 ವರ್ಷದ ಅನಂತ ನಾಗ್ ಅವರಿಗೆ ವಿಮರ್ಶಕರ ಮೆಚ್ಚುಗೆ ತಂದುಕೊಟ್ಟಿದ್ದವು.
ಸೆಪ್ಟೆಂಬರ್ 4, 1948 ರಂದು ಜನಿಸಿದ ಅನಂತ ನಾಗ್ (ಮೂಲ ಹೆಸರು ಅನಂತ ನಾಗರಕಟ್ಟೆ), ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 250ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳು ಸೇರಿದಂತೆ ಒಟ್ಟು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಐದು ಬಾರಿ ರಾಜ್ಯ ಪ್ರಶಸ್ತಿ:
ಚಲನಚಿತ್ರಗಳಲ್ಲದೆ ಕಿರುತೆರೆ, ರಂಗಭೂಮಿಯಲ್ಲೂ ಅನಂತ ನಾಗ್ ಹೆಸರುವಾಸಿಯಾಗಿದ್ದಾರೆ. ಆರ್.ಕೆ. ನಾರಾಯಣ ಅವರ ಪ್ರಸಿದ್ಧ ಕೃತಿ ಆಧಾರಿತ ‘ಮಾಲ್ಗುಡಿ ಡೇಸ್’ ದೂರದರ್ಶನ ಧಾರಾವಾಹಿಯಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುವ ಮೂಲಕ ಅನಂತ ನಾಗ್ ದೇಶಾದ್ಯಂತ ಮನೆಮಾತಾಗಿದ್ದರು. ಈ ಧಾರಾವಾಹಿಯನ್ನು ಅವರ ಸಹೋದರ ಶಂಕರ ನಾಗ್ ನಿರ್ದೇಶಿಸಿದ್ದರು. ಚಿತ್ರರಂಗದ ಜೊತೆಗೆ ಅವರು ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
2025ರಲ್ಲಿ ಕೇಂದ್ರ ಸರ್ಕಾರ ಅನಂತ ನಾಗ್ ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮಭೂಷಣ’ ಪುರಸ್ಕಾರವನ್ನು ನೀಡಿ ಗೌರವಿಸಿತು.
ಅನಂತ ನಾಗ್ ಅವರಿಗೆ 2025ರ ಮೇ ತಿಂಗಳಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಭೂಷಣ ಪ್ರಶಸ್ತಿಯನ್ನೂ ಪ್ರದಾನ ಮಾಡಿದ್ದರು. ಇದೀಗ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ದೊರೆತಿರುವುದು ಅವರ ದೀರ್ಘಕಾಲದ ಕಲಾ ಸಾಧನೆಗೆ ಮತ್ತೊಂದು ಮಹತ್ವದ ಮಾನ್ಯತೆಯಾಗಿ ಪರಿಗಣಿಸಲಾಗಿದೆ.
ಕಳೆದ ವರ್ಷ ಈ ಪ್ರಶಸ್ತಿಯನ್ನು ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್ಲಾಲ್ ಅವರಿಗೆ ನೀಡಲಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ