ಮತ್ತೆ 23 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದ ಸರ್ಕಾರ ; ಒಟ್ಟು ತಾಲೂಕುಗಳ ಸಂಖ್ಯೆ 124ಕ್ಕೆ ಏರಿಕೆ

ಬೆಂಗಳೂರು: ರಾಜ್ಯ ಸರ್ಕಾರ ಗುರುವಾರ ಮತ್ತೆ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಹೀಗಾಗಿ ಈವರೆಗೆ ಬರಪೀಡಿತ ಎಂದು ಘೋಷಿಸಲಾದ ಒಟ್ಟು ತಾಲೂಕುಗಳ ಸಂಖ್ಯೆ 124ಕ್ಕೆ ಏರಿಕೆಯಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರವು (KSNDMC) ನಡೆಸಿದ ಸಮಗ್ರ ಮೌಲ್ಯಮಾಪನ ಮತ್ತು ಸ್ಥಳ ಪರಿಶೀಲನೆ (ground-truthing) ಆಧಾರದ ಮೇಲೆ ಕಂದಾಯ ಇಲಾಖೆಯು (ವಿಪತ್ತು ನಿರ್ವಹಣೆ) ಈಗ ಹೆಚ್ಚುವರಿಯಾಗಿ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಗುರುವಾರ ಆದೇಶ ಹೊರಡಿಸಿದೆ.
ಮೊದಲ ಹಂತದಲ್ಲಿ, ಆಗಸ್ಟ್ 27 ರಂದು ಸರ್ಕಾರ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. ನಂತರ, ರಾಜ್ಯದ ಹಲವು ಭಾಗಗಳಲ್ಲಿ ಮಳೆಯಿಲ್ಲದ ಪರಿಸ್ಥಿತಿ ಮುಂದುವರಿದ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರವು (KSNDMC) ಉಳಿದ 139 ತಾಲೂಕುಗಳ ವೈಜ್ಞಾನಿಕ ಮೌಲ್ಯಮಾಪನವನ್ನು ನಡೆಸಿತು.
ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರ ನೇತೃತ್ವದ ನೈಸರ್ಗಿಕ ವಿಕೋಪಗಳ ಕುರಿತ ಸಚಿವ ಸಂಪುಟ ಉಪ-ಸಮಿತಿಯ ನಿರ್ದೇಶನದ ಮೇರೆಗೆ, 24 ತಾಲೂಕುಗಳ ವ್ಯಾಪ್ತಿಯ 214 ಹಳ್ಳಿಗಳಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ಸ್ಥಳ ಪರಿಶೀಲನೆ ನಡೆಸಲಾಯಿತು.

ಸ್ಥಳ ಪರಿಶೀಲನಾ ಪ್ರಕ್ರಿಯೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರವು (KSNDMC) ಸಲ್ಲಿಸಿದ ಸಮಗ್ರ ವರದಿಯ ಆಧಾರದ ಮೇಲೆ ಈಗ ಹೆಚ್ಚುವರಿಯಾಗಿ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಪರಮೇಶ್ವರ ಅವರು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇವುಗಳಲ್ಲಿ 21 ತಾಲೂಕುಗಳನ್ನು ತೀವ್ರ ಬರಪೀಡಿತ ಮತ್ತು ಎರಡು ತಾಲೂಕುಗಳನ್ನು ಮಧ್ಯಮ ಬರಪೀಡಿತ ಎಂದು ವರ್ಗೀಕರಿಸಲಾಗಿದೆ. ಈ ಘೋಷಣೆಯು ತಕ್ಷಣದಿಂದಲೇ ಜಾರಿಗೆ ಬಂದಿದ್ದು, 6 ತಿಂಗಳವರೆಗೆ ಜಾರಿಯಲ್ಲಿರುತ್ತದೆ.

ಪ್ರಮುಖ ಸುದ್ದಿ :-   ರೇಣುಕಸ್ವಾಮಿ ಕೊಲೆ ಪ್ರಕರಣ : ಪ್ರದೋಷ್ ಮಾಫಿ ಸಾಕ್ಷಿಗೆ ಮತ್ತೆ ಕೋರ್ಟ್ ಒಪ್ಪಿಗೆ, ದರ್ಶನ್ ಅರ್ಜಿ ವಜಾ

ತೀವ್ರ ಬರಪೀಡಿತವೆಂದು ಘೋಷಿಸಲಾದ 21 ತಾಲೂಕುಗಳು:
ತುಮಕೂರು ಜಿಲ್ಲೆಯ ತಿಪಟೂರು
ಕೊಪ್ಪಳ ಜಿಲ್ಲೆಯ ಕಾರಟಗಿ
ರಾಯಚೂರು ಜಿಲ್ಲೆಯ ಮಾನ್ವಿ, ಸಿಂಧನೂರು ಮತ್ತು ಸಿರಿವಾರ
ಕಲಬುರಗಿ ಜಿಲ್ಲೆಯ ಅಫಜಲಪುರ, ಆಳಂದ, ಚಿತ್ತಾಪುರ, ಕಲಬುರಗಿ, ಯಡ್ರಾಮಿ ಮತ್ತು ಶಹಾಬಾದ್
ಬೀದರ ಜಿಲ್ಲೆಯ ಭಾಲ್ಕಿ
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಬಬಲೇಶ್ವರ ಮತ್ತು ತಿಕೋಟಾ
ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ
ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ನವಲಗುಂದ, ಹುಬ್ಬಳ್ಳಿ ನಗರ ಮತ್ತು ಅಣ್ಣಿಗೇರಿ
ಚಿಕ್ಕಮಗಳೂರು ಜಿಲ್ಲೆಯ ಕಡೂರು
ಮಧ್ಯಮ ಬರಪೀಡಿತ ತಾಲೂಕುಗಳು (2)
ಕೊಡಗು ಜಿಲ್ಲೆಯ ಪೊನ್ನಂಪೇಟೆ, ವೀರಾಜಪೇಟೆ.

ಸರ್ಕಾರವು ರಾಜ್ಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಗಳನ್ವಯ ಅಗತ್ಯ ಪರಿಹಾರ ಮತ್ತು ತುರ್ತು ಸ್ಪಂದನಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ಮುಖ್ಯಸ್ಥರಾಗಿರುವ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿದೆ.
ಬೆಳೆ ನಷ್ಟದ ಸಮೀಕ್ಷೆಯನ್ನು ಜಂಟಿಯಾಗಿ ನಡೆಸುವಂತೆ ಹಾಗೂ ಪರಿಹಾರದ ಅಂದಾಜು ವರದಿಗಳನ್ನು ಆದಷ್ಟು ಶೀಘ್ರವಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಕೃಷಿ ಆಯುಕ್ತರು, ತೋಟಗಾರಿಕೆ ನಿರ್ದೇಶಕರು ಮತ್ತು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಅಲ್ಲದೆ, ಸೆಪ್ಟೆಂಬರ್ ತಿಂಗಳಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆ ಇರುವುದರಿಂದ, ಕೆಎಸ್‌ಎನ್‌ಡಿಎಂಸಿ ಪ್ರತಿ ವಾರವೂ ಬರ ಪರಿಸ್ಥಿತಿಯನ್ನು ಪರಿಶೀಲಿಸಲಿದೆ ಎಂದು ಸರ್ಕಾರ ತಿಳಿಸಿದ್ದು,
ಅರ್ಹತೆಯ ಆಧಾರದ ಮೇಲೆ ಹೆಚ್ಚುವರಿ ತಾಲೂಕುಗಳನ್ನು ಹಂತ ಹಂತವಾಗಿ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗುತ್ತದೆ ಎಂದು ಹೇಳಿದೆ.

ಪ್ರಮುಖ ಸುದ್ದಿ :-   ರಾಜ್ಯದ ಬರಪೀಡಿತ ತಾಲೂಕುಗಳ ರೈತರಿಗೆ ದೊಡ್ಡ ರಿಲೀಫ್: ಬ್ಯಾಂಕ್ ಸಾಲ ಮರುಪಾವತಿಗೆ ವಿನಾಯಿತಿ ಘೋಷಣೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement