ರಾಜ್ಯದ ಕರಾವಳಿ ಭಾಗಕ್ಕೆ 32,611 ಕೋಟಿ ರೂ. ಯೋಜನೆಗಳು ; ಸಚಿವ ಸಂಪುಟ ಸಭೆ ಅನುಮೋದನೆ

ಮಂಗಳೂರು : ತುಳು ಭಾಷೆಗೆ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ  ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ 2026, 150 ಎಕರೆ ಪ್ರದೇಶದಲ್ಲಿ ಮೀನುಗಾರಿಕೆ ಪಾರ್ಕ್ ನಿರ್ಮಾಣ ಸೇರಿದಂತೆ 32,611 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಮಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಅನುಮೋದನೆ ನೀಡಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ  ಶಿವಕುಮಾರ ಅವರು, ಇದರಲ್ಲಿ 16,000 ಕೋಟಿ ರೂ. ಗ್ರಾಮೀಣಾಭಿವೃದ್ಧಿ ಯೋಜನೆಯಾಗಿದ್ದು, ಉಳಿದ ಹಣ ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿದೆ ಎಂದು ತಿಳಿಸಿದರು.
ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ
ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈವರೆಗಿನ ಎಲ್ಲಾ ನೀತಿಗಳಿಗಿಂತ ಭಿನ್ನವಾದ ನೀತಿ ಇದಾಗಲಿದೆ. ಹೂಡಿಕೆದಾರರಿಗೆ ಹೆಚ್ಚಿನ ಶಕ್ತಿ ಹಾಗೂ ಸಾಲ ಮರುಪಾವತಿಗೆ ಸಮಯಾವಕಾಶ ನೀಡಲಾಗುತ್ತದೆ. ಮಲೆನಾಡು ಒಳಗೊಂಡಂತೆ ಕರಾವಳಿ ಪ್ರದೇಶದಲ್ಲಿ ಹೊಸ ಪ್ರವಾಸೋದ್ಯಮ ನೀತಿ ಮೂಲಕ ಪ್ರವಾಸೋದ್ಯಮ ಯೋಜನೆಗಳನ್ನು ಮೂಲಸೌಕರ್ಯ ಯೋಜನೆಗಳೆಂದು ಪರಿಗಣಿಸಲಾಗುವುದು. ಅಲ್ಲದೆ ಅನೇಕ ಪ್ರೋತ್ಸಾಹಕಗಳನ್ನು ನೀಡಲು ಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಮೀನುಗಾರಿಕೆ, ಬಂದರು ನಿರ್ಮಾಣ ಯೋಜನೆಗಳು
 ಕರಾವಳಿಯ ಮೀನುಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮಂಗಳೂರು ಮೀನುಗಾರಿಕಾ ಬಂದರಿನ ಅಳಿವೆ ಬಾಗಿಲಿನಿಂದ ಕೋಟೆಪುರದವರೆಗೆ ಹೂಳೆತ್ತುವ ಕಾಮಗಾರಿಗೆ ಅನುಮತಿ ನೀಡಲಾಗಿದ್ದು, ಬೋಟುಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ನೇವಿಗೇಷನ್ ಬಾಯ್ಸ್ ಅಳವಡಿಸಲು ನಿರ್ಧರಿಸಲಾಗಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕರಾವಳಿಯನ್ನು ‘ವಿಶೇಷ ಸಮುದ್ರ ವಲಯ’ (SMZ) ಎಂದು ಗುರುತಿಸಲಾಗಿದ್ದು, ಮುಲ್ಕಿ ತಾಲೂಕಿನ ಬಳ್ಕುಂಜೆಯಲ್ಲಿ ಮೀನುಗಾರಿಕಾ ಪಾರ್ಕ್‌ಗೆ ಮೀಸಲಿಟ್ಟ ಜಾಗದಲ್ಲಿ ₹30 ಕೋಟಿ ವೆಚ್ಚದಲ್ಲಿ ವಿಶೇಷ ಸಂಸ್ಕರಣಾ ವಲಯ (SPZ) ಸ್ಥಾಪನೆಗೆ ಒಪ್ಪಿಗೆ ಸಿಕ್ಕಿದೆ.
ಉತ್ತರ ಕನ್ನಡ ಜಿಲ್ಲೆಯ ಮಂಕಿ ಬಂದರನ್ನು ಪಿಪಿಪಿ ಮಾದರಿಯಲ್ಲಿ ₹6,925 ಕೋಟಿ ವೆಚ್ಚದಲ್ಲಿ ಬಹುಉಪಯೋಗಿ ಬಂದರು ಹಾಗೂ ಹಡಗು ನಿರ್ಮಾಣ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯಿಂದ ರಾಜ್ಯಕ್ಕೆ ₹2,900 ಕೋಟಿಗೂ ಅಧಿಕ ಆದಾಯ ಮತ್ತು 44,800 ಉದ್ಯೋಗ ಸೃಷ್ಟಿಯಾಗುವ ಅಂದಾಜಿದೆ. ಕುಂದಾಪುರದ ಗಂಗೊಳ್ಳಿಯಲ್ಲಿ ₹322 ಕೋಟಿ ವೆಚ್ಚದಲ್ಲಿ ಗ್ರೀನ್‌ಫೀಲ್ಡ್ ಹಡಗು ನಿರ್ಮಾಣ ಅಂಗಳ ನಿರ್ಮಾಣಕ್ಕೂ ಒಪ್ಪಿಗೆ ನೀಡಲಾಗಿದೆ.
 ದಕ್ಷಿಣ ಕನ್ನಡಕ್ಕೆ ಮಂಗಳೂರು ಮರುನಾಮಕರಣ: ಜನಾಭಿಪ್ರಾಯ ಸಂಗ್ರಹ
ಮಂಗಳೂರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಇದೆ. ದಕ್ಷಿಣ ಕನ್ನಡದ ಬದಲಿಗೆ ಮಂಗಳೂರು ಎಂದು ಹೆಸರಿಸುವ ಬಗ್ಗೆ ಜನಾಭಿಪ್ರಾಯ ಪಡೆದು ತೀರ್ಮಾನಿಸಲಾಗುವುದು. ಕರಡು ಅಧಿಸೂಚನೆ ಹೊರಡಿಸಿ ಒಂದು ತಿಂಗಳ ಅವಧಿ ನೀಡಿ, ಜನರ ಭಾವನೆ, ಜನರ ಅಭಿಪ್ರಾಯ ಪಡೆದು ಈ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಮೀನುಗಾರಿಕಾ ವಿಶ್ವವಿದ್ಯಾಲಯ
ಮೀನುಗಾರಿಕೆಗೆ ಸಂಬಂಧಿಸಿದಂತೆ ವಿಶ್ವ ವಿದ್ಯಾನಿಲಯ (Fisheries, Blue economy university)ವನ್ನು ಸ್ಥಾಪಿಸಲಾಗುವುದು. ಪ್ರಸ್ತುತ ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳ ಪ್ರವೇಶವನ್ನು 60 ರಿಂದ 200 ಸೀಟುಗಳಿಗೆ ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದರು.
ಈ ಭಾಗದಲ್ಲಿ ಕಿದ್ವಾಯಿ, ಜಯದೇವ ಆಸ್ಪತ್ರೆಗೆ ಬೇಡಿಕೆ ಬಂದಿದೆ. ಅಲ್ಲದೆ, ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ 549 ಕೋಟಿ ರೂ. ಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
 ಬೆಂಗಳೂರಿನಿಂದಾಚೆಗೆ  ಇತರ ಜಿಲ್ಲೆಗಳಲ್ಲೂ ಸಚಿವ ಸಂಪುಟ ಸಭೆ ನಡೆಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಮುಂದಿನ 15 ತಿಂಗಳ ಅವಧಿಯಲ್ಲಿ 10 – 12 ಸ್ಥಳಗಳಲ್ಲಿ ಸಚಿವ ಸಂಪುಟ ಸಭೆ ನಡೆಸುವ ಉದ್ದೇಶವಿದೆ. ಎಲ್ಲಿ ಸಾಮರ್ಥ್ಯವಿದೆ ಹಾಗೂ ಅಗತ್ಯವಿದೆಯೋ ಅಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗುವುದು. ಸಮಗ್ರ ಕರ್ನಾಟಕ ಅಭಿವೃದ್ಧಿ ನಮ್ಮ ಗುರಿ ಎಂದು ಅವರು ತಿಳಿಸಿದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement