ಕಾರವಾರ : ದೇಶದ ಸಮುದ್ರ ಗಡಿಗಳ ರಕ್ಷಣೆಯಲ್ಲಿ ಎರಡು ದಶಕಗಳ ಕಾಲ ವಿಶಿಷ್ಟ ಸೇವೆ ಸಲ್ಲಿಸಿದ್ದ ಭಾರತೀಯ ಕರಾವಳಿ ರಕ್ಷಣಾ ಪಡೆಯ (ಕೋಸ್ಟ್ ಗಾರ್ಡ್) ಹಡಗು ಐಸಿಜಿಎಸ್ ಸಾವಿತ್ರಿಬಾಯಿ ಫುಲೆಗೆ ಶನಿವಾರ ಸಂಜೆ ಕಾರವಾರ ಬಂದರಿನ ಕರಾವಳಿ ರಕ್ಷಣಾ ಪಡೆಯ ಜೆಟ್ಟಿಯಲ್ಲಿ ಸಾಂಪ್ರದಾಯಿಕ ಗೌರವ ನೀಡಿ ವಿದಾಯ ನೀಡಿ ಅಧಿಕೃತವಾಗಿ ಸೇವೆಯಿಂದ ನಿವೃತ್ತಿಗೊಳಿಸಲಾಯಿತು.
ಸೂರ್ಯಾಸ್ತದ ಸಮಯದಲ್ಲಿ, ಹಡಗಿನ ಸೇವಾ ನಿವೃತ್ತಿ ಸಮಾರಂಭದಲ್ಲಿ, ಹಡಗಿನ ಮೇಲೆ ಅದರ ಸಕ್ರಿಯ ಸೇವಾ ಅವಧಿಯುದ್ದಕ್ಕೂ ಹಾರಾಡುತ್ತಿದ್ದ ರಾಷ್ಟ್ರಧ್ವಜ ಹಾಗೂ ಕರಾವಳಿ ರಕ್ಷಣಾ ಪಡೆಯ ಧ್ವಜವನ್ನು ಗೌರವಪೂರ್ವಕವಾಗಿ ಇಳಿಸಲಾಯಿತು. ಕಮಾಂಡಿಂಗ್ ಆಫೀಸರ್ ಗೌರವ್ ಶ್ರೀವಾಸ್ತವ ಅವರು ಧ್ವಜಗಳನ್ನು ಕೆಳಗಿಳಿಸಿ, ಗಾಜಿನ ಪೆಟ್ಟಿಗೆಯಲ್ಲಿರಿಸಿ, ಕರಾವಳಿ ರಕ್ಷಕ ಪಡೆಯ ಉಪ ಮಹಾನಿರೀಕ್ಷಕ ಪ್ರವೀಣಕುಮಾರ ಮಿಶ್ರಾ ಅವರಿಗೆ ಹಸ್ತಾಂತರಿಸುವ ಮೂಲಕ ಹಡಗಿನ ಸೇವೆಯನ್ನು ಅಧಿಕೃತವಾಗಿ ಕೊನೆಗೊಳಿಸಿದರು.
ಬಳಿಕ ಹಡಗಿನ ಉದ್ದಕ್ಕೆ ಸಮಾನವಾದ ವಿಶೇಷ ‘ಪೇಯಿಂಗ್ ಆಫ್ ಪೆನ್ನಂಟ್’ ಅನ್ನು ಕೆಳಗಿಳಿಸುವ ಮೂಲಕ ಹಡಗಿನ ಸೇವಾ ಅವಧಿಗೆ ಅಧಿಕೃತ ಅಂತ್ಯ ಘೋಷಿಸಲಾಯಿತು. ಈ ಸಂದರ್ಭದಲ್ಲಿ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ಗೌರವ ವಂದನೆ ಸಲ್ಲಿಸಿದರು.
ಹಡಗು ತನ್ನ ಸೇವಾ ಅವಧಿಯಲ್ಲಿ ಸುಮಾರು 78,468 ನಾಟಿಕಲ್ ಮೈಲುಗಳಷ್ಟು ಗಸ್ತು ನಡೆಸಿದೆ. 14 ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಹಾಗೂ 4 ವೈದ್ಯಕೀಯ ಸ್ಥಳಾಂತರ (ಮೆಡಿಕಲ್ ಇವಾಕ್ಯುವೇಷನ್) ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಒಟ್ಟು 71 ಮಂದಿಯ ಜೀವಗಳನ್ನು ರಕ್ಷಿಸಿದೆ. ಅಲ್ಲದೆ ಎರಡು ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆಗಳನ್ನೂ ಯಶಸ್ವಿಯಾಗಿ ನಡೆಸಿದೆ.
ಶೋಧ ಮತ್ತು ರಕ್ಷಣಾ ಕಾರ್ಯಗಳಲ್ಲಿ ಅತ್ಯುತ್ತಮ ಸಾಧನೆಗಾಗಿ ಈ ಹಡಗು 2006-07, 2010-11 ಹಾಗೂ 2014ನೇ ಸಾಲುಗಳಲ್ಲಿ ‘ಅತ್ಯುತ್ತಮ ಶೋಧ ಮತ್ತು ರಕ್ಷಣಾ ಘಟಕ’ ಪ್ರಶಸ್ತಿಯನ್ನು ಪಡೆದಿದೆ. ಗೋವಾ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿಸಲಾದ ಈ ಹಡಗು ಆತ್ಮನಿರ್ಭರ ಭಾರತದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಕರಾವಳಿ ರಕ್ಷಣಾ ಪಡೆಯ ಉಪ ಮಹಾನಿರೀಕ್ಷಕ (ಡಿಐಜಿ) ಪ್ರವೀಣಕುಮಾರ ಮಿಶ್ರಾ, ಸಾವಿತ್ರಿಬಾಯಿ ಫುಲೆ ಕೇವಲ ಉಕ್ಕು ಮತ್ತು ಯಂತ್ರಗಳ ಸಮೂಹವಾಗಿರಲಿಲ್ಲ. ವಿವಿಧ ಅವಧಿಗಳಲ್ಲಿ ಸೇವೆ ಸಲ್ಲಿಸಿದ ಕಮಾಂಡಿಂಗ್ ಅಧಿಕಾರಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಮರ್ಪಿತ ಶ್ರಮದಿಂದ ಈ ಹಡಗು ಜೀವಂತವಾಗಿತ್ತು ಎಂದು ಅವರು ಹೇಳಿದರು.
ಕಳೆದ 20 ವರ್ಷಗಳ ಕಾಲ ಈ ಹಡಗು ನಿರಂತರವಾಗಿ ಭಾರತದ ಸಮುದ್ರ ಗಡಿಗಳನ್ನು ಕಾಪಾಡಿದ್ದು, ಕರಾವಳಿ ಭದ್ರತೆಗೆ ಮಹತ್ವದ ಕೊಡುಗೆ ನೀಡಿದೆ. ತೀವ್ರ ಹವಾಮಾನ, ಭಾರೀ ಮಳೆ ಹಾಗೂ ಬಿರುಗಾಳಿಯಂತಹ ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಗಸ್ತು ಮತ್ತು ಸಮುದ್ರ ಸುರಕ್ಷತಾ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ ಮೀನುಗಾರರು ಹಾಗೂ ನಾವಿಕರಿಗೆ ಈ ಹಡಗು ಆಶಾಕಿರಣವಾಗಿ ನೆರವು ನೀಡಿದೆ ಎಂದು ಅವರು ಹೇಳಿದರು.
ಈಗ ಹಡಗು ಸಕ್ರಿಯ ಸೇವೆಯಿಂದ ನಿವೃತ್ತಿಯಾಗುತ್ತಿದ್ದರೂ, ಕರಾವಳಿ ರಕ್ಷಣಾ ಪಡೆಯ ಇತಿಹಾಸದಲ್ಲಿ ಅದರ ಸೇವೆ ಮತ್ತು ಪರಂಪರೆ ಶಾಶ್ವತವಾಗಿ ಉಳಿಯಲಿದೆ ಎಂದು ಮಿಶ್ರಾ ಹೇಳಿದರು. ಹಡಗಿನಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳು, ನಾವಿಕರು, ತಾಂತ್ರಿಕ ಸಿಬ್ಬಂದಿ, ಎಂಜಿನಿಯರ್ಗಳು, ಎಲೆಕ್ಟ್ರಿಷಿಯನ್ಗಳು, ಶಸ್ತ್ರಾಸ್ತ್ರ ತಜ್ಞರು ಹಾಗೂ ಲಾಜಿಸ್ಟಿಕ್ಸ್ ಸಿಬ್ಬಂದಿಗೆ ಅವರು ಅಭಿನಂದನೆ ಸಲ್ಲಿಸಿದರು.
ಹಡಗಿನ ಕಮಾಂಡಿಂಗ್ ಅಧಿಕಾರಿ ಕಮಾಂಡೆಂಟ್ ಗೌರವ್ ಶ್ರೀವಾಸ್ತವ ಮಾತನಾಡಿ, ಸಾವಿತ್ರಿಬಾಯಿ ಫುಲೆ ಹಡಗಿನ ಸುದೀರ್ಘ ಹಾಗೂ ಹೆಮ್ಮೆಯ ಸೇವಾ ಪಯಣವನ್ನು ಸ್ಮರಿಸಿದರು. 2006ರ ಅಕ್ಟೋಬರ್ 28ರಂದು ಸೇವೆಗೆ ಸೇರ್ಪಡೆಯಾದ ಈ ಹಡಗು ಕಳೆದ 20 ವರ್ಷಗಳಲ್ಲಿ ದೇಶದ ಸಮುದ್ರ ಗಡಿಗಳ ಮೇಲ್ವಿಚಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಕರಾವಳಿ ರಕ್ಷಣಾ ಪಡೆಯ ಕಾರವಾರ ಘಟಕದ ಕಮಾಂಡರ್ ಅಖಿಲ್ ಯಾದವ್, ಡೆಪ್ಯುಟಿ ಕಮಾಂಡೆಂಟ್ ಆಂಥೋನಿ ಮರಿಯಪ್ಪ, ಸಿಐಎಸ್ಎಫ್ ಕೈಗಾದ ಕಮಾಂಡಿಂಗ್ ಅಧಿಕಾರಿ ಅಜಯ್ ಕುಮಾರ್ ಝಾ, ನಿವೃತ್ತ ಡಿಐಜಿ ಮನೋಜ್ ಬಡ್ಕರ್ ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ