ಉತ್ತರ ಕೊರಿಯಾದ ಪ್ರಮುಖ ಅಣುಪರೀಕ್ಷಾ ಕೇಂದ್ರವಾಗಿರುವ ಮೌಂಟ್ ಮಂಟಾಪ್ (Mount Mantap) ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಭೂಕಂಪಗಳ ಸಂಖ್ಯೆ ಹೆಚ್ಚುತ್ತಿರುವುದು ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ. 2017ರಲ್ಲಿ ಉತ್ತರ ಕೊರಿಯಾ ನಡೆಸಿದ ಅತಿದೊಡ್ಡ ನೆಲದೊಳಗಿನ ಅಣುಪರೀಕ್ಷೆಯೇ ಇದಕ್ಕೆ ಕಾರಣವಾಗಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಅಧ್ಯಯನದ ಪ್ರಕಾರ, ಮೌಂಟ್ ಮಂಟಾಪ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಸುಮಾರು 2,000 ವರ್ಷಗಳಿಂದ ಗಮನಾರ್ಹ ಭೂಕಂಪಗಳು ದಾಖಲಾಗಿರಲಿಲ್ಲ. ಆದರೆ 2008ರಿಂದ 2025ರವರೆಗೆ ಸಂಗ್ರಹಿಸಿದ ಮಾಹಿತಿಯನ್ನು ಪರಿಶೀಲಿಸಿದಾಗ, ಈ ಪ್ರದೇಶದಲ್ಲಿ ಒಟ್ಟು 1,399 ಭೂಕಂಪಗಳು ಸಂಭವಿಸಿರುವುದು ಪತ್ತೆಯಾಗಿದೆ.
ಉತ್ತರ ಕೊರಿಯಾ 2006ರಿಂದ 2017ರ ನಡುವೆ ಇದೇ ಪ್ರದೇಶದಲ್ಲಿ ಆರು ಭೂಗತ ಅಣುಪರೀಕ್ಷೆಗಳನ್ನು ನಡೆಸಿತ್ತು. ಸಾಮಾನ್ಯವಾಗಿ ಅಣುಸ್ಫೋಟದ ಪರಿಣಾಮದಿಂದ ಉಂಟಾಗುವ ಭೂಕಂಪ ಚಟುವಟಿಕೆಗಳು ಸ್ವಲ್ಪ ಸಮಯದ ಬಳಿಕ ಕಡಿಮೆಯಾಗುತ್ತವೆ. ಆದರೆ ಮೌಂಟ್ ಮಂಟಾಪ್ ಪ್ರದೇಶದಲ್ಲಿ ವರ್ಷಗಳು ಕಳೆದರೂ ಭೂಕಂಪಗಳ ಸಂಖ್ಯೆ ಮತ್ತು ತೀವ್ರತೆ ಹೆಚ್ಚುತ್ತಿರುವುದು ವಿಜ್ಞಾನಿಗಳ ಗಮನ ಸೆಳೆದಿದೆ.
ಈ ಪ್ರದೇಶದಲ್ಲಿ ಮೊದಲ ಭೂಕಂಪ 2013ರಲ್ಲಿ, ಉತ್ತರ ಕೊರಿಯಾದ ಮೂರನೇ ಅಣುಪರೀಕ್ಷೆಯ ಬಳಿಕ ದಾಖಲಾಗಿತ್ತು. ಆದರೆ ನಂತರ ಕೆಲವು ವರ್ಷಗಳ ಕಾಲ ಭೂಕಂಪಗಳು ವಿರಳವಾಗಿದ್ದವು. 2017ರಲ್ಲಿ ನಡೆದ ಆರನೇ ಹಾಗೂ ಅತಿದೊಡ್ಡ ಅಣುಪರೀಕ್ಷೆಯ ಬಳಿಕ ಭೂಕಂಪಗಳು ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಅಧ್ಯಯನ ತಿಳಿಸಿದೆ.
2017ರ ಅಣುಪರೀಕ್ಷೆಯಿಂದ 6.3 ತೀವ್ರತೆಯ ಭೂಕಂಪ ಉಂಟಾಗಿತ್ತು. ಈ ಸ್ಫೋಟದಿಂದ ಪರೀಕ್ಷಾ ಸುರಂಗಗಳು ಕುಸಿದಿರಬಹುದು. ಅಲ್ಲದೆ, ಪರ್ವತದ ಶಿಖರದ ಆಕಾರವೂ ಸುಮಾರು ಮೂರು ಮೀಟರ್‌ಗಳಷ್ಟು ಬದಲಾಗಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ಅಣುಪರೀಕ್ಷೆಗಳ ಬಳಿಕ ದಾಖಲಾಗಿರುವ ಹೆಚ್ಚಿನ ಭೂಕಂಪಗಳು ಸಣ್ಣ ಪ್ರಮಾಣದವುಗಳಾಗಿವೆ. ದಕ್ಷಿಣ ಕೊರಿಯಾದ ಪುಸಾನ್ ನ್ಯಾಷನಲ್ ಯೂನಿವರ್ಸಿಟಿಯ ಭೂವಿಜ್ಞಾನ ವಿಭಾಗದ ಪ್ರಾಧ್ಯಾಪಕ ಕಿಮ್ ಅವರ ಪ್ರಕಾರ, ಬಹುತೇಕ ಭೂಕಂಪಗಳ ತೀವ್ರತೆ 2ರಿಂದ 3ರ ನಡುವೆಯೇ ಇತ್ತು. ಇವು ಭೂಮಿಯ ಮೇಲ್ಮೈಗೆ ಸಮೀಪದ ಭೂಮಿಯ ಆಳದಲ್ಲಿ ಸಂಭವಿಸಿವೆ.
ಈ ಪ್ರದೇಶದಲ್ಲಿ ಅಣುಪರೀಕ್ಷೆಗಳು ಆರಂಭವಾಗುವ ಮೊದಲು ಭೂಕಂಪ ಚಟುವಟಿಕೆ ಅತ್ಯಂತ ಕಡಿಮೆ ಇತ್ತು. ಚೀನಾ ಮತ್ತು ಕೊರಿಯಾದ ಸುಮಾರು 2,000 ವರ್ಷಗಳ ಐತಿಹಾಸಿಕ ದಾಖಲೆಗಳಲ್ಲಿಯೂ ಈ ಭಾಗದಲ್ಲಿ ಭೂಕಂಪಗಳು ಅಪರೂಪವಾಗಿದ್ದವು ಎಂದು ಕಿಮ್ ತಿಳಿಸಿದ್ದಾರೆ.
ವಿಜ್ಞಾನಿಗಳ ಪ್ರಕಾರ, 2017ರ ಭಾರೀ ಅಣುಸ್ಫೋಟದಿಂದ ಪರ್ವತದ ಒಳಭಾಗದ ಭೂಪದರದಲ್ಲಿ ಶಾಶ್ವತ ಬದಲಾವಣೆ ಉಂಟಾಗಿರಬಹುದು.
ಅಲ್ಲದೆ, ಸ್ಫೋಟದಿಂದ ಬಂಡೆಗಳಲ್ಲಿ ಉಂಟಾದ ಬಿರುಕುಗಳಲ್ಲಿ ನೀರು ಸೇರಿಕೊಂಡಿದ್ದು, ಅದರ ಒತ್ತಡದಿಂದ ಬಂಡೆಗಳು ನಿಧಾನವಾಗಿ ಜಾರುತ್ತಿವೆ. ಇದರ ಪರಿಣಾಮವಾಗಿ ಸಣ್ಣ ಪ್ರಮಾಣದ ಭೂಕಂಪಗಳು ನಿರಂತರವಾಗಿ ಸಂಭವಿಸುತ್ತಿವೆ ಎಂದು ಅಧ್ಯಯನ ವಿವರಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ