ಟ್ರಾಯ್‌ ಹೊಸ ನಿಯಮ ; ಎ2ಪಿ(A2P) ಫೋನ್‌ ಕರೆಗಳಿಗೆ ನಿಮಿಷಕ್ಕೆ 5 ಪೈಸೆವರೆಗೆ ಶುಲ್ಕ ವಿಧಿಸಿದ ಟ್ರಾಯ್‌

ನವದೆಹಲಿ: ಅನಗತ್ಯ ವಾಣಿಜ್ಯ ಕರೆಗಳು ಮತ್ತು ಸ್ಪ್ಯಾಮ್ ಕರೆಗಳಿಗೆ ಕಡಿವಾಣ ಹಾಕಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹೊಸ ಹಾಗೂ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಇದರ ಭಾಗವಾಗಿ, ಅಪ್ಲಿಕೇಶನ್-ಟು-ಪರ್ಸನ್ (A2P) ಕರೆಗಳ ಮೇಲೆ ಪ್ರತಿ ನಿಮಿಷಕ್ಕೆ ಗರಿಷ್ಠ 5 ಪೈಸೆಯವರೆಗೆ ಟರ್ಮಿನೇಷನ್ ಶುಲ್ಕ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಶುಲ್ಕವನ್ನು ಕರೆ ಆರಂಭಿಸುವ ಟೆಲಿಕಾಂ ಸೇವಾ ಪೂರೈಕೆದಾರರು (Originating Access Provider), ಕರೆ ಸ್ವೀಕರಿಸುವ ಟೆಲಿಕಾಂ ಸೇವಾ ಪೂರೈಕೆದಾರರಿಗೆ (Terminating Access Provider) ಪಾವತಿಸಬೇಕು. ಆದರೆ, ವಾಸ್ತವವಾಗಿ ಎಷ್ಟು ಶುಲ್ಕ ವಿಧಿಸಬೇಕು ಎಂಬುದನ್ನು ಟೆಲಿಕಾಂ ಸೇವಾ ಪೂರೈಕೆದಾರರು ಪರಸ್ಪರ ನಡೆಸುವ ವಾಣಿಜ್ಯ ಮಾತುಕತೆಯ ಮೂಲಕ ನಿರ್ಧರಿಸಿಕೊಳ್ಳಬೇಕು. ಆದರೆ ಪ್ರತಿ ನಿಮಿಷಕ್ಕೆ ಗರಿಷ್ಠ ಮಿತಿ 5 ಪೈಸೆಯಾಗಿರುತ್ತದೆ.
ಅನಗತ್ಯ ವಾಣಿಜ್ಯ ಸಂವಹನ (UCC), ಸ್ಪ್ಯಾಮ್ ಕರೆಗಳು ಮತ್ತು ರೋಬೋ ಕಾಲ್‌ಗಳನ್ನು ತಡೆಯಲು ಈ ನಿಯಮಗಳನ್ನು ರೂಪಿಸಲಾಗಿದೆ. ಹೊಸ ವ್ಯವಸ್ಥೆಯಡಿ, ಟೆಲಿಕಾಂ ಕಂಪನಿಗಳು ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಜ್ಞಾನ ಬಳಸಿ ಸ್ಪ್ಯಾಮ್ ಚಟುವಟಿಕೆಯಲ್ಲಿ ತೊಡಗಿರುವ ಸಾಧ್ಯತೆ ಹೆಚ್ಚಿರುವ ದೂರವಾಣಿ ಸಂಖ್ಯೆಗಳನ್ನೂ ಗುರುತಿಸಲಿವೆ. ಇಂತಹ ಶಂಕಿತ ಸಂಖ್ಯೆಗಳ ಮಾಹಿತಿಯನ್ನು ಇತರ ಟೆಲಿಕಾಂ ಸೇವಾ ಪೂರೈಕೆದಾರರೊಂದಿಗೂ ಹಂಚಿಕೊಳ್ಳಲಾಗುತ್ತದೆ.

ಒಬ್ಬರೇ ಸೆಂಡರ್‌ ಅಥವಾ ಕಳುಹಿಸುವವರೊಂದಿಗೆ ಸಂಬಂಧ ಹೊಂದಿರುವ ಹಲವು ಸಂಖ್ಯೆಗಳ ವಿರುದ್ಧ ಸ್ಪ್ಯಾಮ್ ದೂರುಗಳು ಬಂದರೆ ಅಥವಾ ಅವುಗಳ ಬಗ್ಗೆ ಅನುಮಾನ ಮೂಡಿದರೆ, ಆ ಕಳುಹಿಸುವವರ ಕುರಿತು ಹೆಚ್ಚಿನ ಪರಿಶೀಲನೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲು ಅವಕಾಶವಿದೆ.
ಒಬ್ಬರೇ ಕಳುಹಿಸುವವರೊಂದಿಗೆ ಸಂಬಂಧ ಹೊಂದಿರುವ ಐದು ಅಥವಾ ಅದಕ್ಕಿಂತ ಹೆಚ್ಚು ಸಂಖ್ಯೆಗಳು 10 ದಿನಗಳ ಅವಧಿಯಲ್ಲಿ ಸ್ಪ್ಯಾಮ್ ಚಟುವಟಿಕೆಗೆ ಸಂಬಂಧಿಸಿ ಗುರುತಿಸಲ್ಪಟ್ಟರೆ, ಟೆಲಿಕಾಂ ಕಂಪನಿಗಳು ಆ ಕಳುಹಿಸುವವರ ಕೆವೈಸಿ (KYC-ನಿಮ್ಮ ಗ್ರಾಹಕರನ್ನು ತಿಳಿಯಿರಿ) ದಾಖಲೆಗಳನ್ನು ಮರುಪರಿಶೀಲಿಸಬಹುದು. ಅಗತ್ಯವಿದ್ದರೆ ಕಳುಹಿಸುವವರ ಭೌತಿಕ ಪರಿಶೀಲನೆಯನ್ನೂ ನಡೆಸಬಹುದು.
ಪರಿಶೀಲನೆಯ ಬಳಿಕ ಉಲ್ಲಂಘನೆ ಕಂಡುಬಂದರೆ, ಆ ಕಳುಹಿಸುವವರಿಂದ ಹೊರಹೋಗುವ ಕರೆ ಸೇವೆಗಳನ್ನು (Outgoing Services) ನಿರ್ಬಂಧಿಸಬಹುದು. ನಿಯಮ ಉಲ್ಲಂಘನೆ ಮತ್ತೆ ಮತ್ತೆ ನಡೆದರೆ, ಅವರ ಟೆಲಿಕಾಂ ಸಂಪರ್ಕವನ್ನೇ ಸಂಪೂರ್ಣವಾಗಿ ಕಡಿತಗೊಳಿಸುವ ಕ್ರಮವನ್ನೂ ಕೈಗೊಳ್ಳಬಹುದು.
ಹೊಸ ನಿಯಮಗಳು ಸ್ವಯಂಚಾಲಿತ ವಾಣಿಜ್ಯ ಕರೆಗಳಿಗೂ ಅನ್ವಯಿಸುತ್ತವೆ. ವ್ಯಕ್ತಿಯೊಬ್ಬರು ನೇರವಾಗಿ ಫೋನ್‌ ಸಂಖ್ಯೆ ಡಯಲ್ ಮಾಡದೆ, ಆ್ಯಪ್‌, ಸ್ವಯಂಚಾಲಿತ ಪ್ಲಾಟ್‌ಫಾರ್ಮ್ ಅಥವಾ ಸಾಫ್ಟ್‌ವೇರ್ ವ್ಯವಸ್ಥೆಯ ಮೂಲಕ ಮಾಡುವ ಕರೆಗಳನ್ನು ಟ್ರಾಯ್ ‘ಅಪ್ಲಿಕೇಶನ್-ಟು-ಪರ್ಸನ್’ (A2P) ಕರೆ ಎಂದು ವ್ಯಾಖ್ಯಾನಿಸಿದೆ. ರೋಬೋ ಕಾಲ್‌ಗಳು, ಸ್ವಯಂಚಾಲಿತವಾಗಿ ಸಂಖ್ಯೆಗಳನ್ನು ಡಯಲ್ ಮಾಡುವ ಕರೆಗಳು, ಮೊದಲೇ ಧ್ವನಿಮುದ್ರಿಸಿರುವ ಸಂದೇಶಗಳನ್ನು ಒಳಗೊಂಡ ಕರೆಗಳು ಹಾಗೂ ಕೃತಕ ಅಥವಾ ದಾಖಲೆ ಮಾಡಲಾದ ಧ್ವನಿ ಬಳಸುವ ಕರೆಗಳೂ ಇದರ ವ್ಯಾಪ್ತಿಗೆ ಬರುತ್ತವೆ.

ಪ್ರಮುಖ ಸುದ್ದಿ :-   ವಿಡಿಯೋ | ಸ್ನೇಹಿತರ ಜಗಳದ ಬಳಿಕ ರೋಷಾವೇಶ ; ಗೆಳೆಯರಿದ್ದ ಕಾರಿಗೆ ಪದೇ ಪದೇ ಥಾರ್‌ ಡಿಕ್ಕಿ ಹೊಡೆಸಿದ ಯುವಕ !

‘ಅಪ್ಲಿಕೇಶನ್-ಟು-ಪರ್ಸನ್’ (A2P ಕರೆ ವ್ಯವಸ್ಥೆ ಬಳಸುವ ಎಲ್ಲ ವ್ಯವಹಾರ ಸಂಸ್ಥೆಗಳು ತಮ್ಮ ಸೇವೆಯ ಬಗ್ಗೆ ಸಂಬಂಧಿತ ಟೆಲಿಕಾಂ ಸೇವಾ ಪೂರೈಕೆದಾರರಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಇಂತಹ ಕರೆಗಳಿಗೆ ಬಳಸುವ ದೂರವಾಣಿ ಸಂಖ್ಯೆಗಳನ್ನೂ ಘೋಷಿಸಬೇಕು. ಈ ರೀತಿ ಎ2ಪಿ(A2P) ಕರೆಗಳ ಬಗ್ಗೆ ಮಾಹಿತಿ ನೀಡದೆ ಕರೆ ಮಾಡಿದರೆ, ಅಂತಹ ಕರೆಗಳನ್ನು ಅನಗತ್ಯ ವಾಣಿಜ್ಯ ಸಂವಹನ (UCC) ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಟ್ರಾಯ್‌ (TRAI) ಸ್ಪಷ್ಟಪಡಿಸಿದೆ.
ಎ2ಪಿ(A2P) ಕರೆಗಳಿಗೂ ಪ್ರತಿ ನಿಮಿಷಕ್ಕೆ ಗರಿಷ್ಠ 5 ಪೈಸೆಯವರೆಗೆ ಟರ್ಮಿನೇಷನ್ ಚಾರ್ಜ್ ವಿಧಿಸಲು ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಆದರೆ, ನಿಯಂತ್ರಿತ ವಾಣಿಜ್ಯ ಸಂವಹನಗಳಿಗೆ ಮೀಸಲಾಗಿರುವ ವಿಶೇಷ ಸಂಖ್ಯಾ ಸರಣಿಗಳ ಮೂಲಕ ಮಾಡುವ ಕರೆಗಳಿಗೆ ಈ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಇದರ ಜತೆಗೆ, ಗ್ರಾಹಕರಿಗೆ ಇಂತಹ ನಿರ್ಧಾರಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕರೆಗಳನ್ನು ನಿರ್ವಹಿಸುವ ಆ್ಯಪ್‌ಗಳ ಮೇಲೂ ಹೊಸ ನಿರ್ಬಂಧಗಳನ್ನು ವಿಧಿಸಲಾಗಿದೆ.
ಒಟ್ಟಿನಲ್ಲಿ, ಸ್ಪ್ಯಾಮ್ ಕರೆಗಳು, ಅನಗತ್ಯ ವಾಣಿಜ್ಯ ಕರೆಗಳು ಮತ್ತು ಸ್ವಯಂಚಾಲಿತ ಕರೆಗಳ ನಿಯಂತ್ರಣವನ್ನು ಬಿಗಿಗೊಳಿಸುವುದು ಹೊಸ ನಿಯಮಗಳ ಉದ್ದೇಶವಾಗಿದೆ. ಎಐ (AI) ಆಧಾರಿತ ಪತ್ತೆ ವ್ಯವಸ್ಥೆ, ಟೆಲಿಕಾಂ ಕಂಪನಿಗಳ ನಡುವೆ ಶಂಕಿತ ಸಂಖ್ಯೆಗಳ ಮಾಹಿತಿ ಹಂಚಿಕೆ, ಕೆವೈಸಿ (KYC) ಮರುಪರಿಶೀಲನೆ, ಭೌತಿಕ ಪರಿಶೀಲನೆ, ಕರೆ ಸೇವೆ ನಿರ್ಬಂಧ ಹಾಗೂ ಅಗತ್ಯವಿದ್ದರೆ ಸಂಪರ್ಕ ಕಡಿತದಂತಹ ಕ್ರಮಗಳ ಮೂಲಕ ಸ್ಪ್ಯಾಮ್ ಕರೆಗಳ ನಿಯಂತ್ರಣಕ್ಕೆ ಟ್ರಾಯ್‌ (TRAI) ಮುಂದಾಗಿದೆ.

ಪ್ರಮುಖ ಸುದ್ದಿ :-   ಮಹಾರಾಷ್ಟ್ರದ ಶಿಕ್ಷಣ ತಜ್ಞ ಅಶೋಕ ಪಾಟೀಲ ಮಗಳು ಸ್ವೀಡನ್ ಸಂಸತ್ತಿಗೆ ಆಯ್ಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement