ಗದಗ ಬರಪೀಡಿತ ತಾಲೂಕು ಎಂದು ಘೋಷಿಸದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ : ತಮ್ಮದೇ ಪಕ್ಷದ ಸರ್ಕಾರಕ್ಕೆ ಎಚ್‌.ಕೆ. ಪಾಟೀಲ ಎಚ್ಚರಿಕೆ

ಗದಗ: ಅಕ್ಟೋಬರ್‌ 10ರ ಒಳಗೆ ಗದಗ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಾಂಗ್ರೆಸ್‌ ಶಾಸಕ ಎಚ್‌.ಕೆ. ಪಾಟೀಲ ರಾಜ್ಯ ಸರ್ಕಾರಕ್ಕೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.
ಮುಳಗುಂದದಲ್ಲಿ ಮಾತನಾಡಿದ ಅವರು, ನಿರಂತರ ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಗದಗ ತಾಲೂಕಿನ ಪರಿಸ್ಥಿತಿಯನ್ನು ಅಧಿಕಾರಿಗಳು ಈಗಾಗಲೇ ಪರಿಶೀಲಿಸಿದ್ದಾರೆ. ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದೊಂದಿಗೆ ನಡೆದ ಸಭೆಗಳಲ್ಲಿಯೂ ಈ ಕುರಿತು ಸವಿಸ್ತಾರ ಚರ್ಚೆ ನಡೆದಿದೆ ಎಂದು ತಿಳಿಸಿದರು.
ಗದಗ ತಾಲೂಕಿನಲ್ಲಿ ಶೇ.49ರಷ್ಟು ಮಳೆ ಕೊರತೆ ದಾಖಲಾಗಿದ್ದು, ಈ ಪ್ರಮಾಣದ ಕೊರತೆ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಲು ಸಾಕಷ್ಟು ಬಲವಾದ ಕಾರಣವಾಗಿದೆ ಎಂದು ಪ್ರತಿಪಾದಿಸಿದ ಅವರು, ಇಂತಹ ಗಂಭೀರ ಪರಿಸ್ಥಿತಿಯಲ್ಲಿಯೂ ಗದಗ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಹೊರಗಿಡಲು ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಅವರು ಪ್ರಶ್ನಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಈ ಹಿಂದೆ ಪ್ರದೇಶಕ್ಕೆ ಭೇಟಿ ನೀಡಿ ಕಡಂಪುರ ಮತ್ತು ಕುರ್ತಕೋಟಿ ನಡುವಿನ ಪ್ರದೇಶಗಳಲ್ಲಿ ಬೆಳೆಗಳ ಸ್ಥಿತಿಯನ್ನು ಪರಿಶೀಲಿಸಿದ್ದರು. ಸ್ಥಳೀಯ ಪರಿಸ್ಥಿತಿಯ ಬಗ್ಗೆ ವರದಿಗಳು ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಅದು ಮತ್ತಷ್ಟು ಸ್ಪಷ್ಟಪಡಿಸಿತ್ತು ಎಂದು ಹೇಳಿದರು.
ಆದರೂ ಗದಗ ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸದಿರುವುದು ಆಶ್ಚರ್ಯಕರವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ನಿರ್ಧಾರ ಕೈಗೊಳ್ಳುವುದನ್ನು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಇದರಿಂದ ರೈತರ ಅಸಮಾಧಾನ ಹೆಚ್ಚುತ್ತಿದ್ದು, ಪ್ರತಿಭಟನೆಗಳ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಆರಂಭಿಸಿದ್ದಾರೆ ಎಂದು ಹೇಳಿದರು.
ಗದಗ ತಾಲೂಕಿಗೆ ಬರಪೀಡಿತ ಸ್ಥಾನಮಾನ ದೊರಕಿಸುವ ವಿಚಾರವನ್ನು ವಿಧಾನಸಭೆಯಲ್ಲಿಯೂ ಪ್ರಸ್ತಾಪಿಸುವುದಾಗಿ ಪಾಟೀಲ ತಿಳಿಸಿದರು. ಈ ಸಂಬಂಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅಕ್ಟೋಬರ್‌ 10ರವರೆಗೆ ಗಡುವು ನೀಡಿರುವುದಾಗಿ ಹೇಳಿದ ಅವರು, “ಆ ವೇಳೆಯೊಳಗೆ ಗದಗವನ್ನು ಬರಪೀಡಿತ ತಾಲೂಕು ಎಂದು ಘೋಷಿಸದಿದ್ದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಆಕ್ಸ್‌ಫರ್ಡ್ ಗ್ಲೋಬಲ್ ಸಿಟೀಸ್ ಇಂಡೆಕ್ಸ್ 2026 ; ಕರ್ನಾಟಕದ 6 ನಗರಗಳಿಗೆ ಜಾಗತಿಕ ಸ್ಥಾನ

ರೈತ ಕುಟುಂಬದ ಹಿನ್ನೆಲೆಯಿಂದ ಬಂದಿರುವ ತಮಗೆ ಮಳೆ ಕೊರತೆಯ ಸಂದರ್ಭದಲ್ಲಿ ಕೃಷಿಕರು ಅನುಭವಿಸುವ ಕಷ್ಟಗಳು ಚೆನ್ನಾಗಿ ತಿಳಿದಿವೆ ಎಂದ ಅವರು, ಬೆಳೆಗಳು ಹಾನಿಗೊಳಗಾಗುತ್ತಿರುವ ಸಂದರ್ಭದಲ್ಲೂ ರೈತರು ಬರ ಪರಿಹಾರ ಮತ್ತು ಸರ್ಕಾರದ ನೆರವಿನಿಂದ ವಂಚಿತರಾಗಬಾರದು ಎಂದರು.
ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕೊರತೆ ಮುಂದುವರಿದಿರುವ ಸಂದರ್ಭದಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ. ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದರು. ರಾಜ್ಯದ 239 ತಾಲೂಕುಗಳ ಪೈಕಿ 200ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಇನ್ನಷ್ಟು ಪ್ರದೇಶಗಳನ್ನು ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಗದಗವನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕೆಂಬ ಬೇಡಿಕೆ ಇದೀಗ ಜಿಲ್ಲೆಯ ರೈತರು ಹಾಗೂ ರಾಜಕೀಯ ವಲಯದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದ್ದು, ಎಚ್‌.ಕೆ. ಪಾಟೀಲ ನೀಡಿರುವ ಗಡುವಿನಿಂದಾಗಿ ಈ ವಿಚಾರ ಮಹತ್ವಪಡೆದುಕೊಂಡಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement