ಬೆಂಗಳೂರು : ಪ್ರತಿಷ್ಠಿತ ‘ಆಕ್ಸ್‌ಫರ್ಡ್ ಗ್ಲೋಬಲ್ ಸಿಟೀಸ್ ಇಂಡೆಕ್ಸ್ 2026’ (Oxford Global Cities Index 2026) ನಲ್ಲಿ ಕರ್ನಾಟಕದ ಒಟ್ಟು ಆರು ನಗರಗಳು ಸ್ಥಾನ ಪಡೆದಿವೆ.
ರಾಜ್ಯದಿಂದ ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಅವಳಿ ನಗರ, ಮೈಸೂರು, ಮಂಗಳೂರು, ಕಲಬುರಗಿ, ಬೆಳಗಾವಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಆಕ್ಸ್‌ಫರ್ಡ್ ಎಕನಾಮಿಕ್ಸ್ ಜಗತ್ತಿನ ಮುಂಚೂಣಿಯಲ್ಲಿರುವ ಸ್ವತಂತ್ರ ಆರ್ಥಿಕ ಸಲಹಾ ಸಂಸ್ಥೆಯಾಗಿದ್ದು, ಇದು ವಿಶ್ವದ 200ಕ್ಕೂ ಹೆಚ್ಚು ದೇಶಗಳು, 100 ಕೈಗಾರಿಕಾ ಕ್ಷೇತ್ರಗಳು ಹಾಗೂ 8,000 ನಗರಗಳು ಮತ್ತು ಪ್ರದೇಶಗಳ ಕುರಿತು ಅಧ್ಯಯನ ನಡೆಸುತ್ತದೆ.
ಈ ಸಂಸ್ಥೆಯ ‘ಗ್ಲೋಬಲ್ ಸಿಟೀಸ್ ಇಂಡೆಕ್ಸ್’ ವಿಭಾಗದಲ್ಲಿ ಸ್ಥಳೀಯ ದತ್ತಾಂಶ, ನಗರ ವ್ಯವಹಾರ ಹಾಗೂ ಜನರ ಓಡಾಟ ಮತ್ತು ಮುನ್ನೋಟಗಳಲ್ಲಿ ಆಳವಾದ ಪರಿಣತಿಯನ್ನು ಹೊಂದಿರುವ 40ಕ್ಕೂ ಹೆಚ್ಚು ಅರ್ಥಶಾಸ್ತ್ರಜ್ಞರಿದ್ದಾರೆ.
ಭಾರತದ ನಗರಗಳ ಭರ್ಜರಿ ಸಾಧನೆ
ಭಾರತದ ಒಟ್ಟು 1,000 ನಗರಗಳ ಪೈಕಿ 100 ನಗರಗಳು ಈ ಜಾಗತಿಕ ಸೂಚ್ಯಂಕದಲ್ಲಿ ಸ್ಥಾನ ಪಡೆದಿರುವುದು, ಜಾಗತಿಕ ವೇದಿಕೆಯಲ್ಲಿ ಭಾರತದ ಬೆಳೆಯುತ್ತಿರುವ ನಗರೀಕರಣದ ಪ್ರಭಾವವನ್ನು ಬಿಂಬಿಸುತ್ತದೆ.
ಪ್ರಮುಖವಾಗಿ ಬೆಂಗಳೂರು (311ನೇ ಸ್ಥಾನ) ನಗರವು ಮುಂಬೈ (330), ಚೆನ್ನೈ (381) ಮತ್ತು ಹೈದರಾಬಾದ್ (421) ನಗರಗಳಿಗಿಂತಲೂ ಉತ್ತಮ ರ್ಯಾಂಕಿಂಗ್ ಪಡೆದು ಮುಂಚೂಣಿಯಲ್ಲಿದೆ.
ಕರ್ನಾಟಕದ ನಗರಗಳಿಗೆ ಲಭಿಸಿದ ಜಾಗತಿಕ ಶ್ರೇಯಾಂಕಗಳು ಮತ್ತು ವಿಭಾಗಗಳು
ವಿಶ್ವದ ಪ್ರಮುಖ 1,000 ನಗರಗಳನ್ನು ವಿವಿಧ ವರ್ಗಗಳ ಅಡಿಯಲ್ಲಿ ಪರಿಗಣಿಸಿ ಈ ಶ್ರೇಯಾಂಕ ನೀಡಲಾಗಿದೆ:
ಬೆಂಗಳೂರು: 311ನೇ ಜಾಗತಿಕ ರ್ಯಾಂಕ್ (ಭಾರತದ ನಾವೀನ್ಯತೆಯ ರಾಜಧಾನಿ – India’s Innovation Capital)
ಮೈಸೂರು: 628ನೇ ಜಾಗತಿಕ ರ್ಯಾಂಕ್ (ಜಾಗತಿಕ ಆಕರ್ಷಣೆಯುಳ್ಳ ಪಾರಂಪರಿಕ ನಗರಿ – Heritage City with Global Appeal)
ಮಂಗಳೂರು: 665ನೇ ಜಾಗತಿಕ ರ್ಯಾಂಕ್ (ಬೆಳವಣಿಗೆಗೆ ಚಾಲನೆ ನೀಡುವ ಕರಾವಳಿ ಕೇಂದ್ರ – Coastal Hub Driving Growth Category)
ಬೆಳಗಾವಿ: 683ನೇ ಜಾಗತಿಕ ರ್ಯಾಂಕ್ (ಅವಕಾಶಗಳ ನಗರಿ – A City of Opportunity Category)
ಹುಬ್ಬಳ್ಳಿ-ಧಾರವಾಡ: 707ನೇ ಜಾಗತಿಕ ರ್ಯಾಂಕ್ (ಎಂಜಿನಿಯರಿಂಗ್ ಕೈಗಾರಿಕೆ ಮತ್ತು ಶಿಕ್ಷಣ ಕೇಂದ್ರ – Engineering Industrial & Education Hub Category)
ಕಲಬುರಗಿ: 781ನೇ ಜಾಗತಿಕ ರ್ಯಾಂಕ್ (ಶ್ರೀಮಂತ ಪರಂಪರೆ ಮತ್ತು ಬೆಳೆಯುತ್ತಿರುವ ಭವಿಷ್ಯ – Rich Heritage, Growing Future Category)
ಈ ಸಾಧನೆಯು ಕರ್ನಾಟಕದ ನಗರಗಳು ಆರ್ಥಿಕ, ಸಾಂಸ್ಕೃತಿಕ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ವಿಶ್ವಮಟ್ಟದಲ್ಲಿ ಹೊಸ ಹೆಜ್ಜೆ ಇಡುತ್ತಿರುವುದಕ್ಕೆ ಸಾಕ್ಷಿಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ