ತಿರುವನಂತಪುರಂ: ಕೇರಳದ ತ್ರಿಪುನಿಥುರ ಸರ್ಕಾರಿ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿ ಸಂಘ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಐತಿಹಾಸಿಕ ಸಾಧನೆ ಮಾಡಿದ್ದು, ವಿದ್ಯಾರ್ಥಿ ಸಂಘದ ಎಲ್ಲಾ ಸ್ಥಾನಗಳನ್ನು ಗೆದ್ದು ಸಂಘದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸಿದೆ. ಇದರೊಂದಿಗೆ ಹಲವು ವರ್ಷಗಳಿಂದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗೆಲ್ಲುತ್ತ ಬಂದಿದ್ದ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಪ್ರಾಬಲ್ಯಕ್ಕೆ ತೆರೆ ಬಿದ್ದಿದೆ.
ಕಾಲೇಜು ವಿದ್ಯಾರ್ಥಿ ಸಂಘದ ಮೇಲಿನ ಹಿಡಿತವನ್ನು ಎಸ್‌ಎಫ್‌ಐ ಹಲವು ವರ್ಷಗಳಿಂದ ಕಾಯ್ದುಕೊಂಡು ಬಂದಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಎಬಿವಿಪಿ ಸಂಪೂರ್ಣ ಮೇಲುಗೈ ಸಾಧಿಸಿ ಪ್ರಮುಖ ಆರು ಸ್ಥಾನಗಳನ್ನೂ ತನ್ನದಾಗಿಸಿಕೊಂಡಿದೆ. ಇತ್ತೀಚೆಗಷ್ಟೇ ತ್ರಿಪುನಿಥುರ ನಗರಸಭೆಯಲ್ಲಿ 45 ವರ್ಷಗಳ ಎಡಪಂಥೀಯ ಆಡಳಿತಕ್ಕೆ ಅಂತ್ಯ ಹಾಡಿ ಬಿಜೆಪಿ ಅಧಿಕಾರ ಹಿಡಿದಿತ್ತು. ಇದರ ಬೆನ್ನಲ್ಲೇ ಈ ಬೆಳವಣಿಗೆ ರಾಜಕೀಯವಾಗಿ ಮಹತ್ವ ಪಡೆದಿದೆ.
40 ವರ್ಷಗಳಿಗೂ ಹೆಚ್ಚು ಕಾಲ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಪ್ರಭಾವದಲ್ಲಿದ್ದ ಕಾಲೇಜಿನಲ್ಲಿ ಎಬಿವಿಪಿ ಸಾಧಿಸಿದ ಈ ಗೆಲುವನ್ನು ಸಂಘಟನೆಯ ಮಹತ್ವದ ಮುನ್ನಡೆ ಎಂದು ಪರಿಗಣಿಸಲಾಗಿದೆ.
ಚುನಾವಣಾ ಫಲಿತಾಂಶದ ಬಳಿಕ ಪ್ರತಿಕ್ರಿಯಿಸಿದ ಎಬಿವಿಪಿ, ಈ ಗೆಲುವು ಎಸ್‌ಎಫ್‌ಐ ‘ವಿದ್ಯಾರ್ಥಿ ವಿರೋಧಿ ನೀತಿಗಳ’ ವಿರುದ್ಧ ವಿದ್ಯಾರ್ಥಿಗಳು ನೀಡಿರುವ ಸ್ಪಷ್ಟ ತೀರ್ಪಾಗಿದೆ ಎಂದು ಹೇಳಿದೆ. ಈ ಕಾಲೇಜಿನ ಗೆಲುವು ಕೇರಳದ ಇತರೆ ಕಾಲೇಜುಗಳಲ್ಲಿನ ಎಬಿವಿಪಿ ಘಟಕಗಳಿಗೆ ಹೊಸ ಉತ್ಸಾಹ ಮತ್ತು ಬಲ ತುಂಬಲಿದೆ ಎಂದು ಸಂಘಟನೆಯ ಪ್ರತಿನಿಧಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಹಿಂದಿನ ಎಸ್‌ಎಫ್‌ಐ ನೇತೃತ್ವದ ವಿದ್ಯಾರ್ಥಿ ಸಂಘಗಳು ಸಂಸ್ಕೃತ ಭಾಷೆಯ ಉತ್ತೇಜನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಎಬಿವಿಪಿ ಆರೋಪಿಸಿದೆ. ಅಲ್ಲದೆ ವಿದ್ಯಾರ್ಥಿಗಳಿಂದ ಸಂಗ್ರಹಿಸಲಾದ ನಿಧಿಗಳ ಬಳಕೆ ಕುರಿತು ಪ್ರಶ್ನೆ ಎತ್ತಿರುವ ಸಂಘಟನೆ, ಎಸ್‌ಎಫ್‌ಐ ಆಡಳಿತಾವಧಿಯಲ್ಲಿ ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗಿಲ್ಲ ಎಂಬ ಆರೋಪವನ್ನೂ ಮಾಡಿದೆ.
ಚುನಾವಣೆಯಲ್ಲಿ ಸ್ನಿಗ್ಧಾ ಎಂ. ಹರಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರೆ, ಆದಿತ್ಯ ಟಿ.ಎ. ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಿಘ್ನೇಶ ಭಟ್ ಪ್ರಧಾನ ಕಾರ್ಯದರ್ಶಿಯಾಗಿ, ವಿಘ್ನೇಶ ಡಿ. ಮ್ಯಾಗಜಿನ್ ಸಂಪಾದಕರಾಗಿ ಹಾಗೂ ಅಂಜಲಿ ಟಿ. ಕಲಾ ಕ್ಲಬ್ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಇದೇ ವೇಳೆ ನಿವೇದ್ಯ ಕೆ.ಎನ್. ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಕೌನ್ಸಿಲರ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಶಿವಾನಿ ಆರ್ ದ್ವಿತೀಯ ಪದವಿ (ಯುಜಿ) ಪ್ರತಿನಿಧಿಯಾಗಿ ಹಾಗೂ ಅವನಿ ಸಿ.ಬಿ. ದ್ವಿತೀಯ ಸ್ನಾತಕೋತ್ತರ (ಪಿಜಿ) ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
ಹಲವು ವರ್ಷಗಳಿಂದ ಎಸ್‌ಎಫ್‌ಐ ಪ್ರಾಬಲ್ಯ ಹೊಂದಿದ್ದ ಕಾಲೇಜಿನಲ್ಲಿ ಎಲ್ಲ ಸ್ಥಾನಗಳಲ್ಲೂ ಜಯ ಸಾಧಿಸಿರುವುದು ತ್ರಿಪುನಿಥುರ ಪ್ರದೇಶದಲ್ಲಿ ಎಬಿವಿಪಿಗೆ ಮಹತ್ವದ ಸಂಘಟನಾ ಯಶಸ್ಸು ಎಂದು ವಿಶ್ಲೇಷಿಸಲಾಗುತ್ತಿದೆ. ಜೊತೆಗೆ ಕೇರಳದ ಕಾಲೇಜು ಕ್ಯಾಂಪಸ್‌ಗಳಲ್ಲಿ ರಾಜಕೀಯ ಪ್ರಭಾವ ವಿಸ್ತರಿಸಲು ವಿವಿಧ ವಿದ್ಯಾರ್ಥಿ ಸಂಘಟನೆಗಳ ನಡುವೆ ನಡೆಯುತ್ತಿರುವ ಪೈಪೋಟಿಯಲ್ಲಿ ಎಬಿವಿಪಿಗೆ ಈ ಫಲಿತಾಂಶ ಹೊಸ ಚೈತನ್ಯ ಮತ್ತು ವೇಗ ನೀಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ