ಲಖಿಂಪುರ ಖೇರಿ : ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಸೋಮವಾರ ನಡೆದ ಭೀಕರ ಘಟನೆ ಆತಂಕ ಸೃಷ್ಟಿಸಿದೆ. ಶಾಲೆಯ ಆವರಣದಲ್ಲಿ ಮಕ್ಕಳ ಕಣ್ಣೆದುರೇ ಶಿಕ್ಷಕಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಯುವಕ, ಬಂಧನದ ಭೀತಿಯಿಂದ ಬಳಿಕ ತಾನೂ ಸಹ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಶಿಕ್ಷಕಿಯನ್ನು 26 ವರ್ಷದ ನಿಶಾತ್ ಫಾತಿಮಾ ಎಂದು ಗುರುತಿಸಲಾಗಿದ್ದು, ಅವರು ಸದರ್ ಕೋಟ್ವಾಲಿ ವ್ಯಾಪ್ತಿಯ ಹಿದಾಯತ್ ನಗರ ನಿವಾಸಿಯಾಗಿದ್ದರು. ಆರೋಪಿ 28 ವರ್ಷದ ಮೊಹಮ್ಮದ್ ಸೌದ್ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಶಾಲಾ ಆವರಣವನ್ನು ತಮ್ಮ ವಶಕ್ಕೆ ಪಡೆದು ತನಿಖೆ ಆರಂಭಿಸಿತು.
ಲಖಿಂಪುರ ಖೇರಿ ಹಿರಿಯ ಪೊಲೀಸ್ ಅಧೀಕ್ಷಕಿ (ಎಸ್‌ಎಸ್‌ಪಿ) ಖ್ಯಾತಿ ಗರ್ಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಚಿಲ್ಡ್ರನ್ಸ್ ಅಕಾಡೆಮಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಸೋಮವಾರ ಬೆಳಿಗ್ಗೆ ಸುಮಾರು 11:30ರ ವೇಳೆಗೆ ಸೌದ್ ಎಂಬಾತಶಾಲೆಗೆ ಬಂದು ನಿಶಾತ್ ಫಾತಿಮಾರನ್ನು ಭೇಟಿಯಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಶಾಲೆಯಲ್ಲಿ ಸುಮಾರು ಒಂದು ವರ್ಷದಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನಿಶಾತ್ ಫಾತಿಮಾರನ್ನು ಭೇಟಿ ಮಾಡಲು ಬಂದ ಸೌದ್, ಅವರ ಜೊತೆ ಮಾತನಾಡುವ ನೆಪದಲ್ಲಿ ಮೆಟ್ಟಿಲುಗಳ ಮೂಲಕ ಕಾರಿಡಾರ್‌ಗೆ ತೆರಳಿದ್ದಾನೆ. ಅಲ್ಲಿ ಇಬ್ಬರೂ ಮಾತನಾಡುತ್ತಿದ್ದ ವೇಳೆ ತನ್ನ ಬ್ಯಾಗ್‌ನಿಂದ ಪಿಸ್ತೂಲ್ ತೆಗೆದು ಫಾತಿಮಾ ಅವರ ಮೇಲೆ ಗುಂಡು ಹಾರಿಸಿದ್ದಾನೆ. ನಂತರ ತಾನೂ ಸಹ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ನಿಶಾತ್ ಫಾತಿಮಾ ಮತ್ತು ಮೊಹಮ್ಮದ್ ಸೌದ್ ಬಹುಕಾಲದಿಂದ ಪರಸ್ಪರ ಪರಿಚಯ ಹೊಂದಿದ್ದು, ನಿರಂತರ ಸಂಪರ್ಕದಲ್ಲಿದ್ದರು.
ಘಟನೆ ನಡೆದ ಕಾರಿಡಾರ್ ಪ್ರದೇಶವನ್ನು ಪೊಲೀಸರು ಸಂಪೂರ್ಣವಾಗಿ ಬಂದ್ ಮಾಡಿ ಭದ್ರತಾ ವಲಯ ನಿರ್ಮಿಸಿದರು. ಶಾಲೆಯಲ್ಲಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಸುರಕ್ಷಿತವಾಗಿ ಹೊರಗೆ ಕರೆದೊಯ್ದರು. ನಂತರ ಸ್ಥಳಕ್ಕೆ ಆಗಮಿಸಿದ ನ್ಯಾಯ ವಿಜ್ಞಾನ (ಫೋರೆನ್ಸಿಕ್) ತಜ್ಞರ ತಂಡ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿತು.
ಮೃತ ಶಿಕ್ಷಕಿ ಹಾಗೂ ಯುವಕನ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಕೃತ್ಯದ ಹಿಂದಿನ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಎಸ್‌ಎಸ್‌ಪಿ ಖ್ಯಾತಿ ಗರ್ಗ್ ತಿಳಿಸಿದ್ದಾರೆ.
ಪ್ರಕರಣದ ಕುರಿತು ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಪ್ರತ್ಯಕ್ಷದರ್ಶಿಗಳು ಸೇರಿದಂತೆ ಹಲವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಘಟನೆಯ ಹಿನ್ನೆಲೆ ಮತ್ತು ಕಾರಣವನ್ನು ಪತ್ತೆಹಚ್ಚುವ ಉದ್ದೇಶದಿಂದ ಮೃತ ಶಿಕ್ಷಕಿ ಹಾಗೂ ಆರೋಪಿ ಯುವಕನ ಕುಟುಂಬ ಸದಸ್ಯರನ್ನೂ ವಿಚಾರಣೆಗೊಳಪಡಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ