ಬೆಂಗಳೂರು: ಆದಾಯದ ಮಿತಿಗಿಂತ ಹೆಚ್ಚು ಆಸ್ತಿ ಗಳಿಕೆ ಹಾಗೂ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯದ ಹಲವು ಕಡೆ ಮಂಗಳವಾರ ಬೆಳ್ಳಬೆಳಿಗ್ಗೆ (ಸೆಪ್ಟೆಂಬರ್ 22) ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಹುಬ್ಬಳ್ಳಿ, ಕಲಬುರಗಿ, ಚಿಕ್ಕಬಳ್ಳಾಪುರ, ಬೀದರ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಮನೆಗಳು ಮತ್ತು ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಹುಬ್ಬಳ್ಳಿಯಲ್ಲಿ, ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ಕಿರಣಕುಮಾರ್ ಬೈಂದೂರ ಅವರಿಗೆ ಸಂಬಂಧಿಸಿದ ನಾಲ್ಕು ಸ್ಥಳಗಳಲ್ಲಿ ದಾಳಿ ನಡೆದಿದೆ. ಅವರ ನಿವಾಸ, ಕಚೇರಿ, ಅವರ ಪತ್ನಿ ಕೆಲಸ ಮಾಡುತ್ತಿರುವ ಹೆಸ್ಕಾಂ ಕಚೇರಿ ಸೇರಿದಂತೆ ನಾಲ್ಕು ಕಡೆಗಳಲ್ಲಿ ದಾಖಲೆಗಳ ಪರಿಶೀಲನೆ ಮುಂದುವರಿದಿದೆ ಎಂದು ತಿಳಿದುಬಂದಿದೆ.
ಕಲಬುರಗಿಯಲ್ಲಿ, ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಶ್ವರಿ ಅವರಿಗೆ ಸೇರಿದ ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ನಲ್ಲಿರುವ ನಿವಾಸ, ಖಾದ್ರಿ ಚೌಕ್ನಲ್ಲಿರುವ ಮತ್ತೊಂದು ಮನೆ ಹಾಗೂ ಜೆಸ್ಕಾಂ ಕಚೇರಿ ಸೇರಿದಂತೆ ಏಕಕಾಲದಲ್ಲಿ ಶೋಧ ನಡೆದಿದ್ದು, ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಬೀದರಿಲ್ಲಿ, ಇತ್ತೀಚೆಗೆ ಸೇವೆಯಿಂದ ನಿವೃತ್ತರಾದ ಕೃಷಿ ಅಧಿಕಾರಿ ಮಾಣಿಕರಾವ್ ಶೇರಿಕಾರ ಅವರಿಗೆ ಸೇರಿದ ಮನೆಗಳು ಹಾಗೂ ಫಾರ್ಮ್ಹೌಸ್ ಮೇಲೆ ಲೋಕಾಯುಕ್ತ ತಂಡ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಬೀದರ್ ನಗರದ ಹಕ್ ಕಾಲನಿ, ಹುಮನಾಬಾದ್ನ ಟೀಚರ್ ಕಾಲನಿ ಹಾಗೂ ಚಿಟಗುಪ್ಪಾ ತಾಲೂಕಿನ ಮುತ್ತಂಗಿ ಗ್ರಾಮದ ಫಾರ್ಮ್ಹೌಸ್ನಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಫ್ಡಿಎ (FDA) ಆಗಿ ಕಾರ್ಯನಿರ್ವಹಿಸುತ್ತಿರುವ ದರ್ಶನ್ ಗೌಡ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲೂ ಲೋಕಾಯುಕ್ತ ತಂಡ ಶೋಧ ನಡೆಸಿದ್ದು, ಬೆಂಗಳೂರಿನಲ್ಲಿರುವ ಮನೆಗಳು ಸೇರಿದಂತೆ ಏಳೆಂಟು ಸ್ಥಳಗಳಲ್ಲಿ ಪರಿಶೀಲನೆ ನಡೆದಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ರಾಜ್ಯದ ವಿವಿಧೆಡೆ ನಡೆದಿರುವ ಈ ಕಾರ್ಯಾಚರಣೆಗಳಲ್ಲಿ ವಶಪಡಿಸಿಕೊಂಡ ದಾಖಲೆಗಳು, ಆಸ್ತಿ ವಿವರಗಳು ಹಾಗೂ ಇತರ ಮಾಹಿತಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ