ರೇಣುಕಾಸ್ವಾಮಿ ಕೊಲೆ ಪ್ರಕರಣ : ಮಾಫಿ ಸಾಕ್ಷಿ ಆದೇಶ ರದ್ದತಿ ಕೋರಿ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ವಜಾ

ಬೆಂಗಳೂರು : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್‌ ರಾವ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ಎತ್ತಿಹಿಡಿದಿದೆ. ನಟ ದರ್ಶನ್‌ಗೆ ಹೈಕೋರ್ಟ್​ನಲ್ಲಿ ಹಿನ್ನಡೆ ಆಗಿದೆ.
ವಿಚಾರಣಾ ನ್ಯಾಯಾಲಯವು 2026ರ ಸೆಪ್ಟೆಂಬರ್‌ 16ರಂದು ಹೊರಡಿಸಿದ ಆದೇಶ ರದ್ದುಪಡಿಸುವಂತೆ ಕೋರಿ ಪ್ರಶ್ನಿಸಿ ದರ್ಶನ್‌ ಪರ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಪೀಠ ಬುಧವಾರ ವಜಾಗೊಳಿಸಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ನಿಯಮಗಳ ಪ್ರಕಾರ ಪ್ರಕರಣದ ಯಾವುದೇ ಹಂತದಲ್ಲಾದರೂ ಆರೋಪಿಯು ಮಾಫಿ ಸಾಕ್ಷಿಯಾಗಿ ಕೋರಲು ಅವಕಾಶವಿದೆ. ಅದನ್ನು ಪ್ರಶ್ನಿಸುವ/ ವಿರೋಧಿಸುವ ಹಕ್ಕು ಸಹ ಆರೋಪಿಗೆ ಇಲ್ಲ. ಪ್ರದೋಷ್‌ ಜೈಲಿನಿಂದ ಪ್ರತ್ನಿಯೊಂದಿಗೆ ರಹಸ್ಯವಾಗಿ ಮಾತನಾಡುತ್ತಿದ್ದ. ಆ ಕುರಿತ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂಬ ಕಾರಣಕ್ಕೆ ಆತನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಬಾರದು ಎಂದು ಹೇಳಲಾಗದು. ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಮುನ್ನ ಪ್ರಾಸಿಕ್ಯೂಷನ್‌ ವಾದವನ್ನು ವಿಚಾರಣಾ ನ್ಯಾಯಾಲಯ ಆಲಿಸಿದೆ. ಈ ಎಲ್ಲಾ ಕಾರಣಗಳಿಂದ ವಿಚಾರಣಾ ನ್ಯಾಯಾಲಯ ಆದೇಶವು ಸೂಕ್ತವಾಗಿದ್ದು, ಅದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಪೀಠ ತಿಳಿಸಿದೆ.
ಪಾಟಿ ಸವಾಲು ಪ್ರಕ್ರಿಯೆಯಲ್ಲಿ ಪ್ರದೋಷ್‌ ಪ್ರಶ್ನಿಸುವ ಹಕ್ಕು ದರ್ಶನ್‌ಗೆ ಇದೆ ಎಂದು ಸ್ಪಷ್ಟಪಡಿಸಿದ ಪೀಠವು ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೋಷ್‌ ಮಾಫಿ ಸಾಕ್ಷಿಯಾಗಲು ವಿಚಾರಣಾ ನ್ಯಾಯಾಲಯವು ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ರದ್ದುಪಡಿಸಬೇಕೆಂದು ದರ್ಶನ್ ಪರವಾಗಿ ಪತ್ನಿ ವಿಜಯಲಕ್ಷ್ಮಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಪ್ರಮುಖ ಸುದ್ದಿ :-   ಶಾರ್ಜಾದಲ್ಲಿ ಕುಂದಾಪುರ ಮೂಲದ ವ್ಯಕ್ತಿಯ ಭೀಕರ ಹತ್ಯೆ ; ಒಂಬತ್ತು ತುಂಡುಗಳಾಗಿ ಕತ್ತರಿಸಿದ ಮೃತದೇಹ ಪತ್ತೆ : ಪತ್ನಿ-ಪುತ್ರ ನಾಪತ್ತೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement