ಮಾನವ ಮೆದುಳಿನ (Human Brain) ಕಾರ್ಯವೈಖರಿ, ಅದರ ಬೆಳವಣಿಗೆ ಹಾಗೂ ವಿವಿಧ ನರರೋಗಗಳ (Neurological Disorders) ಮೂಲ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ವಿಜ್ಞಾನಿಗಳಿಗೆ ಇಂದಿಗೂ ದೊಡ್ಡ ಸವಾಲಾಗಿದೆ. ಏಕೆಂದರೆ ಜೀವಂತವಾಗಿರುವ ವ್ಯಕ್ತಿಯ ಮೆದುಳಿನಲ್ಲಿ ನೇರವಾಗಿ ಪ್ರಯೋಗಗಳನ್ನು ನಡೆಸಲು ಸಾಧ್ಯವಿಲ್ಲ. ಇದೇ ಕಾರಣದಿಂದ ಮೆದುಳಿನ ಬೆಳವಣಿಗೆಯ ಹಲವು ಹಂತಗಳು ಹಾಗೂ ಅದು ಹೇಗೆ ಹಾನಿಗೊಳಗಾಗುತ್ತದೆ ಎಂಬ ಪ್ರಶ್ನೆಗಳಿಗೆ ಇನ್ನೂ ಸಂಪೂರ್ಣ ಉತ್ತರ ಸಿಕ್ಕಿಲ್ಲ.
ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿಅಮೆರಿಕದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ (Stanford University) ವಿಜ್ಞಾನಿಗಳು ಮೆದುಳಿನ ಅಧ್ಯಯನದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಇಲಿಗಳ ಮೆದುಳಿನ ಹೊರಪದರ (Cerebral Cortex) ಬಹುಪಾಲು ಬೆಳೆಯದಂತೆ ಅವುಗಳ ಜೀನ್ಗಳನ್ನು ಜನ್ಯತಂತ್ರಜ್ಞಾನದ (Genetic Engineering) ಮೂಲಕ ಬದಲಿಸಿ ರೂಪಾಂತರಿತ ಇಲಿಗಳನ್ನು ಸೃಷ್ಟಿಸಿದ ವಿಜ್ಞಾನಿಗಳು, ಬಳಿಕ ಅವುಗಳ ಮೆದುಳಿನಲ್ಲಿ ಮಾನವನ ಮೆದುಳಿನ ಹೊರಪದರದ ಅಂಗಾಂಶವನ್ನು (Human Cortical Tissue) ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮಾನವ ಮೆದುಳಿನ ಅಂಗಾಂಶವು ಇಲಿಗಳ ಮೆದುಳಿನಲ್ಲೇ ಬೆಳೆದು ನರಮಂಡಲದೊಂದಿಗೆ ಸಂಪರ್ಕ ಸಾಧಿಸಿರುವುದು ಅಧ್ಯಯನದ ಪ್ರಮುಖ ಅಂಶವಾಗಿದೆ.
ಪ್ರಯೋಗ ಆರಂಭವಾದ ಮೂರು ತಿಂಗಳೊಳಗೆ ಆ ಮಾನವ ಅಂಗಾಂಶವು ಇಲಿಯ ಮೆದುಳಿನ ಕಾರ್ಟಿಕಲ್ ಭಾಗದ ಒಟ್ಟು ಪರಿಮಾಣದ ಶೇ.90ಕ್ಕೂ ಹೆಚ್ಚು ಪಾಲನ್ನು ಆವರಿಸಿತು. ಈ ಅಂಗಾಂಶದಲ್ಲಿ ರಕ್ತನಾಳಗಳು (Blood Vessels) ರೂಪುಗೊಂಡಿದ್ದು, ಅದು ಇಲಿಯ ನರಮಂಡಲದ (Nervous System) ಜೊತೆ ಸಂಪರ್ಕ ಸಾಧಿಸಿತು. ಜೊತೆಗೆ ವಿದ್ಯುತ್ ಚಟುವಟಿಕೆ (Electrical Activity) ತೋರಿಸಿ, ತನ್ನ ಕೆಲವು ನರತಂತುಗಳನ್ನು (Neural Projections) ಬೆನ್ನುಹುರಿಯವರೆಗೆ (Spinal Cord) ವಿಸ್ತರಿಸಿತು.
ಈ ಅಧ್ಯಯನದ ಪ್ರಮುಖ ಸಂಶೋಧಕರಾದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ನರವಿಜ್ಞಾನಿ (Neuroscientist) ಸರ್ಜಿಯು ಪಾಸ್ಕಾ (Sergiu Pașca) ಅವರು, “ಇವು ಇನ್ನೂ ಇಲಿಗಳೇ ಎಂಬುದನ್ನು ಮರೆಯಬಾರದು. ಇವುಗಳಲ್ಲಿ ಇಲಿಯ ನರಮಂಡಲ, ಇಲಿಯ ಸಂವೇದನಾ ಅಂಗಗಳು (Sensory Organs) ಹಾಗೂ ಮೆದುಳಿನ ಇತರ ಭಾಗಗಳು ಹಾಗೆಯೇ ಇವೆ. ವಿಶೇಷವೆಂದರೆ ಈ ಪ್ರಾಣಿಗಳ ಕಾರ್ಟೆಕ್ಸ್ನ ಬಹುಪಾಲು ಮಾನವ ಮೂಲದ ಅಂಗಾಂಶದಿಂದ ನಿರ್ಮಾಣವಾಗಿದೆ. ಮಾನವ ನರಕೋಶಗಳು (Neurons) ಇಲ್ಲಿ ಬೆಳೆಯುತ್ತವೆ, ಇಲಿಯ ನರಮಂಡಲದೊಂದಿಗೆ ಸಂಪರ್ಕ ಹೊಂದುತ್ತವೆ ಹಾಗೂ ಕಾರ್ಯನಿರ್ವಹಿಸುವ ಜಾಲವನ್ನು ರೂಪಿಸುತ್ತವೆ” ಎಂದು ವಿವರಿಸಿದ್ದಾರೆ.
‘ಮಿನಿ ಮೆದುಳು’ಗಳ ಮಿತಿಗಳು
ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನಿಗಳು ಮೆದುಳಿನ ಅಂಗಾಂಶಗಳಿಂದ ಪ್ರಯೋಗಾಲಯದಲ್ಲಿ ಬೆಳೆಸಿದ ಸೂಕ್ಷ್ಮ ಅಂಗ ಮಾದರಿ (Organoid) ಎಂದು ಕರೆಯಲ್ಪಡುವ ಸಣ್ಣ ತ್ರಿಮಿತಿಯ ರಚನೆಗಳನ್ನು ಪ್ರಯೋಗಾಲಯಗಳಲ್ಲಿ ಬೆಳೆಸುತ್ತಿದ್ದಾರೆ. ಇವುಗಳಲ್ಲಿ ಬೆಳೆಯುತ್ತಿರುವ ಮಾನವ ನರಮಂಡಲದಲ್ಲಿ ಕಂಡುಬರುವ ಅನೇಕ ವಿಧದ ಕೋಶಗಳು (Cells) ಇರುತ್ತವೆ. ಕೆಲವು ಸಂದರ್ಭಗಳಲ್ಲಿ ಮೆದುಳಿನ ವಿವಿಧ ಭಾಗಗಳನ್ನು ಪ್ರತಿನಿಧಿಸುವ ಆರ್ಗನಾಯ್ಡ್ಗಳನ್ನು ಒಟ್ಟಿಗೆ ಸೇರಿಸಿ ‘ಅಸೆಂಬ್ಲಾಯ್ಡ್’ (Assembloid) ಎಂಬ ಸಂಕೀರ್ಣ ರಚನೆಗಳನ್ನೂ ನಿರ್ಮಿಸಲಾಗುತ್ತದೆ.
ಆದರೆ ಪೆಟ್ರಿ ಡಿಶ್ (Petri Dish) ನಲ್ಲಿ ಬೆಳೆಯುವ ಆರ್ಗನಾಯ್ಡ್ಗಳಿಗೆ ಮಿತಿಗಳಿವೆ. ಅವುಗಳಿಗೆ ರಕ್ತಪೂರೈಕೆ ಇರುವುದಿಲ್ಲ. ಹೊರಜಗತ್ತಿನಿಂದ ಸಂವೇದನಾ ಮಾಹಿತಿ (Sensory Information) ಸಿಗುವುದಿಲ್ಲ. ಸ್ನಾಯುಗಳನ್ನು (Muscles) ನಿಯಂತ್ರಿಸುವ ಅವಕಾಶವೂ ಇರುವುದಿಲ್ಲ. ಹೀಗಾಗಿ ನೈಜ ಮೆದುಳಿನ ಬೆಳವಣಿಗೆಯನ್ನು ಸಂಪೂರ್ಣವಾಗಿ ಅವುಗಳಲ್ಲಿ ಮರುಸೃಷ್ಟಿಸುವುದು ಕಷ್ಟವಾಗುತ್ತದೆ.
ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಪಾಸ್ಕಾ ಮತ್ತು ಅವರ ತಂಡ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದೆ. 2022ರಲ್ಲಿ ಅವರು ನವಜಾತ ಇಲಿಗಳಲ್ಲಿ (Rats) ಮಾನವ ಕಾರ್ಟಿಕಲ್ ಆರ್ಗನಾಯ್ಡ್ಗಳನ್ನು ಅಳವಡಿಸಿದ್ದರು. ಆಗ ಮಾನವ ನರಕೋಶಗಳು ಇಲಿಯ ಮೆದುಳಿನಲ್ಲಿ ಬೆಳೆಯುವುದರ ಜೊತೆಗೆ ಅದರ ಮೀಸೆಗಳ (Whiskers) ಮೂಲಕ ಬರುವ ಸಂವೇದನಾ ಮಾಹಿತಿಗೂ ಪ್ರತಿಕ್ರಿಯಿಸುತ್ತಿದ್ದವು.
ಆದರೆ ಅಲ್ಲಿ ಮತ್ತೊಂದು ಅಡಚಣೆ ಎದುರಾಯಿತು. ಮಾನವ ನರಕೋಶಗಳು ಇಲಿಯ ನರಕೋಶಗಳಿಗಿಂತ ಬಹಳ ನಿಧಾನವಾಗಿ ಬೆಳೆಯುತ್ತವೆ. ಎರಡೂ ವ್ಯವಸ್ಥೆಗಳು ಒಂದೇ ಜಾಗಕ್ಕಾಗಿ ಸ್ಪರ್ಧಿಸುತ್ತಿದ್ದವು. ಈ ಸಮಸ್ಯೆಯನ್ನು ನಿವಾರಿಸಲು ವಿಜ್ಞಾನಿಗಳು ಸ್ಪರ್ಧೆಯನ್ನೇ ತೆಗೆದುಹಾಕುವ ನಿರ್ಧಾರ ಕೈಗೊಂಡರು.
ಕಾರ್ಟೆಕ್ಸ್ (“ಮೆದುಳಿನ ಹೊರಪದರ) ಇಲ್ಲದ ‘ಅಪಾಲಿಯಲ್’ ಇಲಿಗಳು
ಇದಕ್ಕಾಗಿ ಸಂಶೋಧಕರು ವಿಶೇಷ ಜನ್ಯ ಮಾರ್ಪಾಡು ಮಾಡಿದ ಇಲಿಗಳನ್ನು ಸೃಷ್ಟಿಸಿದರು. ಈ ಇಲಿಗಳಲ್ಲಿ ಸೆರೆಬ್ರಲ್ ಕಾರ್ಟೆಕ್ಸ್ ಮತ್ತು ಹಿಪೋಕ್ಯಾಂಪಸ್ (Hippocampus) ಬಹುಪಾಲು ಬೆಳೆಯದಂತೆ ಮಾಡಲಾಯಿತು. ಇವುಗಳನ್ನು ಅವರು ‘ಅಪಾಲಿಯಲ್ ಇಲಿಗಳು’ (Apallial Mice) ಎಂದು ಹೆಸರಿಸಿದರು.
ಕೆಲವು ಇಲಿಗಳನ್ನು ಇದೇ ಸ್ಥಿತಿಯಲ್ಲಿ ಪ್ರೌಢಾವಸ್ಥೆಯವರೆಗೆ ಬೆಳೆಸಲಾಯಿತು. ಇನ್ನೂ ಕೆಲವು ಇಲಿಗಳಿಗೆ ಜನಿಸಿದ ತಕ್ಷಣ ಮಾನವ ಕಾರ್ಟಿಕಲ್ ಅಂಗಾಂಶಗಳನ್ನು ಅಳವಡಿಸಲಾಯಿತು. ಈ ಹೊಸ ಮಾದರಿಯನ್ನು ಸಂಶೋಧಕರು ‘ಕ್ಸೆನೋಕಾರ್ಟಿಕಲ್ ಇಲಿಗಳು’ (Xenocortical Mice) ಎಂದು ಕರೆಯುತ್ತಾರೆ.
ಮುಂದಿನ ಕೆಲವು ತಿಂಗಳುಗಳಲ್ಲಿ ಇಲಿಗಳು ಬೆಳೆದಂತೆ ಮಾನವ ಅಂಗಾಂಶವೂ ಬೆಳೆಯಿತು. ಖಾಲಿ ಉಳಿದಿದ್ದ ಕಾರ್ಟೆಕ್ಸ್ ಪ್ರದೇಶವನ್ನು ಅದು ದೊಡ್ಡ ಪ್ರಮಾಣದಲ್ಲಿ ಆವರಿಸಿತು.
ಮಾನವ ಮೆದುಳಿನ ಅಪರೂಪದ ನರಕೋಶಗಳ ಬೆಳವಣಿಗೆ
ಆದರೆ ಈ ಅಂಗಾಂಶವು ಸಂಪೂರ್ಣ ಮಾನವ ಮೆದುಳಿನ ಪ್ರತಿರೂಪವಾಗಿರಲಿಲ್ಲ. ಸುಮಾರು ಆರು ತಿಂಗಳ ಬಳಿಕವೂ ಅದು ಬೆಳವಣಿಗೆಯ ದೃಷ್ಟಿಯಿಂದ ಇನ್ನೂ ಅಪಕ್ವವಾಗಿಯೇ (Immature) ಇತ್ತು. ಅದರ ಸ್ಥಿತಿ ಗರ್ಭಾವಸ್ಥೆಯ ಮಧ್ಯ ಹಂತದ (Mid-Gestation) ಮಾನವ ಮೆದುಳಿನಂತಿತ್ತು. ಪ್ರೌಢ ಕಾರ್ಟೆಕ್ಸ್ನಲ್ಲಿ ಕಂಡುಬರುವ ಪದರಗಳ (Layers) ವಿನ್ಯಾಸವೂ ಅದರಲ್ಲಿ ಇನ್ನೂ ಸಂಪೂರ್ಣ ರೂಪುಗೊಂಡಿರಲಿಲ್ಲ.
ಆದರೂ ವಿಜ್ಞಾನಿಗಳು ಇದುವರೆಗೆ ಇತರ ಮಾದರಿಗಳಲ್ಲಿ ಸೃಷ್ಟಿಸಲು ಕಷ್ಟಪಟ್ಟಿದ್ದ ಕೆಲವು ವಿಶೇಷ ನರಕೋಶಗಳು ಇಲ್ಲಿ ಬೆಳೆಯಲು ಆರಂಭಿಸಿದವು.
ಇವುಗಳಲ್ಲಿ ‘ಲೇಯರ್-5 ಎಕ್ಸ್ಟ್ರಾಟೆಲೆನ್ಸೆಫಾಲಿಕ್ ನ್ಯೂರಾನ್ಗಳು’ (Layer 5 Extratelencephalic Neurons – L5-ET Neurons) ಪ್ರಮುಖವಾಗಿವೆ. ಇವು ಮೆದುಳಿನ ಕಾರ್ಟೆಕ್ಸ್ನಿಂದ ನರಮಂಡಲದ ದೂರದ ಭಾಗಗಳಿಗೆ ಸಂದೇಶ ಕಳುಹಿಸುವ ದೀರ್ಘ ನರತಂತುಗಳನ್ನು ಹೊಂದಿರುವ ನರಕೋಶಗಳಾಗಿವೆ.
ಇದಲ್ಲದೆ ವಿಜ್ಞಾನಿಗಳು ‘ವಾನ್ ಎಕನೊಮೊ ನ್ಯೂರಾನ್’ (Von Economo Neurons – VENs) ಗಳನ್ನು ಹೋಲುವ ಕೋಶಗಳನ್ನೂ ಪತ್ತೆಹಚ್ಚಿದರು. ಮಾನವ ಮೆದುಳಿನ ಕೆಲವು ನಿರ್ದಿಷ್ಟ ಭಾಗಗಳಲ್ಲಿ ಮಾತ್ರ ಕಂಡುಬರುವ ಈ ಉದ್ದನೆಯ ಆಕಾರದ ಅಪರೂಪದ ನರಕೋಶಗಳನ್ನು ಪ್ರಯೋಗಾಲಯದಲ್ಲಿ ಮರುಸೃಷ್ಟಿಸುವುದು ಅತ್ಯಂತ ಕಷ್ಟಕರವೆಂದು ಪರಿಗಣಿಸಲಾಗಿತ್ತು. ವಿಶೇಷವೆಂದರೆ 2022ರ ಇಲಿ (Rat) ಅಧ್ಯಯನದಲ್ಲಿ ಇವು ಕಂಡುಬಂದಿರಲಿಲ್ಲ.
ಇಲಿಯ ಮೆದುಳು ಏನು ವಿಶೇಷ ನೆರವು ನೀಡಿತು?
ಮಾನವ ನರಕೋಶಗಳು ಇಲಿಯ ಮೆದುಳಿನಲ್ಲಿ ಏಕೆ ಉತ್ತಮವಾಗಿ ಬೆಳೆಯುತ್ತವೆ ಎಂಬ ಪ್ರಶ್ನೆಗೆ ವಿಜ್ಞಾನಿಗಳ ಬಳಿ ಇನ್ನೂ ಸ್ಪಷ್ಟ ಉತ್ತರ ಇಲ್ಲ.
ಪಾಸ್ಕಾ ಅವರ ಪ್ರಕಾರ, ಮಾನವ ಕಾರ್ಟಿಕಲ್ ನರಕೋಶಗಳಿಗೆ ನರಮಂಡಲದ ದೂರದ ಭಾಗಗಳೊಂದಿಗೆ ಸಂಪರ್ಕ ಸಾಧಿಸುವ ಅವಕಾಶ ದೊರೆಯುವುದರಿಂದ ಪ್ರಯೋಗಾಲಯದ ಆರ್ಗನಾಯ್ಡ್ಗಳಲ್ಲಿ ಸಿಗದ ಕೆಲವು ಸಂಕೇತಗಳು (Signals) ಲಭಿಸುತ್ತಿರಬಹುದು. ಅಲ್ಲದೆ ಜೀವಂತ ದೇಹದ ಪರಿಸರದಲ್ಲಿ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳು (Trophic Factors), ಬೆಳವಣಿಗೆ ಅಂಶಗಳು (Growth Factors), ನರಕೋಶಗಳ ಚಟುವಟಿಕೆಗೆ ಸಂಬಂಧಿಸಿದ ಸಂಕೇತಗಳು, ರಕ್ತನಾಳಗಳ ನಿರ್ಮಾಣ (Vascularization) ಹಾಗೂ ಸುತ್ತಮುತ್ತಲಿನ ಕೋಶಗಳ ಪರಸ್ಪರ ಕ್ರಿಯೆಗಳು ದೊರೆಯುತ್ತಿರಬಹುದು ಎಂದು ಅವರು ಹೇಳಿದ್ದಾರೆ.
ಮಾನವ ಅಂಗಾಂಶ ಇಲಿಯ ವರ್ತನೆ ಬದಲಿಸಿತೇ?
ಈ ಅಧ್ಯಯನದ ಮತ್ತೊಂದು ಕುತೂಹಲಕಾರಿ ಪ್ರಶ್ನೆ ಎಂದರೆ, ಮಾನವ ಮೆದುಳಿನ ಅಂಗಾಂಶ ಅಳವಡಿಸಿದ ಪರಿಣಾಮ ಇಲಿಗಳ ವರ್ತನೆಯಲ್ಲಿ ಬದಲಾವಣೆ ಉಂಟಾಯಿತೇ ಎಂಬುದು.
ಇದನ್ನು ಪರೀಕ್ಷಿಸಲು ವಿಜ್ಞಾನಿಗಳು ಮೂರು ಗುಂಪಿನ ಇಲಿಗಳನ್ನು ‘ವೈ-ಮೇಜ್’ (Y-Maze) ಪರೀಕ್ಷೆಗೆ ಒಳಪಡಿಸಿದರು. ಒಂದು ಸಾಮಾನ್ಯ ಇಲಿಗಳ ಗುಂಪು, ಮತ್ತೊಂದು ಅಪಾಲಿಯಲ್ ಇಲಿಗಳು ಹಾಗೂ ಮೂರನೆಯದು ಕ್ಸೆನೋಕಾರ್ಟಿಕಲ್ ಇಲಿಗಳು.
ಸಾಮಾನ್ಯವಾಗಿ ಇಲಿಗಳು ತಾವು ಈಗಾಗಲೇ ಹೋದ ಮಾರ್ಗವನ್ನು ಮರು ಆಯ್ಕೆ ಮಾಡುವುದಕ್ಕಿಂತ ಹೊಸ ದಾರಿಯನ್ನು ಅನ್ವೇಷಿಸಲು ಇಷ್ಟಪಡುತ್ತವೆ. ಹೀಗಾಗಿ ಅವು ಹಿಂದೆ ಯಾವ ದಾರಿಯಲ್ಲಿ ನಡೆದಿವೆ ಎಂಬುದನ್ನು ನೆನಪಿಡುವ ಸಾಮರ್ಥ್ಯವು ‘ವರ್ಕಿಂಗ್ ಮೆಮೊರಿ’ (Working Memory) ಯ ಸರಳ ಪರೀಕ್ಷೆಯಾಗಿ ಬಳಸಲಾಗುತ್ತದೆ.
ಪರೀಕ್ಷೆಯಲ್ಲಿ ಸಾಮಾನ್ಯ ಇಲಿಗಳು ನಿರೀಕ್ಷೆಯಂತೆ ಉತ್ತಮ ಪ್ರದರ್ಶನ ನೀಡಿದವು. ಅಪಾಲಿಯಲ್ ಇಲಿಗಳು ಮಾತ್ರ ಯಾದೃಚ್ಛಿಕ ಮಟ್ಟಕ್ಕಿಂತ ಉತ್ತಮ ಪ್ರದರ್ಶನ ತೋರಲಿಲ್ಲ. ಇದರಿಂದ ಕಾರ್ಟೆಕ್ಸ್ ಮತ್ತು ಹಿಪೋಕ್ಯಾಂಪಸ್ ಇಲ್ಲದಿರುವುದರಿಂದ ಅವುಗಳಿಗೆ ನೆನಪಿನ ಸಮಸ್ಯೆ ಉಂಟಾಗಿರುವುದು ಸ್ಪಷ್ಟವಾಯಿತು.
ಆದರೆ ಕ್ಸೆನೋಕಾರ್ಟಿಕಲ್ ಇಲಿಗಳು ಯಾದೃಚ್ಛಿಕ ಮಟ್ಟಕ್ಕಿಂತ ಉತ್ತಮ ಪ್ರದರ್ಶನ ನೀಡಿದವು. ಆದಾಗ್ಯೂ ಈ ಫಲಿತಾಂಶದಿಂದ ಮಾನವ ನರಕೋಶಗಳೇ ನೇರವಾಗಿ ಆ ವರ್ತನೆಗೆ ಕಾರಣ ಎಂದು ಈಗಲೇ ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಪಾಸ್ಕಾ ಹೇಳಿದ್ದಾರೆ. ಈ ಕುರಿತು ಮತ್ತಷ್ಟು ಅಧ್ಯಯನಗಳು ಅಗತ್ಯವಿವೆ.
ನರರೋಗಗಳ ಚಿಕಿತ್ಸೆಗೆ ಹೊಸ ಅವಕಾಶ
ಈ ಸಂಶೋಧನೆಯ ಪ್ರಮುಖ ಉದ್ದೇಶ ಇಲಿಗಳನ್ನು ಹೆಚ್ಚು ಬುದ್ಧಿವಂತರನ್ನಾಗಿಸುವುದಲ್ಲ. ಬದಲಾಗಿ ಮಾನವ ಮೆದುಳಿನಲ್ಲಿ ಏನು ತಪ್ಪಾಗುತ್ತದೆ ಎಂಬುದನ್ನು ಅಧ್ಯಯನ ಮಾಡಲು ಉತ್ತಮ ಮಾದರಿಯನ್ನು ರೂಪಿಸುವುದಾಗಿದೆ.
ಈ ವಿಧಾನದಿಂದ ಫ್ರಂಟೊಟೆಂಪೋರಲ್ ಡಿಮೆನ್ಷಿಯಾ (Frontotemporal Dementia) ಎಂಬ ನರಕ್ಷಯ ರೋಗವನ್ನು ಅಧ್ಯಯನ ಮಾಡಲು ಸಾಧ್ಯವಾಗಬಹುದು. ಏಕೆಂದರೆ ಈ ಮಾದರಿಯಲ್ಲಿ ಈಗ ವಾನ್ ಎಕನೊಮೊ ನ್ಯೂರಾನ್ಗಳಂತಹ ಅಪರೂಪದ ನರಕೋಶಗಳನ್ನು ಸೃಷ್ಟಿಸಬಹುದು. ರೋಗಿಗಳಿಂದ ಪಡೆಯುವ ಕೋಶಗಳಿಂದ ಆರ್ಗನಾಯ್ಡ್ಗಳನ್ನು ನಿರ್ಮಿಸಿ, ಈ ವಿಶೇಷ ನರಕೋಶಗಳು ಹೇಗೆ ಹಾನಿಗೊಳಗಾಗುತ್ತವೆ ಎಂಬುದನ್ನು ಪರಿಶೀಲಿಸಬಹುದು.
ಅದೇ ರೀತಿ ಅಪಸ್ಮಾರ (Epilepsy) ರೋಗದಲ್ಲಿ ರೋಗಕ್ಕೆ ಸಂಬಂಧಿಸಿದ ಮಾನವ ನರಕೋಶಗಳು ಅಸಹಜ ವಿದ್ಯುತ್ ಚಟುವಟಿಕೆ ಅಥವಾ ಆಕಸ್ಮಿಕ ಆಘಾತಗಳನ್ನು (Seizures) ಉಂಟುಮಾಡುತ್ತವೆಯೇ ಹಾಗೂ ಅವುಗಳನ್ನು ಔಷಧಿಗಳ ಮೂಲಕ ಸರಿಪಡಿಸಬಹುದೇ ಎಂಬುದನ್ನು ಅಧ್ಯಯನ ಮಾಡಲು ಸಾಧ್ಯವಾಗುತ್ತದೆ.
ಆಟಿಸಂ (Autism) ಸೇರಿದಂತೆ ಇತರ ನರಾಭಿವೃದ್ಧಿ ಸಮಸ್ಯೆಗಳ (Neurodevelopmental Disorders) ಸಂದರ್ಭದಲ್ಲಿ ಮಾನವ ಕಾರ್ಟಿಕಲ್ ಸರ್ಕ್ಯೂಟ್ಗಳಲ್ಲಿನ (Cortical Circuits) ಬದಲಾವಣೆಗಳು ಜೀವಯ ವರ್ತನೆಯ ಮೇಲೆ ಯಾವ ಪರಿಣಾಮ ಬೀರುತ್ತವೆ ಎಂಬುದನ್ನೂ ಪರೀಕ್ಷಿಸಬಹುದು.
ನೈತಿಕ ಪ್ರಶ್ನೆಗಳೂ ಉದ್ಭವ
ಮಾನವ ನರ ಅಂಗಾಂಶವನ್ನು ಈ ಮಟ್ಟದಲ್ಲಿ ಮತ್ತೊಂದು ಪ್ರಾಣಿಯ ಮೆದುಳಿನಲ್ಲಿ ಅಳವಡಿಸುವುದು ಹಲವಾರು ನೈತಿಕ ಪ್ರಶ್ನೆಗಳನ್ನು ಕೂಡ ಹುಟ್ಟುಹಾಕಿದೆ.
ಈ ಪ್ರಯೋಗ ಆರಂಭಕ್ಕೂ ಮುನ್ನವೇ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಜೀವ ನೈತಿಕ ತಜ್ಞರು (Bioethicists), ನರ ವಿಜ್ಞಾನಿಗಳು, ಕಾನೂನು ತಜ್ಞರು, ರೋಗಿಗಳ ಪ್ರತಿನಿಧಿಗಳು ಹಾಗೂ ಇತರ ಪರಿಣಿತರ ಸಮಿತಿಯನ್ನು ಈ ಯೋಜನೆಯಲ್ಲಿ ಒಳಗೊಳಿಸಿಕೊಳ್ಳಲಾಗಿತ್ತು.
ಪ್ರಾಣಿಗಳಿಗೆ ಆಗುವ ನೋವು ಹಾಗೂ ಸಂಕಷ್ಟಗಳು ಈ ರೀತಿಯ ಸಂಶೋಧನೆಯಿಂದ ಸಿಗುವ ಪ್ರಯೋಜನಕ್ಕೆ ತಕ್ಕದ್ದೇ ಎಂಬ ಪ್ರಶ್ನೆ ಒಂದು ಕಡೆ ಇದ್ದರೆ, ಮತ್ತೊಂದೆಡೆ ಹೆಚ್ಚು ಸಂಕೀರ್ಣ ಮಾನವ ನರ ಅಂಗಾಂಶವನ್ನು ಪ್ರಾಣಿಗಳ ನರಮಂಡಲದಲ್ಲಿ ಅಳವಡಿಸಿದಾಗ ಅನಿರೀಕ್ಷಿತ ಹೊಸ ಗುಣಲಕ್ಷಣಗಳು (Emergent Properties) ಉಂಟಾಗಬಹುದೇ ಎಂಬ ಪ್ರಶ್ನೆಯೂ ಇದೆ.
ಈ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡೇ ಸಂಶೋಧಕರು ಪ್ರಯೋಗದ ಅವಧಿಯಲ್ಲಿ ಇಲಿಗಳ ಜೀವಶಾಸ್ತ್ರೀಯ ಹಾಗೂ ವರ್ತನಾ ಬದಲಾವಣೆಗಳನ್ನು ನಿರಂತರವಾಗಿ ಪರಿಶೀಲಿಸಿದ್ದಾರೆ.
ಆದರೆ ಮತ್ತೊಂದು ಅಂಶವೂ ಮಹತ್ವದ್ದಾಗಿದೆ. ಜಗತ್ತಿನಲ್ಲಿರುವ ಸುಮಾರು ಐವರಲ್ಲಿ ಒಬ್ಬರು ಯಾವುದಾದರೂ ನರರೋಗ ಅಥವಾ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತಹ ಅನೇಕ ರೋಗಗಳ ಮೂಲ ಜೈವಿಕ ಕಾರಣಗಳನ್ನು ಇನ್ನೂ ವಿಜ್ಞಾನಿಗಳು ಸಂಪೂರ್ಣವಾಗಿ ಅರ್ಥಮಾಡಿಕೊಂಡಿಲ್ಲ. ಸಾಂಪ್ರದಾಯಿಕ ಪ್ರಾಣಿ ಮಾದರಿಗಳು ಅಥವಾ ಪ್ರಯೋಗಾಲಯದಲ್ಲಿ ಬೆಳೆಯುವ ಕೋಶಗಳ ಮೂಲಕ ಈ ರೋಗಗಳನ್ನು ಸಮರ್ಪಕವಾಗಿ ಅಧ್ಯಯನ ಮಾಡಲು ಸಾಧ್ಯವಾಗುತ್ತಿಲ್ಲ.
ಹೀಗಾಗಿ ಮಾನವ ಮೆದುಳಿನ ಕಾರ್ಯವೈಖರಿಯನ್ನು ಹೆಚ್ಚು ಸಮೀಪದಿಂದ ಅರ್ಥಮಾಡಿಕೊಳ್ಳಲು ಹಾಗೂ ಹೊಸ ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸಲು ಈ ಹೊಸ ‘ಕ್ಸೆನೋಕಾರ್ಟಿಕಲ್ ಇಲಿ’ ಮಾದರಿ ಭವಿಷ್ಯದಲ್ಲಿ ಅತ್ಯಂತ ಮಹತ್ವದ ಸಾಧನವಾಗುವ ಸಾಧ್ಯತೆ ಇದೆ.


ನಿಮ್ಮ ಕಾಮೆಂಟ್ ಬರೆಯಿರಿ