ರಾಂಚಿ: ಸಾಮಾನ್ಯವಾಗಿ ಕಳ್ಳತನಕ್ಕೆ ನುಗ್ಗಿದ ಕಳ್ಳ ಸಿಕ್ಕಿಬಿದ್ದರೆ ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸುವುದು ಅಥವಾ ಅಂಗಡಿಯಿಂದ ಹೊರಹಾಕುವುದು ಸಹಜ. ಆದರೆ ಮದ್ಯದ ಅಂಗಡಿಗೆ ನುಗ್ಗಿದ “ಕಳ್ಳ”ನನ್ನು ಕಂಡ ಜನರು ಮಾತ್ರ ಅದನ್ನು ಶಿಕ್ಷಿಸುವ ಬದಲು ಮೊಬೈಲ್ಗಳಲ್ಲಿ ವಿಡಿಯೊ ಚಿತ್ರೀಕರಿಸಲು ಮುಂದಾಗಿದ್ದಾರೆ. ಇದಕ್ಕೆ ಕಾರಣ, ಮದ್ಯದ ಅಂಗಡಿಗೆ ನುಗ್ಗಿ ಮಂಗ ವೋಡ್ಕಾ ಕುಡಿದು ಮತ್ತು ಏರಿ ಅಂಗಡಿಯಲ್ಲೇ ಗಡದ್ದಾಗಿ ಮಲಗಿತ್ತು…!
ಈ ವಿಚಿತ್ರ ಘಟನೆ ಜಾರ್ಖಂಡ್ನ ರಾಂಚಿಯ ಒರ್ಮಾಂಜಿ ಚೌಕ್ನಲ್ಲಿರುವ ಮದ್ಯದ ಅಂಗಡಿಯಲ್ಲಿ ನಡೆದಿದೆ. ಅಂಗಡಿಯ ಸಿಬ್ಬಂದಿ ಕೆಲಸದಲ್ಲಿ ನಿರತರಾಗಿದ್ದ ವೇಳೆ ಏಕಾಏಕಿ ಮಂಗವೊಂದು ಅಂಗಡಿಗೆ ನುಗ್ಗಿದೆ. ಆರಂಭದಲ್ಲಿ ಸಿಬ್ಬಂದಿ ಅದನ್ನು ಓಡಿಸಲು ಯತ್ನಿಸಿದ್ದು, ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಬಿಸ್ಕತ್ಗಳನ್ನೂ ನೀಡಿದ್ದರು. ಆದರೆ ಮಂಗ ಸಿಬ್ಬಂದಿಯ ಪ್ರಯತ್ನಗಳಿಗೆ ಮಣಿಯದೇ ನೇರವಾಗಿ ಮದ್ಯದ ಬಾಟಲಿಯತ್ತ ತೆರಳಿದೆ.
ಅದು ವೋಡ್ಕಾ ಬಾಟಲಿಯನ್ನು ಎತ್ತಿಕೊಂಡು ಅದರಲ್ಲಿದ್ದ ಮದ್ಯವನ್ನು ಕುಡಿದಿದೆ. ಅರ್ಧ ಬಾಟಲಿ ಮದ್ಯ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಮಂಗವು ಮತ್ತೇರಿದ ಸ್ಥಿತಿಗೆ ತಲುಪಿದ್ದು, ಅಂಗಡಿಯೊಳಗಿದ್ದ ಮದ್ಯದ ಬಾಕ್ಸ್ಗಳ ಮೇಲೆಯೇ ಮಲಗಿದೆ, ಸ್ವ್ಲಪ ಹೊತ್ತಿನ ಬಳಿಕ ಅಲ್ಲೇ ಗಾಢ ನಿದ್ರೆಗೆ ಜಾರಿದೆ.
ಮಂಗದ ಈ ವಿಚಿತ್ರ ವರ್ತನೆ ಕಂಡ ಅಂಗಡಿಯ ಸಿಬ್ಬಂದಿ ಹಾಗೂ ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಮದ್ಯ ಸೇವಿಸಿದ ನಂತರ ಅದು ಸಾಕಷ್ಟು ಸಮಯ ಅಂಗಡಿಯೊಳಗೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದುದಾಗಿ ತಿಳಿದುಬಂದಿದೆ. ಘಟನಾ ಸ್ಥಳದಲ್ಲಿದ್ದ ಹಲವರು ತಮ್ಮ ಮೊಬೈಲ್ಗಳಲ್ಲಿ ಈ ಸಂಪೂರ್ಣ ದೃಶ್ಯವನ್ನು ಸೆರೆಹಿಡಿದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊಗಳಲ್ಲಿ, ಒಂದು ಕಡೆ ಗ್ರಾಹಕರು ಎಂದಿನಂತೆ ಮದ್ಯ ಖರೀದಿಸುತ್ತಿದ್ದರೆ, ಮತ್ತೊಂದು ಕಡೆ ಅಂಗಡಿಯಲ್ಲಿ ಮದ್ಯದ ಬಾಕ್ಸ್ಗಳ ಮೇಲೆ ಮಂಗ ಗಡದ್ದಾಗಿ ನಿದ್ರೆ ಮಾಡುತ್ತಿರುವ ದೃಶ್ಯಗಳು ಕಾಣಿಸುತ್ತವೆ. ಅಂಗಡಿಯ ಸಿಬ್ಬಂದಿಯೂ ತಮ್ಮ ಕೆಲಸವನ್ನು ಎಂದಿನಂತೆ ಮುಂದುವರಿಸಿರುವುದು ವಿಡಿಯೊಗಳಲ್ಲಿ ಗೋಚರಿಸುತ್ತದೆ.
ಅಂಗಡಿ ಮಾಲೀಕರು ಹಾಗೂ ಸ್ಥಳೀಯರ ಪ್ರಕಾರ, ಕಳೆದ ಕೆಲವು ದಿನಗಳಿಂದ ಈ ಮಂಗ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಬಿಸಾಕಿದ ಮದ್ಯದ ಬಾಟಲಿಗಳಲ್ಲಿ ಉಳಿದಿದ್ದ ಮದ್ಯವನ್ನು ಕುಡಿಯುತ್ತಿದ್ದುದನ್ನು ಹಲವರು ಗಮನಿಸಿದ್ದರು. ಇದೀಗ ನೇರವಾಗಿ ಮದ್ಯದ ಅಂಗಡಿಗೆ ನುಗ್ಗಿ ವೋಡ್ಕಾ ಕುಡಿದು ಅಮಲೇರಿ ಮಲಗಿರುವ ಘಟನೆ ಸ್ಥಳೀಯರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಅದರ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಈ ಸುದ್ದಿ ಹರಡುತ್ತಿದ್ದಂತೆಯೇ ಮಂಗವನ್ನು ಸುರಕ್ಷಿತವಾಗಿ ಮದ್ಯದ ಅಂಗಡಿಯಿಂದ ಹೊರಕ್ಕೆ ಒಯ್ಯಲು ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿದೆ ಎಂದು ವರದಿಯಾಗಿದೆ. ಮಂಗಕ್ಕೆ ಯಾವುದೇ ರೀತಿಯ ತೊಂದರೆ ಅಥವಾ ಆತಂಕ ಉಂಟಾಗದಂತೆ ಎಚ್ಚರಿಕೆಯಿಂದ ಅದನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಯಿತು.
ಮದ್ಯದ ಅಂಗಡಿಗೆ ಮಂಗದ ಈ ಅನಿರೀಕ್ಷಿತ ಭೇಟಿ ಮತ್ತು ಅದೇ ಅಂಗಡಿಯನ್ನು ವಿಶ್ರಾಂತಿ ತಾಣವನ್ನಾಗಿ ಮಾಡಿಕೊಂಡಿರುವ ಅದರ ವರ್ತನೆ ಸ್ಥಳೀಯರ ಗಮನ ಸೆಳೆದಿದ್ದು, ಹಲವರಿಗೆ ಮನರಂಜನೆಯ ವಿಷಯವಾಗಿತ್ತು. ಮಂಗದ ಕಾಟಗಳು ಹಾಗೂ ಅದರ ವಿಚಿತ್ರ ವರ್ತನೆ ಕಂಡು ಜನರು ಆಶ್ಚರ್ಯ ವ್ಯಕ್ತಪಡಿಸುವ ಜೊತೆಗೆ ಮನರಂಜನೆಗೂ ಕಾರಣವಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ