ಹಣ ಸುಲಿಗೆ ಮಾಡಲು ಮನೆಗೆ ನುಗ್ಗಿ ವೈದ್ಯರಿಗೆ ದೊಣ್ಣೆ, ಪಾತ್ರೆಗಳಿಂದ ಹೊಡೆದ ‘ಬಿಗ್ ಬಾಸ್’ ಸ್ಪರ್ಧಿ…!

ಪುಣೆ:  ₹5 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟು, ಹಣ ಕೊಡದೇ ಇದ್ದುದಕ್ಕೆ ಕೆಲವರೊಂದಿಗೆ ವೈದ್ಯರ ಮನೆಗೆನುಗ್ಗಿ ಹಲ್ಲೆ ನಡೆಸಿ, ಮನೆ ವಸ್ತುಗಳನ್ನು ಧ್ವಂಸಗೊಳಿಸಿ ಕಾರನ್ನು ಕಸಿದುಕೊಂಡ ಆರೋಪದ ಮೇಲೆ ‘ಬಿಗ್ ಬಾಸ್ ಮರಾಠಿ’ ಖ್ಯಾತಿಯ ರೀಲ್ ಸ್ಟಾರ್ ದಿವ್ಯಾ ಶಿಂಧೆ ಸೇರಿದಂತೆ ಎಂಟುಜನರ ವಿರುದ್ಧ ಪುಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪುಣೆ ಕ್ಯಾಂಟೋನ್ಮೆಂಟ್ ಮಂಡಳಿಯ ಮಾಜಿ ಮುಖ್ಯ ವೈದ್ಯಾಧಿಕಾರಿ (CMO) ಡಾ. ವಿದ್ಯಾಧರ ಗಾಯಕ್ವಾಡ ಅವರು ನೀಡಿರುವ ದೂರಿನ ಆಧಾರದ ಮೇಲೆ ಕಾಲೇಪಾಡಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಯಕ್ರಮವೊಂದನ್ನು ಪ್ರಚಾರ ಮಾಡುವ ನೆಪದಲ್ಲಿ ದಿವ್ಯಾ ಶಿಂಧೆ ಹಾಗೂ ಇತರ ಆರೋಪಿಗಳು ತಮ್ಮಿಂದ ₹5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ವೈದ್ಯರು ದೂರಿನಲ್ಲಿ ಆರೋಪಿಸಿದ್ದಾರೆ.
ಆಗಸ್ಟ್‌ನಿಂದಲೇ ₹5 ಲಕ್ಷಕ್ಕೆ ಬೇಡಿಕೆ
₹5 ಲಕ್ಷ ನೀಡುವಂತೆ ಆಗಸ್ಟ್‌ನಿಂದಲೇ ತನಗೆ ಫೋನ್ ಕರೆಗಳು ಬರುತ್ತಿದ್ದವು ಎಂದು ಗಾಯಕ್ವಾಡ ದೂರಿನಲ್ಲಿ ತಿಳಿಸಿದ್ದಾರೆ. ಸೆಪ್ಟೆಂಬರ್ 17ರಂದು ಈ ಬೆಳವಣಿಗೆ ಮತ್ತಷ್ಟು ತೀವ್ರಗೊಂಡಿದ್ದು, ‘ಬಿಗ್ ಬಾಸ್ ಮರಾಠಿ’ ಸ್ಪರ್ಧಿಯಾಗಿದ್ದ ದಿವ್ಯಾ ಶಿಂಧೆ ಕೆಲವರೊಂದಿಗೆ ನೇರವಾಗಿ ವೈದ್ಯರ ಮನೆ ಬಾಗಿಲಿಗೆ ಬಂದಿದ್ದರು ಎನ್ನಲಾಗಿದೆ.
ನಂತರ ಸೆಪ್ಟೆಂಬರ್ 23ರಂದು ಗಾಯಕ್ವಾಡ ಅವರನ್ನು ಹೋಟೆಲ್‌ವೊಂದಕ್ಕೆ ಕರೆಸಿಕೊಂಡು ಮತ್ತೆ ₹5 ಲಕ್ಷ ಹಣ ನೀಡುವಂತೆ ಒತ್ತಾಯಿಸಲಾಯಿತು. ಹಣ ನೀಡದಿದ್ದರೆ ಮನೆಗೆ ಗೂಂಡಾಗಳನ್ನು ಕಳುಹಿಸಿ ಹೊಡೆಸುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು ಎಂದು ವೈದ್ಯರು ದೂರಿನಲ್ಲಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಆನ್‌ಲೈನ್‌ನಲ್ಲಿ ತಮ್ಮ ಸಂಪತ್ತು ಪ್ರದರ್ಶಿಸಿದ ಯೂಟ್ಯೂಬರ್‌ ; ಮನೆಗೆ ಕನ್ನ ಹಾಕಿ ₹1 ಕೋಟಿ ಚಿನ್ನಾಭರಣ ಹೊತ್ತೊಯ್ದ ಕಳ್ಳರು !

ಮನೆಗೆ ನುಗ್ಗಿ ವೈದ್ಯರ ಮೇಲೆ ಹಲ್ಲೆ
ಸೆಪ್ಟೆಂಬರ್ 24ರ ಗುರುವಾರ ರಾತ್ರಿ 8ರಿಂದ 10 ಮಂದಿ ಇದ್ದ ಗುಂಪು ದಿವ್ಯಾ ಶಿಂಧೆ ಸೇರಿದಂತೆ ವೈದ್ಯರ ಮನೆಗೆ ಬಲವಂತವಾಗಿ ನುಗ್ಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ವೈದ್ಯರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಆರೋಪಿಗಳು ಗಾಯಕ್ವಾಡ ಅವರ ಮುಖ, ಹೊಟ್ಟೆ ಹಾಗೂ ಬೆನ್ನಿಗೆ ಕಾಲಿನಿಂದ ಒದ್ದು, ಗುದ್ದಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇಷ್ಟಕ್ಕೇ ನಿಲ್ಲದ ಆರೋಪಿಗಳು ಹರಿತವಾದ ಆಯುಧಗಳು, ದೊಣ್ಣೆಗಳು, ಬೆಲ್ಟ್‌ಗಳು ಹಾಗೂ ಕಬ್ಬಿಣದ ಪಾತ್ರೆಗಳನ್ನು ಬಳಸಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವೈದ್ಯರು ದೂರಿನಲ್ಲಿ ತಿಳಿಸಿದ್ದಾರೆ.
ತಾನು ಪಾರ್ಶ್ವವಾಯು ಪೀಡಿತನಾಗಿದ್ದು, ತನ್ನನ್ನು ಬಿಟ್ಟುಬಿಡುವಂತೆ ಗಾಯಕ್ವಾಡ ಆರೋಪಿಗಳ ಬಳಿ ಅಂಗಲಾಚಿದರೂ ಅವರು ಕಿವಿಗೊಡಲಿಲ್ಲ. ಬದಲಿಗೆ ಹಲ್ಲೆ ಹಾಗೂ ದಾಂಧಲೆ ಮುಂದುವರಿಸಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

 ಕಾರು ಕಸಿದುಕೊಂಡ ಆರೋಪ
ವೈದ್ಯರ ಮೇಲೆ ಹಲ್ಲೆ ನಡೆಸಿದ ಬಳಿಕ ಆರೋಪಿಗಳು ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸಗೊಳಿಸಿ ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ. ₹5 ಲಕ್ಷ ಹಣವನ್ನು ಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವೈದ್ಯರ ಕಾರನ್ನು ಕಸಿದುಕೊಂಡು ಆರೋಪಿಗಳು ಅಲ್ಲಿಂದ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಯಿಂದ ಗಾಯಕ್ವಾಡ ಅವರ ತಲೆಗೆ ಆಳವಾದ ಗಾಯವಾಗಿದೆ. ಮುಖದ ಇತರ ಭಾಗಗಳಲ್ಲಿಯೂ ಗಾಯಗಳಾಗಿರುವುದು ಕಂಡುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿವ್ಯಾ ಶಿಂಧೆ, ಅಣ್ಣಾ ಧಾಮಧೆರೆ ಸೇರಿದಂತೆ ಒಟ್ಟು ಎಂಟು ಮಂದಿ ವಿರುದ್ಧ ವಿವಿಧ ಕಾನೂನು ಸೆಕ್ಷನ್‌ಗಳಡಿ ಕಾಲೇಪಾಡಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಹಾಯಕ ಪೊಲೀಸ್ ನಿರೀಕ್ಷಕ ಅಮಿತ್ ಶೆಟೆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ರೀಲ್ಸ್ ಮೂಲಕ ಖ್ಯಾತಿ ಪಡೆದಿದ್ದ ದಿವ್ಯಾ
ದಿವ್ಯಾ ಶಿಂಧೆ ಈ ವರ್ಷದ ಆರಂಭದಲ್ಲಿ ಪ್ರಸಾರವಾದ ‘ಬಿಗ್ ಬಾಸ್ ಮರಾಠಿ 6’ರಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ ರೀಲ್ಸ್ ಮೂಲಕ ಅವರು ಗಮನ ಸೆಳೆದಿದ್ದರು. ಇದೀಗ ವೈದ್ಯರ ಮನೆಗೆ ನುಗ್ಗಿ ಹಲ್ಲೆ ಹಾಗೂ ಕಾರು ಕಸಿದುಕೊಂಡ ಆರೋಪದ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿದೆ.

ಪ್ರಮುಖ ಸುದ್ದಿ :-   ವಿಡಿಯೋ : ಸಾರಾಯಿ ಅಂಗಡಿಗೆ ನುಗ್ಗಿ ಬಾಟಲಿಯಲ್ಲಿದ್ದ ಮದ್ಯ ಕುಡಿದು ಅಂಗಡಿಯಲ್ಲೇ ಗಡದ್ದಾಗಿ ನಿದ್ದೆ ಹೊಡೆದ ಮಂಗ !

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement