ಜೈಪುರ: ಸರ್ಕಾರಿ ಸೇವೆಯಲ್ಲಿರುವ ಉದ್ಯೋಗಿಯೊಬ್ಬರು ಸೇವೆಯಲ್ಲಿರುವಾಗಲೇ ಮೃತಪಟ್ಟರೆ, ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಅರ್ಹ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ (Compassionate Appointment) ನೀಡುವ ವ್ಯವಸ್ಥೆ ಇದೆ. ಕುಟುಂಬಕ್ಕೆ ನಿಯಮಿತ ಮತ್ತು ಸುರಕ್ಷಿತ ಆದಾಯದ ಮೂಲ ಒದಗಿಸುವುದೇ ಈ ಯೋಜನೆಯ ಉದ್ದೇಶ. ಆದರೆ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ಗಂಡ ಮೃತಪಟ್ಟ ನಂತರ ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆದಿದ್ದ ವಿಧವೆ ಪತ್ನಿ, ಉದ್ಯೋಗ ಪಡೆದ ಬಳಿಕ ಮತ್ತೊಬ್ಬರನ್ನು ಮದುವೆಯಾಗಿ ಅತ್ತೆ-ಮಾವನನ್ನು ಬಿಟ್ಟು ಹೋದ ಪ್ರಕರಣದಲ್ಲಿ ರಾಜಸ್ಥಾನ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಜ್ಮೇರ್ ವಿದ್ಯುತ್ ವಿತರಣ ನಿಗಮದ (Ajmer Vidyut Vitran Nigam Limited-AVVNL) ಉದ್ಯೋಗಿಯಾಗಿದ್ದ ವ್ಯಕ್ತಿ 2017ರ ಮಾರ್ಚ್ 24ರಂದು ನಿಧನರಾಗಿದ್ದರು. ಅವರ ಸಾವಿನ ಬಳಿಕ ಸರ್ಕಾರದ ನಿಯಮದಂತೆ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಬಹುದೆಂದು ಎವಿವಿಎನ್ಎಲ್ ಕುಟುಂಬಕ್ಕೆ ತಿಳಿಸಿತ್ತು.
ಈ ಹಿನ್ನೆಲೆಯಲ್ಲಿ ಕುಟುಂಬದವರು ಚರ್ಚೆ ನಡೆಸಿ, ಉದ್ಯೋಗಿಯ ವಿಧವೆ ಪತ್ನಿಗೆ ಅನುಕಂಪದ ಉದ್ಯೋಗ ನೀಡಲು ತೀರ್ಮಾನಿಸಿದರು. ಉದ್ಯೋಗ ಸಿಕ್ಕ ಬಳಿಕ ಸೊಸೆ ತಮ್ಮನ್ನು ನೋಡಿಕೊಳ್ಳುತ್ತಾರೆ ಎಂಬ ನಂಬಿಕೆಯಿಂದ ಮೃತ ಉದ್ಯೋಗಿಯ ತಂದೆ-ತಾಯಿ ಇದಕ್ಕೆ ಒಪ್ಪಿಗೆ ನೀಡಿದ್ದರು.
ಆದರೆ ಉದ್ಯೋಗ ಪಡೆದ ಬಳಿಕ ಪತ್ನಿ ತನ್ನ ಅತ್ತೆ-ಮಾವನನ್ನು ನೋಡಿಕೊಳ್ಳಲಿಲ್ಲ. ಬಳಿಕ ತನ್ನ ವೈವಾಹಿಕ ಮನೆಯನ್ನು ತೊರೆದು ಮತ್ತೊಬ್ಬರನ್ನು ವಿವಾಹವಾದರು. ಇದರಿಂದ ಸಂಕಷ್ಟಕ್ಕೆ ಸಿಲುಕಿದ ಅತ್ತೆ (ಮೃತನ ತಾಯಿ) ನ್ಯಾಯಾಲಯದ ಮೊರೆ ಹೋದರು. ವಿಚಾರಣೆ ಬಾಕಿ ಇರುವಾಗಲೇ ಮೃತ ಉದ್ಯೋಗಿಯ ತಂದೆ ನಿಧನರಾದರು. ವಯಸ್ಸಾದ ತಾಯಿಯೇ ಈ ಪ್ರಕರಣವನ್ನು ಮುಂದುವರಿಸಬೇಕಾಯಿತು.
ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ವೇಳೆ ಪತ್ನಿ ತನ್ನ ಮೃತ ಪತಿಯ ಕುಟುಂಬದ ಇತರ ಸದಸ್ಯರನ್ನು, ವಿಶೇಷವಾಗಿ ಅವರ ತಂದೆ-ತಾಯಿಯನ್ನು ನೋಡಿಕೊಳ್ಳುವುದಾಗಿ ಪ್ರಮಾಣಪತ್ರ ಸಲ್ಲಿಸಿದ್ದರು ಎಂದು ನ್ಯಾಯಾಲಯ ಗಮನಿಸಿದೆ. ಆದರೆ ಉದ್ಯೋಗ ಪಡೆದ ಬಳಿಕ ಅವರು ವೈವಾಹಿಕ ಮನೆಯನ್ನು ತೊರೆದು ಅತ್ತೆ-ಮಾವನನ್ನು ನೋಡಿಕೊಳ್ಳುವುದನ್ನು ನಿಲ್ಲಿಸಿ, ನಂತರ ಮತ್ತೊಂದು ಮದುವೆಯಾಗಿದ್ದಾರೆ.
ಅನುಕಂಪದ ಆಧಾರದ ಮೇಲೆ ಉದ್ಯೋಗವನ್ನು ಆ ಭರವಸೆಯ ಆಧಾರದ ಮೇಲೆ ಪಡೆದಿರುವುದರಿಂದ, ಅದಕ್ಕೆ ಸಂಬಂಧಿಸಿದ ಜವಾಬ್ದಾರಿಯಿಂದ ಸಂಪೂರ್ಣವಾಗಿ ದೂರವಾಗಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅನುಕಂಪದ ಉದ್ಯೋಗ ನೀಡುವ ಯೋಜನೆಯ ಉದ್ದೇಶ ಕೇವಲ ಮೃತ ಉದ್ಯೋಗಿಯ ಪತ್ನಿಗೆ ವೈಯಕ್ತಿಕ ಆರ್ಥಿಕ ಲಾಭ ನೀಡುವುದಲ್ಲ, ಮೃತ ಉದ್ಯೋಗಿಯ ಸಂಪೂರ್ಣ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುವುದಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಈ ಹಿನ್ನೆಲೆಯಲ್ಲಿ ಎವಿವಿಎನ್ಎಲ್ಗೆ ನಿರ್ದೇಶನ ನೀಡಿದ ಹೈಕೋರ್ಟ್, ಪತ್ನಿಯ ಮಾಸಿಕ ವೇತನದ 25 ಶೇಕಡಾವನ್ನು ಅತ್ತೆಗೆ ಅವರ ಜೀವಿತಾವಧಿಯವರೆಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಆದೇಶಿಸಿದೆ. ಅಲ್ಲದೆ ಮೃತ ಉದ್ಯೋಗಿಯ ಸೇವಾ ನಿವೃತ್ತಿ ಮತ್ತು ಇತರೆ ಅಂತಿಮ ಹಣಕಾಸು ಸೌಲಭ್ಯಗಳನ್ನು ತಾಯಿ ಮತ್ತು ಪತ್ನಿಯ ನಡುವೆ ಸಮಾನವಾಗಿ, ಅಂದರೆ ತಲಾ 50% ಹಂಚಿಕೆ ಮಾಡಬೇಕೆಂದು ಸೂಚಿಸಿದೆ.
ಈ ತೀರ್ಪನ್ನು ರಾಜಸ್ಥಾನ ಹೈಕೋರ್ಟ್ನ ನ್ಯಾಯಮೂರ್ತಿ ಆನಂದ ಶರ್ಮಾ ಅವರು 2026ರ ಸೆಪ್ಟೆಂಬರ್ 17ರಂದು ನೀಡಿದ್ದಾರೆ. ತೀರ್ಪಿನಲ್ಲಿ ಅನುಕಂಪದ ಉದ್ಯೋಗದ ಉದ್ದೇಶವನ್ನು ವಿವರಿಸಿದ ನ್ಯಾಯಾಲಯ, ಕುಟುಂಬದ ಏಕೈಕ ಆದಾಯದ ಮೂಲವಾಗಿದ್ದ ವ್ಯಕ್ತಿಯ ಅಕಾಲಿಕ ಸಾವಿನಿಂದ ಉಂಟಾಗುವ ಆರ್ಥಿಕ ಸಂಕಷ್ಟದಿಂದ ಕುಟುಂಬವನ್ನು ಪಾರು ಮಾಡಲು ಈ ಯೋಜನೆ ರೂಪಿಸಲಾಗಿದೆ ಎಂದು ಹೇಳಿದೆ. ಈ ಕುಟುಂಬದಲ್ಲಿ ಕೇವಲ ಮೃತನ ಪತ್ನಿ ಮಾತ್ರವಲ್ಲ, ಮೃತ ಉದ್ಯೋಗಿಯ ತಂದೆ-ತಾಯಿ ಹಾಗೂ ನಿಯಮಗಳಲ್ಲಿ ಉಲ್ಲೇಖಿಸಿರುವ ಇತರ ಕುಟುಂಬ ಸದಸ್ಯರೂ ಸೇರುತ್ತಾರೆ ಎಂದು ಸ್ಪಷ್ಟಪಡಿಸಿದೆ.
ಈ ಪ್ರಕರಣದಲ್ಲಿ ಮೃತ ಉದ್ಯೋಗಿಯ ಪತ್ನಿ ಅನುಕಂಪದ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ಕುಟುಂಬದ ಇತರ ಸದಸ್ಯರನ್ನು ನೋಡಿಕೊಳ್ಳುವುದಾಗಿ ಪ್ರಮಾಣಪತ್ರ ಸಲ್ಲಿಸಿದ್ದರು. ಆದರೆ ಉದ್ಯೋಗ ಪಡೆದ ಬಳಿಕ ಅತ್ತೆ-ಮಾವನನ್ನು ಆರ್ಥಿಕ ಹಾಗೂ ಇತರ ಸಂಕಷ್ಟಗಳಿಗೆ ತಳ್ಳುವಂತೆ ಮಾಡಿ ಅವರನ್ನು ಬಿಟ್ಟು ಹೋದರು. ಜೊತೆಗೆ ತಮ್ಮ ಮೊದಲ ವೈವಾಹಿಕ ಮನೆಯಿಂದ ಹೊರಬಂದು ಮತ್ತೊಬ್ಬರನ್ನು ಮದುವೆಯಾಗಿದ್ದಾರೆ. ಈ ಕುರಿತು ನ್ಯಾಯಾಲಯ, “ಅನುಕಂಪದ ಆಧಾರದ ಉದ್ಯೋಗದ ಲಾಭ ಪಡೆದ ಬಳಿಕ, ಆ ಉದ್ಯೋಗದ ಮೂಲ ಆಧಾರವಾಗಿದ್ದ ಜವಾಬ್ದಾರಿಯಿಂದ ಸಂಪೂರ್ಣವಾಗಿ ದೂರವಾಗಲು ಸಾಧ್ಯವಿಲ್ಲ” ಎಂದು ಹೇಳಿದೆ.
ವೈವಾಹಿಕ ಮನೆಯನ್ನು ತೊರೆದು ಮತ್ತೊಂದು ಮದುವೆಯಾಗಿರುವುದು ಹಾಗೂ ಅತ್ತೆ-ಮಾವನ ನಿರ್ವಹಣೆಯ ಜವಾಬ್ದಾರಿಯನ್ನು ನಿರ್ಲಕ್ಷಿಸಿರುವುದು ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆಯುವ ಯೋಜನೆಯ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. “ಗಂಡನ ಮರಣದ ಬಳಿಕ ಅವರ ಸ್ಥಾನದಲ್ಲಿ ಅನುಕಂಪದ ಉದ್ಯೋಗ ಪಡೆದು, ನಂತರ ವಯೋವೃದ್ಧ ಅತ್ತೆ-ಮಾವನನ್ನು ಹಾಗೆಯೇ ಬಿಟ್ಟು ಹೋಗುವುದನ್ನು ಒಪ್ಪಲಾಗದು” ಎಂದು ನ್ಯಾಯಾಲಯ ತೀಕ್ಷ್ಣವಾಗಿ ಹೇಳಿದೆ.
ಹೀಗಾಗಿ ಮೃತನ ಪತ್ನಿಯ ನಿಯಮಿತ ಮಾಸಿಕ ಸಂಬಳದ 25%ರಷ್ಟನ್ನು ಕಡಿತಗೊಳಿಸಿ ನೇರವಾಗಿ ಅತ್ತೆಯ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಹಾಗೂ ಮೃತ ಉದ್ಯೋಗಿಯ ಅಂತಿಮ ಸೇವಾ ಸೌಲಭ್ಯಗಳನ್ನು ಪತ್ನಿ ಮತ್ತು ತಾಯಿ ನಡುವೆ ಸಮಾನವಾಗಿ ಹಂಚಿಕೆ ಮಾಡಬೇಕು ಎಂದು ರಾಜಸ್ಥಾನ ಹೈಕೋರ್ಟ್ ಆದೇಶ ನೀಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ