ಅಕ್ಟೋಬರ್ 6ರ ವರೆಗೆ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ; ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಬೆಂಗಳೂರು: ರಾಜ್ಯದಲ್ಲಿ ನೈಋತ್ಯ ಮುಂಗಾರು ಅಂತಿಮ ಹಂತದಲ್ಲಿದ್ದರೂ, ಅರಬ್ಬಿ ಸಮುದ್ರದಿಂದ ಬರುತ್ತಿರುವ ತೇವಾಂಶಭರಿತ ಗಾಳಿಯ ಪರಿಣಾಮವಾಗಿ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಅಕ್ಟೋಬರ್ 6ರವರೆಗೆ ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.
ಸೋಮವಾರ ತಡರಾತ್ರಿ ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗಿದೆ. ಹವಾಮಾನ ಇಲಾಖೆ ಪ್ರಕಾರ, ಕರಾವಳಿ ಕರ್ನಾಟಕದ ಕೆಲವು ಕಡೆ ಮಂಗಳವಾರ (ಸೆಪ್ಟೆಂಬರ್ 29) ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲೂ ಗಾಳಿ ಸಹಿತ ಭಾರೀ ಮಳೆಯ ಮುನ್ಸೂಚನೆಯಿದ್ದು, 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ನೀಡಲಾಗಿದೆ. ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ನೀಡಲಾಗಿದೆ.
ಅರಬ್ಬಿ ಸಮುದ್ರದಿಂದ ಕರಾವಳಿ ಮಾರ್ಗವಾಗಿ ತೇವಾಂಶಯುಕ್ತ ಗಾಳಿಯ ಹರಿವು ಮುಂದುವರಿದಿರುವುದರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಗಲಿನ ವೇಳೆ ಬಿಸಿಲು ಹಾಗೂ ಒಣಹವಾಮಾನ ಇರಲಿದ್ದರೂ, ಸಂಜೆ ವೇಳೆಗೆ ಘಟ್ಟದ ತಳಭಾಗಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಪೂರ್ವ ದಿಕ್ಕಿನ ಗಾಳಿಯ ಪ್ರಭಾವ ಹೆಚ್ಚಾದರೆ ಕೆಲವು ಕಡೆ ಚದುರಿದ ಮಳೆಯೂ ಸುರಿಯಬಹುದು. ಕರಾವಳಿ ಭಾಗದಲ್ಲಿ ಮುಂದಿನ 10 ದಿನಗಳ ಕಾಲ ಮಳೆಯ ವಾತಾವರಣ ಮುಂದುವರಿಯುವ ನಿರೀಕ್ಷೆಯಿದೆ.
ಕೊಡಗು, ಸಕಲೇಶಪುರ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಸೇರಿದಂತೆ ಮಲೆನಾಡು ಪ್ರದೇಶಗಳಲ್ಲೂ ಸಂಜೆ ವೇಳೆಗೆ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಒಳನಾಡಿನ ಹಾವೇರಿ, ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಂಜೆ ವೇಳೆಗೆ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಸೆಪ್ಟೆಂಬರ್ 29ರಂದು ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿಭಾಗಗಳಲ್ಲೂ ಮಳೆಯಾಗುವ ಸಾಧ್ಯತೆ ಇದ್ದು, ನಂತರ ಈ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದೆ.

ಪ್ರಮುಖ ಸುದ್ದಿ :-   ಮಡಗಾಂವ್-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರು ವರೆಗೆ ವಿಸ್ತರಣೆ

ದಕ್ಷಿಣ ಒಳನಾಡಿನ ತುಮಕೂರು ಜಿಲ್ಲೆ ಹಾಗೂ ಪಾವಗಡ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಈಗಾಗಲೇ ಮಳೆ ಆರಂಭವಾಗಿದೆ. ಮಧ್ಯಾಹ್ನ ಮತ್ತು ಸಂಜೆ ವೇಳೆಗೆ ಬಹುತೇಕ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಅಕ್ಟೋಬರ್ 6ರವರೆಗೆ ಮಳೆಯ ವಾತಾವರಣ ಮುಂದುವರಿಯುವ ನಿರೀಕ್ಷೆಯಿದೆ.
ರಾಜ್ಯದಿಂದ ನೈಋತ್ಯ ಮುಂಗಾರು ಅಕ್ಟೋಬರ್ 15ರ ಸುಮಾರಿಗೆ ಮುಕ್ತಾಯವಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಮುಂಗಾರು ಗಾಳಿಗಳ ಪ್ರಭಾವ ಇನ್ನೂ ಸಂಪೂರ್ಣವಾಗಿ ಕಡಿಮೆಯಾಗದ ಕಾರಣ, ಮುಂದಿನ ಕೆಲವು ದಿನಗಳ ಕಾಲ ಹವಾಮಾನದಲ್ಲಿ ಏರಿಳಿತಗಳು ಕಂಡುಬರಬಹುದು ಎಂದು ಅವರು ಹೇಳಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement