ರಾಜಕೀಯಕ್ಕೆ ಬರುವುದಾಗಿ ಘೋಷಿಸಿದ ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ; ಆದ್ರೆ ಯಾವುದೇ ಪಕ್ಷ ಸೇರಲ್ಲ ಎಂದು ಸ್ಪಷ್ಟನೆ

ಲಕ್ನೋ : ಉತ್ತರ ಪ್ರದೇಶ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ಅವರು ಆಡಳಿತ ಸೇವೆಗೆ ರಾಜೀನಾಮೆ ನೀಡಿದ ಕೆಲವೇ ದಿನಗಳ ಬಳಿಕ ಮಂಗಳವಾರ ರಾಜಕೀಯ ಪ್ರವೇಶವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ತಮ್ಮ ರಾಜಕೀಯ ಪಯಣವು ಉತ್ತರ ಪ್ರದೇಶದಿಂದಲೇ ಆರಂಭವಾಗಲಿದ್ದು, ಯಾವುದೇ ರಾಜಕೀಯ ಪಕ್ಷವನ್ನು ಸೇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜೀನಾಮೆಯ ನಂತರ ಅವರ ಮುಂದಿನ ರಾಜಕೀಯ ನಡೆ ಕುರಿತು ಸಾಕಷ್ಟು ಊಹಾಪೋಹಗಳು ನಡೆದಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿದ ದಿವ್ಯಾ ಮಿತ್ತಲ್, ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳುವುದಕ್ಕಿಂತ ಜನರೊಂದಿಗೆ ಸೇರಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಇನ್ನೂ ಕೆಲವೇ ತಿಂಗಳುಗಳು ಬಾಕಿ ಇರುವ ಸಂದರ್ಭದಲ್ಲಿ ಅವರ ಈ ನಿರ್ಧಾರ ಮಹತ್ವ ಪಡೆದಿದೆ. ಉತ್ತರ ಪ್ರದೇಶವೇ ತಮ್ಮ “ಕರ್ಮಭೂಮಿ” ಎಂದು ಹೇಳಿರುವ ಅವರು, ಅಲ್ಲಿಂದಲೇ ತಮ್ಮ ರಾಜಕೀಯ ಪಯಣ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

2013ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ದಿವ್ಯಾ ಮಿತ್ತಲ್ ಸುಮಾರು 13 ವರ್ಷಗಳ ಸೇವೆಯ ಬಳಿಕ ರಾಜೀನಾಮೆ ಸಲ್ಲಿಸಿದ್ದರು. ಅವರ ರಾಜೀನಾಮೆಯನ್ನು ಸೆಪ್ಟೆಂಬರ್‌ನಲ್ಲಿ ಅಂಗೀಕರಿಸಲಾಗಿದೆ. ಮಿರ್ಜಾಪುರ ಮತ್ತು ದಿಯೋರಿಯಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಅವರು, ಮಿರ್ಜಾಪುರದ ದೂರದ ಗ್ರಾಮಗಳಿಗೆ ಕೊಳವೆ ನೀರು ಪೂರೈಸುವ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಕ್ಕಾಗಿ ಹೆಸರು ಪಡೆದಿದ್ದರು.
ತಮ್ಮನ್ನು “ಜನರ ಧ್ವನಿ” ಎಂದು ಬಣ್ಣಿಸಿರುವ ಮಿತ್ತಲ್, ತಮ್ಮ ರಾಜಕೀಯ ಪಯಣವು ಹೊಣೆಗಾರಿಕೆ, ನ್ಯಾಯ ಹಾಗೂ ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರದತ್ತ ಕೇಂದ್ರೀಕೃತವಾಗಿರಲಿದೆ ಎಂದು ಹೇಳಿದ್ದಾರೆ.
ಈ ಕುರಿತು ವಿಡಿಯೊ ಸಂದೇಶ ಬಿಡುಗಡೆ ಮಾಡಿದ ಅವರು, “ಕೆಲವೇ ದಿನಗಳ ಹಿಂದೆ ನಾನು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದೆ. ಅದರಿಂದ ನಿಮ್ಮ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಮೂಡಿದ್ದವು. ಕೆಲವು ದಿನಗಳ ಕಾಲ ಇದಕ್ಕೆ ಉತ್ತರ ನೀಡಲಿಲ್ಲ. ಆದರೆ ಈಗ ಆ ಪ್ರಶ್ನೆಗಳಿಗೆ ಉತ್ತರಿಸಲು ಬಂದಿದ್ದೇನೆ. ಮುಂದಿನ ನಡೆ ಏನು ಎಂದು ಅವರು ಹೇಳಿದ್ದಾರೆ.

“ಮುಂದೆ ಏನು ಎಂಬ ಪ್ರಶ್ನೆಗೆ ನನ್ನ ಉತ್ತರ ರಾಜಕೀಯ,” ಎಂದು ಹೇಳಿರುವ ಅವರು, “ನೀವು ಎಲ್ಲವನ್ನೂ ಸಾಧಿಸಿದ್ದೀರಿ, ಇನ್ನೇನು ಆಗಬೇಕೆಂದು ಬಯಸುತ್ತೀರಿ ಎಂದು ಹಲವರು ಕೇಳಿದರು. ಆದರೆ ಕಚೇರಿಗಳವರೆಗೆ ತಲುಪದ, ತಲುಪಿದರೂ ಕೇಳಿಸಿಕೊಳ್ಳದ ಜನರ ಧ್ವನಿಯಾಗಬೇಕೆಂಬುದು ನನ್ನ ಆಸೆ. ದೇಶದ 80 ವರ್ಷಗಳ ಸ್ವಾತಂತ್ರ್ಯದ ಲೆಕ್ಕ ಕೇಳಲು ನಾನು ಬಯಸುತ್ತೇನೆ,” ಎಂದು ಹೇಳಿದ್ದಾರೆ.
ಹೊಣೆಗಾರಿಕೆ ಎಂಬುದನ್ನು ತಮ್ಮ ರಾಜಕೀಯದ ಪ್ರಮುಖ ಅಂಶವನ್ನಾಗಿ ಮಾಡಿರುವ ಮಿತ್ತಲ್, ಮಿರ್ಜಾಪುರದ ಲಹುರಿಯಾ ದಾಹ್ ಪ್ರದೇಶದ ನೀರು ಸರಬರಾಜು ವ್ಯವಸ್ಥೆ ಪರಿಶೀಲನೆ ವೇಳೆ ನಡೆದ ಘಟನೆಯನ್ನು ನೆನಪಿಸಿಕೊಂಡರು. ಅಲ್ಲಿ ಒಬ್ಬ ಮಹಿಳೆ ಐದನೇ ತರಗತಿಗಿಂತ ಮೇಲಿನ ಶಾಲೆ ಬೇಕೆಂದು ಮನವಿ ಮಾಡಿದ್ದಳು. ಮೊದಲಿಗೆ ಆಕೆ ಪಿಂಚಣಿ ಅಥವಾ ಮನೆಗಾಗಿ ಮನವಿ ಮಾಡಬಹುದು ಎಂದುಕೊಂಡಿದ್ದೆ ಎಂದು ಮಿತ್ತಲ್ ಹೇಳಿದರು.
ನಂತರ ನಿಯಮಗಳನ್ನು ಪರಿಶೀಲಿಸಿ ಶಾಲೆಗೆ ಅನುಮೋದನೆ ನೀಡಲಾಗಿತ್ತು. ಆದರೆ ಮೂರು ವರ್ಷ ಕಳೆದರೂ ಕಟ್ಟಡ ನಿರ್ಮಾಣ ಆರಂಭವಾಗಿರಲಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.“ಇಚ್ಛಾಶಕ್ತಿ ಇದ್ದರೆ ಪರ್ವತವೂ ದಾರಿ ಬಿಡುತ್ತದೆ. ಆದರೆ ಇಚ್ಛಾಶಕ್ತಿ ಇಲ್ಲದಿದ್ದರೆ ಒಂದು ಕಡತವೇ ಪರ್ವತವಾಗುತ್ತದೆ,” ಎಂದು ಹೇಳಿದ ಅವರು, ಇಂತಹ ವಿಳಂಬಗಳಿಗೆ ಹೊಣೆಗಾರಿಕೆ ನಿಗದಿಯಾಗಬೇಕು ಎಂದು ಆಗ್ರಹಿಸಿದರು.

ಪ್ರಮುಖ ಸುದ್ದಿ :-   ಪಹಲ್ಗಾಮ್ ದಾಳಿ ಪ್ರಕರಣದ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ ಹಾಶಿಮ್ ಮೂಸಾನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಮತ್ತು ಸೇತುವೆಗಳ ಕೊರತೆ, ಹದಗೆಟ್ಟ ರಸ್ತೆಗಳು ಹಾಗೂ ಮಳೆಗಾಲದಲ್ಲಿ ಮಕ್ಕಳು ಮತ್ತು ಕುಟುಂಬಗಳು ಎದುರಿಸುವ ಸಂಕಷ್ಟಗಳ ಬಗ್ಗೆಯೂ ಅವರು ಗಮನ ಸೆಳೆದರು. ಯುವ ಸಮೂಹದ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಿತ್ತಲ್, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ಪ್ರಕ್ರಿಯೆಗಳಲ್ಲಿನ ದೀರ್ಘ ವಿಳಂಬ ಹಾಗೂ ಕೃತಕ ಬುದ್ಧಿಮತ್ತೆ (AI)ಯು ಉದ್ಯೋಗಗಳ ಮೇಲೆ ಬೀರುತ್ತಿರುವ ಪರಿಣಾಮಗಳ ಬಗ್ಗೆ ಮಾತನಾಡಿದ್ದಾರೆ. ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿರುವ ತಾವು, ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆ ಆತಂಕ ಹೊಂದಿದ್ದೇನೆ ಎಂದು ಹೇಳಿದರು.
“ಇಂದಿನ ರಾಜಕೀಯದಲ್ಲಿ ಅಧಿಕಾರ ಇದೆ, ಗದ್ದಲ ಇದೆ; ಆದರೆ ಚಿಂತನೆ ಇಲ್ಲ. ಆ ಚಿಂತನೆಯ ಕೊರತೆಯ ಲೆಕ್ಕವನ್ನು ನಾನು ಕೇಳಲು ಬಯಸುತ್ತೇನೆ,” ಎಂದು ಅವರು ಹೇಳಿದ್ದಾರೆ. “ನಾವು ರಾಜಕೀಯವನ್ನು ಬದಲಾಯಿಸಬೇಕಿದೆ. ನಾನು ರಾಜಕೀಯ ಮಾಡುತ್ತೇನೆ. ಆದರೆ ಯಾವುದೇ ವ್ಯಕ್ತಿಯೊಂದಿಗೆ ಅಥವಾ ಯಾವುದೇ ಪಕ್ಷದೊಂದಿಗೆ ಅಲ್ಲ; ನಿಮ್ಮೆಲ್ಲರೊಂದಿಗೆ ಸೇರಿ ರಾಜಕೀಯ ಮಾಡುತ್ತೇನೆ,” ಎಂದು ಹೇಳಿದ ಅವರು, ತಮ್ಮ ಹೋರಾಟ ಉತ್ತರ ಪ್ರದೇಶದಿಂದಲೇ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಶಿಕ್ಷಕರು, ರೈತರು, ವಿದ್ಯಾರ್ಥಿಗಳು, ವೈದ್ಯರು, ಕಾರ್ಮಿಕರು ಹಾಗೂ ವಕೀಲರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರು ತಮ್ಮ ಈ ಪ್ರಯತ್ನಕ್ಕೆ ಕೈಜೋಡಿಸಬೇಕು ಎಂದು ದಿವ್ಯಾ ಮಿತ್ತಲ್ ಮನವಿ ಮಾಡಿದ್ದಾರೆ. “ಅರ್ಥಪೂರ್ಣ ರಾಜಕೀಯ ಬದಲಾವಣೆ ಜನರ ಸಾಮೂಹಿಕ ಭಾಗವಹಿಸುವಿಕೆಯಿಂದ ಮಾತ್ರ ಸಾಧ್ಯ,” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಮೊಬೈಲ್‌, ಚಿನ್ನದ ಸರ ಖರೀದಿಸಲು 1 ತಿಂಗಳ ಮಗುವನ್ನೇ ಮಾರಿದ ದಂಪತಿ; ಪೊಲೀಸರು ಪತ್ತೆ ಮಾಡುವ ಮೊದಲು ನಾಲ್ವರಿಗೆ ಮಾರಾಟ !

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement