ವಿಡಿಯೋ..| ಬೆಂಗಳೂರು : ಬಾಡಿಗೆ ವಿಚಾರಕ್ಕೆ ನಡು ರಸ್ತೆಯಲ್ಲೇ ಇಬ್ಬರು ಯುವತಿಯರು-ಆಟೋ ಚಾಲಕನ ನಡುವೆ ಹೊಡೆದಾಟ

ಬೆಂಗಳೂರು: ಬೆಂಗಳೂರು ಮಹಾನಗರದ ನಗರದ ಎಚ್‌ಎಸ್‌ಆರ್ ಲೇಔಟ್ 3ನೇ ಸೆಕ್ಟರ್‌ನಲ್ಲಿ ಇಬ್ಬರು ಯುವತಿಯರು ಮತ್ತು ಆಟೋ ಚಾಲಕನ ನಡುವೆ ನಡೆದ ಬೀದಿ ಜಗಳದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವೈರಲ್ ಆಗಿರುವ ವಿಡಿಯೊದಲ್ಲಿ ಇಬ್ಬರು ಯುವತಿಯರು ಮತ್ತು ಆಟೋ ಚಾಲಕ ಪರಸ್ಪರ ಹೊಡೆದಾಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಜಗಳ ತೀವ್ರ ಸ್ವರೂಪ ಪಡೆದುಕೊಂಡ ವೇಳೆ ಮತ್ತೋರ್ವ ಯುವತಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿ ಜಗಳವನ್ನು ನಿಲ್ಲಿಸಿರುವುದು ವಿಡಿಯೊದಲ್ಲಿ ಗೋಚರಿಸುತ್ತದೆ.
ನಂತರ ಈ ವಿಡಿಯೊವನ್ನು ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಪೊಲೀಸರನ್ನು ಆಗ್ರಹಿಸಿದ್ದಾರೆ.

ವೈರಲ್ ವಿಡಿಯೊ ಗಮನಕ್ಕೆ ಬಂದ ಬಳಿಕ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಸಂಬಂಧಪಟ್ಟ ಯುವತಿಯರನ್ನು ಸಂಪರ್ಕಿಸಿ ದೂರು ನೀಡುವಂತೆ ಸೂಚಿಸಿದ್ದಾರೆ. ಆದರೆ ಯುವತಿಯರು ತಕ್ಷಣವೇ ದೂರು ದಾಖಲಿಸಲು ನಿರಾಕರಿಸಿದ್ದು, ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಒಂದು ಅಥವಾ ಎರಡು ದಿನಗಳ ಕಾಲಾವಕಾಶ ಕೋರಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ವೇಳೆ ಪೊಲೀಸರು ಆಟೋ ಚಾಲಕನನ್ನೂ ಪತ್ತೆಹಚ್ಚಿ ಆತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಚಾಲಕನ ಪ್ರಕಾರ, ಯುವತಿಯರು ತನ್ನ ಆಟೋವನ್ನು ಬಾಡಿಗೆಗೆ ಪಡೆದಿದ್ದರು. ಪ್ರಯಾಣದ ಬಳಿಕ ಬಾಡಿಗೆ ವಿಚಾರವಾಗಿ ಮಾತಿನ ಚಕಮಕಿ ಆರಂಭವಾಗಿ ಅದು ಜಗಳಕ್ಕೆ ತಿರುಗಿದೆ.
ಯುವತಿಯರು ಮದ್ಯದ ಅಮಲಿನಲ್ಲಿದ್ದರು, ತನ್ನನ್ನು ನಿಂದಿಸಿ ಬಾಡಿಗೆ ಪಾವತಿಸಲು ನಿರಾಕರಿಸಿದರು ಎಂದು ಚಾಲಕ ಆರೋಪಿಸಿದ್ದಾನೆ. ಅಲ್ಲದೆ, ಮೊದಲು ತನ್ನ ಮೇಲೆಯೇ ಹಲ್ಲೆ ನಡೆಸಿದ್ದು, ಅದಕ್ಕೆ ಪ್ರತಿಯಾಗಿ ತಾನು ಹೊಡೆದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
“ಯುವತಿಯರು ಅಧಿಕೃತವಾಗಿ ದೂರು ನೀಡಿದ ಬಳಿಕ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಅಕ್ಟೋಬರ್ 6ರ ವರೆಗೆ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ; ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement