ನವದೆಹಲಿ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಮುಂದಿನ 24ರಿಂದ 48 ಗಂಟೆಗಳ ಒಳಗಾಗಿ ಪಕ್ಷವು ನೂತನ ರಾಜ್ಯಾಧ್ಯಕ್ಷರ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ.
ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವದ ವಿಚಾರವಾಗಿ ವಾರಿಂಗ್ ಹಾಗೂ ಮಾಜಿ ಮುಖ್ಯಮಂತ್ರಿ ಚರಣಜೀತ್ ಸಿಂಗ್ ಚನ್ನಿ ನಡುವೆ ಹಲವು ಸಮಯದಿಂದ ಭಿನ್ನಾಭಿಪ್ರಾಯ ಮುಂದುವರಿದಿತ್ತು. ಈ ಆಂತರಿಕ ಸಂಘರ್ಷದ ನಡುವೆಯೇ ಇದೀಗ ವಾರಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಇಬ್ಬರು ನಾಯಕರ ಪರವಾಗಿ ಪಂಜಾಬ್ ಕಾಂಗ್ರೆಸ್‌ನ ನಾಯಕರು ಹಾಗೂ ಶಾಸಕರು ಪ್ರತ್ಯೇಕ ಗುಂಪುಗಳಾಗಿ ಗುರುತಿಸಿಕೊಂಡಿದ್ದರು. ಎರಡೂ ಬಣಗಳ ನಾಯಕರು ತಮ್ಮ ಬಲ ಪ್ರದರ್ಶಿಸುವ ಉದ್ದೇಶದಿಂದ ಕಾಂಗ್ರೆಸ್‌ನ ಕೇಂದ್ರ ನಾಯಕತ್ವವನ್ನು ಭೇಟಿಯಾಗಲು ಮುಂದಾಗಿದ್ದರು.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ವಿಜಯ ಇಂದರ್ ಸಿಂಗ್ಲಾ, ಜಲಂಧರ್ ಕ್ಯಾಂಟೋನ್ಮೆಂಟ್ ಶಾಸಕ ಪರ್ಗತ್ ಸಿಂಗ್ ಹಾಗೂ ಗುರುದಾಸಪುರ ಸಂಸದ ಸುಖಜಿಂದರ್ ಸಿಂಗ್ ರಾಂಧಾವಾ ಅವರ ಹೆಸರುಗಳು ಪರಿಶೀಲನೆಯಲ್ಲಿವೆ ಎಂದು ಮೂಲಗಳು ತಿಳಿಸಿವೆ.
ಆದರೆ, ಕಾಂಗ್ರೆಸ್ ನಾಯಕತ್ವವು ಸಿಂಗ್ಲಾ ಅವರ ಹೆಸರನ್ನು ಅಂತಿಮಗೊಳಿಸಿದೆ ಎಂದು ಮತ್ತೊಂದು ಮೂಲ ಹೇಳಿದೆ. ಅಕ್ಟೋಬರ್ 2ರಂದು ಈ ಕುರಿತು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾಯಿಸುವ ಪಕ್ಷದ ಯೋಜನೆಯ ಭಾಗವಾಗಿ ಈ ಬೆಳವಣಿಗೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ, ಪಂಜಾಬ್ ವಿಧಾನಸಭೆಯಲ್ಲಿ ಪ್ರತಾಪ ಸಿಂಗ್ ಬಜ್ವಾ ಅವರು ಪ್ರತಿಪಕ್ಷದ ನಾಯಕರಾಗಿ ಮುಂದುವರಿಯುವ ನಿರೀಕ್ಷೆಯಿದೆ. ಅವರ ಸ್ಥಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.


ನಿಮ್ಮ ಕಾಮೆಂಟ್ ಬರೆಯಿರಿ