ಅಕ್ಟೋಬರ್ 4ರಂದು ವಿಜಯಪುರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಯುವಗೋಷ್ಠಿ

ವಿಜಯಪುರ: ನೆಲಮೂಲ ಸಾಹಿತ್ಯದ ಚಾರಿತ್ರಿಕ ಹಿನ್ನೆಲೆ, ತಾತ್ತ್ವಿಕ ಆಯಾಮ ಮತ್ತು ಸಮಕಾಲೀನ ಪ್ರಸ್ತುತತೆಯ ಕುರಿತು ಯುವ ಮನಸ್ಸುಗಳಲ್ಲಿ ಚಿಂತನೆ ಬೆಳೆಸುವ ಉದ್ದೇಶದಿಂದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕದ ಯುವ ಪ್ರಕಾರದ ವತಿಯಿಂದ ಅಕ್ಟೋಬರ್ 4ರಂದು ವಿಜಯಪುರದಲ್ಲಿ ರಾಜ್ಯ ಯುವಗೋಷ್ಠಿಯನ್ನು ಆಯೋಜಿಸಲಾಗಿದೆ.
‘ನೆಲಮೂಲ ಸಾಹಿತ್ಯ: ಚರಿತ್ರೆ, ತಾತ್ತ್ವಿಕತೆ, ಪ್ರಸ್ತುತತೆ’ ಎಂಬ ವಿಷಯದ ಮೇಲೆ ಈ ಯುವಗೋಷ್ಠಿಯು ನಡೆಯಲಿದೆ ಎಂದು ಪರಿಷತ್ತಿನ ರಾಜ್ಯ ಮಾಧ್ಯಮ ಪ್ರಮುಖ್ ಸಚಿನ್ ಮುಂಗಿಲ ತಿಳಿಸಿದ್ದಾರೆ.
ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಇಪ್ಪತ್ತು ಯುವ ಸಾಹಿತಿಗಳು ಮೂರು ಗೋಷ್ಠಿಗಳಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ನೆಲದೊಂದಿಗೆ ಸಾಹಿತ್ಯಕ್ಕಿರುವ ಸಂಬಂಧ, ಸ್ಥಳೀಯ ಚರಿತ್ರೆ ಮತ್ತು ಸಾಂಸ್ಕೃತಿಕ ಸ್ಮೃತಿಗಳ ಸಾಹಿತ್ಯಿಕ ಅಭಿವ್ಯಕ್ತಿ, ಜನಪದ ಹಾಗೂ ಮೌಖಿಕ ಪರಂಪರೆ, ನೆಲಮೂಲ ಬದುಕಿನಲ್ಲಿರುವ ತಾತ್ತ್ವಿಕ ಒಳನೋಟಗಳು ಮತ್ತು ಇಂದಿನ ಕಾಲಘಟ್ಟದಲ್ಲಿ ಅವುಗಳ ಪ್ರಸ್ತುತತೆ ಮೊದಲಾದ ಆಯಾಮಗಳ ಕುರಿತು ಗೋಷ್ಠಿಗಳಲ್ಲಿ ವಿಚಾರ ವಿನಿಮಯ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಅಕ್ಟೋಬರ್ 4ರಂದು ಬೆಳಿಗ್ಗೆ 9:45ಕ್ಕೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕದ ಅಧ್ಯಕ್ಷರಾದ ಎಸ್. ಜಿ. ಕೋಟಿ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಮಾಯಾ ಬಾಲಚಂದ್ರ ಪ್ರಸ್ತಾವನೆ ಮಾಡಲಿದ್ದಾರೆ.

ಪ್ರಮುಖ ಸುದ್ದಿ :-   ವರದಾ-ಬೇಡ್ತಿ ನದಿ ಜೋಡಣೆ ಯೋಜನೆ ಡಿಪಿಆರ್‌ ಶೀಘ್ರ ಸಿದ್ಧಪಡಿಸಲು ಒತ್ತಾಯಿಸಿ ಸಿಎಂಗೆ ಬೊಮ್ಮಾಯಿ ಪತ್ರ

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಯುವ ಸಾಹಿತಿಗಳು ಮೂರು ಪ್ರತ್ಯೇಕ ಗೋಷ್ಠಿಗಳಲ್ಲಿ ವಿಷಯ ಪ್ರಸ್ತುತಿಯನ್ನು ಮಾಡಲಿದ್ದಾರೆ.
ಸಂಜೆ 4ಕ್ಕೆ ಸಮಾರೋಪ ನಡೆಯಲಿದ್ದು, ಹುಬ್ಬಳ್ಳಿಯ ಪ್ರಾಧ್ಯಾಪಕಿ ಹಾಗೂ ಸಾಹಿತಿಯಾದ ಪ್ರೊ. ಸುಮಾ ಸಾವಂತ ಅವರು ಸಮಾರೋಪ ನುಡಿಗಳನ್ನಾಡಲಿದ್ದಾರೆ. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ಉಪಸ್ಥಿತರಿರುವರು.
ನೆಲದ ಬದುಕಿನಿಂದ, ಜನರ ಅನುಭವದಿಂದ ಮತ್ತು ಸ್ಥಳೀಯ ಪರಂಪರೆಯಿಂದ ರೂಪುಗೊಂಡ ಸಾಹಿತ್ಯವು ಒಂದು ಪ್ರದೇಶದ ಸಾಂಸ್ಕೃತಿಕ ಸ್ಮೃತಿಯನ್ನು ಮಾತ್ರ ದಾಖಲಿಸುವುದಿಲ್ಲ; ಅದರೊಳಗಿನ ಜೀವನದರ್ಶನವನ್ನೂ ಮುಂದಿನ ತಲೆಮಾರಿಗೆ ಕೊಂಡೊಯ್ಯುತ್ತದೆ. ಈ ಹಿನ್ನೆಲೆಯಲ್ಲಿ ನೆಲಮೂಲ ಸಾಹಿತ್ಯದ ಅಧ್ಯಯನ, ಸಂರಕ್ಷಣೆ ಮತ್ತು ಸರ್ಜನಶೀಲ ಅಭಿವ್ಯಕ್ತಿಗೆ ಯುವಜನತೆಯನ್ನು ಪ್ರೇರೇಪಿಸುವುದು ಈ ಗೋಷ್ಠಿಯ ಪ್ರಮುಖ ಆಶಯವಾಗಿದೆ.
ಯುವ ಸಾಹಿತಿಗಳು ತಮ್ಮ ತಮ್ಮ ನೆಲದ ಸಾಹಿತ್ಯಿಕ ಅನುಭವಗಳನ್ನು ಹಂಚಿಕೊಳ್ಳುವುದರ ಮೂಲಕ ಕರ್ನಾಟಕದ ವಿವಿಧ ಸ್ಥಳೀಯ ಸಾಹಿತ್ಯ ಪರಂಪರೆಗಳ ನಡುವೆ ಸಂವಾದಕ್ಕೂ ಈ ಗೋಷ್ಠಿ ವೇದಿಕೆಯಾಗಲಿದೆ ಎಂದು ಸಚಿನ್ ಅವರು ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement