ವಿಡಿಯೋ | ಸಂಕಷ್ಟದ ಸಮಯದಲ್ಲಿ ಹನುಮಾನ್‌ ಚಾಲೀಸಾ ಪಠಿಸುತ್ತಿದ್ದೆ ʼ: ಪ್ರಧಾನಿ ಮೋದಿಗೆ ಹೇಳಿದ ಫ್ಲೈದುಬೈ ಪೈಲಟ್‌ ಸ್ಮಿತ್ ಮಚ್ಚಾರ್

ನವದೆಹಲಿ: ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಒಮಾನ್‌ನ ಸಹ ಪೈಲಟ್‌ನಿಂದ ಚೂರಿ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿರುವ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಜೊತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಡಿಯೊ ಕರೆ ಮೂಲಕ ಮಾತನಾಡಿದ್ದಾರೆ. ಈ ವೇಳೆ, ಜನರ ಜೀವ ಉಳಿಸಲು ಹೋರಾಡುತ್ತಿದ್ದ ಭೀಕರ ಕ್ಷಣಗಳಲ್ಲಿ ತಾನು ಹನುಮಾನ್ ಚಾಲೀಸಾ ಪಠಿಸುತ್ತಿದ್ದೆ ಎಂದು ಮಚ್ಚಾರ್ ಪ್ರಧಾನಿ ಮೋದಿಗೆ ತಿಳಿಸಿದರು.
ವಿಡಿಯೊ ಸಂಭಾಷಣೆ ವೇಳೆ ಪ್ರಧಾನಿ ಮೋದಿ ಅವರು ಮಚ್ಚಾರ್ ಅವರ ಧೈರ್ಯ, ಸಮಯಪ್ರಜ್ಞೆ ಮತ್ತು ಸಂಕಷ್ಟದ ನಡುವೆಯೂ ಕಾಪಾಡಿಕೊಂಡ ಸಮಚಿತ್ತತೆಯನ್ನು ಶ್ಲಾಘಿಸಿದರು. ಇಡೀ ದೇಶವೇ ಅವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದೆ ಎಂದು ಹೇಳಿದ ಪ್ರಧಾನಿ, ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿದರು.
ಸಂಭಾಷಣೆಯ ವೇಳೆ ಮಚ್ಚಾರ್ ಭಾವುಕರಾದರು. ಪ್ರಧಾನಿ ಮೋದಿ ಜೊತೆ ಮಾತನಾಡುವ ಅವಕಾಶ ದೊರೆತಿರುವುದು ತಮ್ಮ ಜೀವನದ ಅತ್ಯಂತ ವಿಶೇಷ ಕ್ಷಣಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ಪ್ರಧಾನಿ ಮೋದಿ ತಮ್ಮ “ಅತಿದೊಡ್ಡ ಆದರ್ಶ ವ್ಯಕ್ತಿ” ಎಂದು ಬಣ್ಣಿಸಿದ ಮಚ್ಚಾರ್, ಅವರ ಜೊತೆ ಮಾತನಾಡುವ ಅವಕಾಶ ತಮಗೆ ಸಿಗುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ ಎಂದು ತಿಳಿಸಿದರು.
ಈ ವೇಳೆ ಪ್ರಧಾನಿ ಮೋದಿ ಅವರು ಮಚ್ಚಾರ್ ಅವರ ತಾಯಿ ಗೀತಾ ಬೆನ್ ಅವರನ್ನು ಪ್ರಸ್ತಾಪಿಸಿದರು. ಭಗವದ್ಗೀತೆಯ ಮೌಲ್ಯಗಳು ಮತ್ತು ಉಪದೇಶಗಳೊಂದಿಗೆ ಅವರು ತಮ್ಮ ಮಗನನ್ನು ಬೆಳೆಸಿದ್ದು, ಅದೇ ಮೌಲ್ಯಗಳು ಇಂದು ಮಚ್ಚಾರ್ ಅವರ ವ್ಯಕ್ತಿತ್ವವನ್ನು ರೂಪಿಸಿವೆ ಎಂದು ಪ್ರಧಾನಿ ಹೇಳಿದರು.
ಭಾರತೀಯರು ಇತರರ ಜೀವ ತೆಗೆಯುವವರಲ್ಲ; ಬದಲಾಗಿ, ಇತರರ ಜೀವ ಉಳಿಸಲು ತಮ್ಮದೇ ಜೀವವನ್ನು ಪಣಕ್ಕಿಡುವವರು ಎಂಬ ಹೆಮ್ಮೆಯನ್ನು ದೇಶ ಹೊಂದಿದೆ ಎಂದು ಪ್ರಧಾನಿ ಮೋದಿ ಇದೇ ವೇಳೆ ಹೇಳಿದರು.
ಸಂಕಷ್ಟದ ಕ್ಷಣಗಳಲ್ಲಿ ಹನುಮಾನ್ ಚಾಲೀಸಾ
ತಾನು ಯಾವಾಗ ಸಂಕಷ್ಟಕ್ಕೆ ಸಿಲುಕಿದರೂ ಹನುಮಾನ್ ಚಾಲೀಸಾ ಪಠಿಸುವ ಅಭ್ಯಾಸ ಹೊಂದಿದ್ದೇನೆ ಎಂದು ಮಚ್ಚಾರ್ ಪ್ರಧಾನಿ ಮೋದಿಗೆ ತಿಳಿಸಿದರು. ಬುಧವಾರ ಫ್ಲೈದುಬೈ ವಿಮಾನದಲ್ಲಿ ನಡೆದ ಭೀಕರ ದಾಳಿಯ ಸಂದರ್ಭದಲ್ಲೂ ಜೀವನದ ಅತ್ಯಂತ ಕಠಿಣ ಕ್ಷಣಗಳನ್ನು ಎದುರಿಸುತ್ತಿದ್ದಾಗ ತಾನು ಹನುಮಾನ್ ಚಾಲೀಸಾ ಪಠಿಸುತ್ತಿದ್ದೆ ಎಂದು ಅವರು ಹೇಳಿದರು.

ವಿಮಾನ ಹಾರಾಟದ ತಮ್ಮ ಅನುಭವವೇ ಆ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ನೆರವಾಯಿತು ಎಂದು ಮಚ್ಚಾರ್ ವಿವರಿಸಿದರು

“ನಾನು 17 ವರ್ಷಗಳಿಂದ ವಿಮಾನ ಹಾರಿಸುತ್ತಿದ್ದೇನೆ. ಕಳೆದ 11 ವರ್ಷಗಳಿಂದ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಹೀಗಾಗಿ, ಕಣ್ಣು ಮುಚ್ಚಿಕೊಂಡಿದ್ದರೂ ವಿಮಾನದಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವಷ್ಟು ಅನುಭವ ನನಗಿದೆ. ನಾನು ಗಾಯಗೊಂಡಿದ್ದೆ, ಆದರೆ ಪ್ರಯಾಣಿಕರನ್ನು ಕಾಪಾಡಲೇಬೇಕಿತ್ತು. ನಾನು ಈ ಕ್ಷಣದಲ್ಲಿ ಏನು ಮಾಡದಿದ್ದರೆ ಪ್ರಯಾಣಿಕರು ಸಾಯುತ್ತಾರೆ, ಹೀಗಾಗಿ ನಾನು ಕೊನೆಯ ಪ್ರಯತ್ನ ಮಾಡಲೇಬೇಕು ಎಂಬುದು ನನಗೆ ತಿಳಿದಿತ್ತುಆ ಸಂದರ್ಭದಲ್ಲಿ ನಾನು ಕೊನೆಯ ಪ್ರಯತ್ನ ಮಾಡಲೇಬೇಕು ಎಂಬುದು ನನಗೆ ತಿಳಿದಿತ್ತು. ನನ್ನನ್ನು ನಾನೇ ಒತ್ತಾಯಿಸಿಕೊಂಡು ಕಾಕ್‌ಪಿಟ್ ಬಾಗಿಲು ತೆರೆಯಲು ಪ್ರಯತ್ನಿಸಿದೆ. ಬಾಗಿಲು ತೆರೆದ ಬಳಿಕ ಉಳಿದವರೆಲ್ಲರೂ ಒಳಗೆ ಬಂದರು. ಆ ಸಂದರ್ಭದಲ್ಲಿ ನಡೆದ ಎಲ್ಲದರಲ್ಲೂ ಪ್ರತಿಯೊಬ್ಬರೂ ಸಮಾನ ಪಾತ್ರ ವಹಿಸಿದ್ದಾರೆ” ಎಂದು ಮಚ್ಚಾರ್ ಹೇಳಿದರು.

ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಹ ಪೈಲಟ್ ದಾಳಿ ನಡೆಸಿದಾಗ ಮಚ್ಚಾರ್ ಗಂಭೀರವಾಗಿ ಗಾಯಗೊಂಡಿದ್ದರು. ಆದರೂ ಪರಿಸ್ಥಿತಿಗೆ ಧೈರ್ಯದಿಂದ ಪ್ರತಿಕ್ರಿಯಿಸಿದ ಅವರು, ಹೋರಾಟ ನಡೆಸುತ್ತಲೇ ಕಾಕ್‌ಪಿಟ್ ಬಾಗಿಲು ತೆರೆದರು. ಬಾಗಿಲು ತೆರೆದ ಬಳಿಕ ಕ್ಯಾಬಿನ್ ಸಿಬ್ಬಂದಿ ಮತ್ತು ಪ್ರಯಾಣಿಕರು ಕಾಕ್‌ಪಿಟ್ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಯಿತು.
ಭೀಕರ ಘಟನೆಯ ಬಳಿಕ ಫ್ಲೈದುಬೈ ವಿಮಾನ ಎಫ್‌ಜೆಡ್‌1073 (FZ1073) ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ವಿಮಾನದಲ್ಲಿದ್ದ ಎಲ್ಲಾ 174 ಮಂದಿ ಸುರಕ್ಷಿತವಾಗಿ ಬದುಕುಳಿದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement