ನೋಯ್ಡಾ/ದೆಹಲಿ: ದೆಹಲಿಯ ಸಮೀಪದ ನೋಯ್ಡಾದ ಸೆಕ್ಟರ್-94ರಲ್ಲಿರುವ ಸೂಪರ್ನೋವಾ (Supernova) ವಸತಿ ಸಮುಚ್ಚಯದಲ್ಲಿ ಶನಿವಾರ ಆತಂಕಕಾರಿ ಘಟನೆ ಸಂಭವಿಸಿದ್ದು, 43ನೇ ಮಹಡಿಯಿಂದ ಜಿಗಿದು ಯುವಕ ಸ್ಥದಲ್ಲೇ ಸಾವಿಗೀಡಾಗಿದ್ದಾನೆ.
ಎನ್ಸಿಆರ್ (NCR) ಪ್ರದೇಶದ ಅತಿ ಎತ್ತರದ 68 ಮಹಡಿಗಳ ವಸತಿ ಕಟ್ಟಡವಾಗಿರುವ ಸೂಪರ್ನೋವಾ ಸಮುಚ್ಚಯದ ಸ್ಪಿರಾ ಟವರ್ (Spira Tower)ನ 43ನೇ ಮಹಡಿಯಿಂದ ಯುವಕ ಜಿಗಿದಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ಘಟನೆಯ ವೇಳೆ ಮತ್ತೊಬ್ಬ ವ್ಯಕ್ತಿ ಯುವಕನನ್ನು ತಡೆಯಲು ಹಾಗೂ ರೇಲಿಂಗ್ನಿಂದ ದೂರ ಎಳೆಯಲು ಪ್ರಯತ್ನಿಸುತ್ತಿರುವುದು ವಿಡಿಯೊದಲ್ಲಿ ಕಾಣಿಸಿದೆ. ಆದರೆ ಆತ ಯಾವುದೇ ಮಾತು ಕೇಳದೆ 43ನೇ ಮಹಡಿಯಿಂದ ಕೆಳಕ್ಕೆ ಜಿಗಿದಿದ್ದಾನೆ.
ಪೊಲೀಸರ ಪ್ರಕಾರ, ಮೃತ ಯುವಕನನ್ನು ಹರಿಯಾಣದ ಮಾನೇಸರ್ ನಿವಾಸಿ ಸಂಭವ್ ಜೈನ್ ಎಂದು ಗುರುತಿಸಲಾಗಿದೆ. ಆತ ಸೂಪರ್ನೋವಾ ಕಟ್ಟಡದಲ್ಲಿದ್ದ ಏರ್ಬಿಎನ್ಬಿ (Airbnb) ವಸತಿಗೃಹದಲ್ಲಿ ತಂಗಿದ್ದ. ಶುಕ್ರವಾರ ಅಲ್ಲಿ ಚೆಕ್-ಇನ್ ಮಾಡಿದ್ದ ಆತ, ಶನಿವಾರ ಮಧ್ಯಾಹ್ನದ ವೇಳೆಗೆ ಚೆಕ್-ಔಟ್ ಆಗಬೇಕಿತ್ತು. ಇದೇ ಸಮಯದಲ್ಲಿ ಬಾಲ್ಕನಿಯಿಂದ ಜಿಗಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
43ನೇ ಮಹಡಿಯಿಂದ ನೆಲಕ್ಕೆ ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಭಾರೀ ಎತ್ತರದಿಂದ ಬಿದ್ದಿದ್ದರಿಂದ ಮೃತದೇಹವು ಛಿದ್ರ ಛಿದ್ರಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ ಈ ಕೃತ್ಯಕ್ಕೆ ಮುಂದಾಗುವ ಮೊದಲು ತನ್ನ ತಂದೆಗೆ ಹಲವು ಬಾರಿ ಕರೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆಯ ಮಾಹಿತಿ ಕುಟುಂಬ ಸದಸ್ಯರಿಗೆ ನೀಡಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ನ್ಯಾಯ ವಿಜ್ಞಾನ ಪ್ರಯೋಗಾಲಯದ (FSL) ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಸಮಯದಲ್ಲಿ ಸಮೀಪದಲ್ಲಿದ್ದವರನ್ನು ವಿಚಾರಿಸಿದಾಗ, ಸಂಭವ್ ಜೈನ್ ತೀವ್ರ ಆರ್ಥಿಕ ಒತ್ತಡಕ್ಕೆ ಒಳಗಾಗಿದ್ದ ಎಂಬ ಮಾಹಿತಿ ಲಭಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಸೂಪರ್ನೋವಾ ಟವರ್ಗಳಲ್ಲಿ ಇಂತಹ ಘಟನೆ ಇದೇ ಮೊದಲಲ್ಲ. ಕಳೆದ ವರ್ಷದ ಆಗಸ್ಟ್ನಲ್ಲಿ ದೆಹಲಿಯ 23 ವರ್ಷದ ಕಾನೂನು ವಿದ್ಯಾರ್ಥಿಯೊಬ್ಬರು ಕಟ್ಟಡದ 32ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು. ಆಗ ಅವರು ಕಟ್ಟಡದ ಒಂದು ಫ್ಲ್ಯಾಟ್ನಲ್ಲಿ ತಂಗಿದ್ದರು ಎಂದು ವರದಿಯಾಗಿತ್ತು.
ಇದಕ್ಕೂ ಮುನ್ನ 2023ರ ಜನವರಿಯಲ್ಲಿ, ದೆಹಲಿಯ 43 ವರ್ಷದ ರಿಯಲ್ ಎಸ್ಟೇಟ್ ಸಲಹೆಗಾರರೊಬ್ಬರು ನಿರ್ಮಾಣ ಹಂತದಲ್ಲಿದ್ದ ಸೂಪರ್ನೋವಾ ಸ್ಪಿರಾ ಟವರ್ನ ಮೇಲಿನ ಭಾಗದ 43ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು. ಸ್ಥಳ ಪರಿಶೀಲನೆಗಾಗಿ ಭೇಟಿ ನೀಡಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು ಎಂದು ವರದಿಗಳು ತಿಳಿಸಿವೆ.


ನಿಮ್ಮ ಕಾಮೆಂಟ್ ಬರೆಯಿರಿ