ಎಎಪಿಗೆ ಆಘಾತ : ಪಕ್ಷದ ಮುಖ್ಯ ವಕ್ತಾರೆ ಪ್ರಿಯಾಂಕಾ ಕಕ್ಕರ್ ರಾಜೀನಾಮೆ; ಕಾಂಗ್ರೆಸ್ ಸೇರ್ಪಡೆ

ನವದೆಹಲಿ: ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಶನಿವಾರ ಹಿನ್ನಡೆಯಾಗಿದ್ದು, ಪಕ್ಷದ ಮುಖ್ಯ ರಾಷ್ಟ್ರೀಯ ವಕ್ತಾರರಾದ ಪ್ರಿಯಾಂಕಾ ಕಕ್ಕರ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ದೆಹಲಿ ಕಾಂಗ್ರೆಸ್ ಘಟಕದ ಅಧ್ಯಕ್ಷ ದೇವೇಂದ್ರ ಯಾದವ್, ಹಿರಿಯ ನಾಯಕರಾದ ರಾಜೀವ್ ಶುಕ್ಲಾ, ನಸೀರ್ ಹುಸೇನ್ ಹಾಗೂ ಪವನ್ ಖೇರಾ ಅವರ ಸಮ್ಮುಖದಲ್ಲಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಪ್ರಿಯಾಂಕಾ ಕಕ್ಕರ್ ಅವರ ಜೊತೆಯಲ್ಲೇ ಉತ್ತರ ಪ್ರದೇಶದ ಮಾಜಿ ಶಾಸಕ ಶ್ಯಾಮಸುಂದರ ಶರ್ಮಾ ಹಾಗೂ ರಜತ್ ರಾಕೇಶ್ ಟಂಡನ್ ಕೂಡ ಕಾಂಗ್ರೆಸ್ ಪಕ್ಷವನ್ನು ಸೇರಿದರು.
ಎಎಪಿಯನ್ನು ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವುದಕ್ಕೆ ಕಾರಣ ನೀಡಿದ ಕಕ್ಕರ್, ಅರವಿಂದ ಕೇಜ್ರಿವಾಲ ನೇತೃತ್ವದ ಎಎಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪಕ್ಷದ ನಾಯಕರು ಒಂದು ಕಾಲದಲ್ಲಿ ತಾವು ಎಂದಿಗೂ ಕಾರು ಅಥವಾ ಬಂಗಲೆ ಸ್ವೀಕರಿಸುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ಈಗ ಖಾಸಗಿ ಪ್ರಯಾಣಗಳಿಗಾಗಿ ಹೆಲಿಕಾಪ್ಟರ್‌ಗಳನ್ನು ಬಳಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಅಲ್ಲದೆ, ಸಮರ್ಥಿಸಲು ಸಾಧ್ಯವಾಗದ ಸಂಗತಿಗಳನ್ನು ಸಮರ್ಥಿಸಿಕೊಳ್ಳುವುದು ತಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಪ್ರಮುಖ ಸುದ್ದಿ :-   ₹65.54 ಕೋಟಿ ಮಿಥಿ ನದಿ ಹಗರಣ: ನಟ ದಿನೋ ಮೊರಿಯಾ ಬಂಧನ

“ಒಂದು ಹಂತದಲ್ಲಿ ಎಎಪಿ ಅತ್ಯುತ್ತಮ ಬುದ್ಧಿವಂತಿಕೆ ಮತ್ತು ಸಾಮರ್ಥ್ಯ ಹೊಂದಿದ್ದ ವ್ಯಕ್ತಿಗಳನ್ನು ತನ್ನತ್ತ ಸೆಳೆದಿತ್ತು. ಆದರೆ ಅಂತಹವರನ್ನು ಪಕ್ಷ ಉಳಿಸಿಕೊಳ್ಳಲು ವಿಫಲವಾಗಿದೆ ಎಂಬುದನ್ನು ಕಂಡಾಗ ನಾನು ನನ್ನ ಗಡಿರೇಖೆಯನ್ನು ಎಳೆದಿದ್ದೆ. ಈಗ ಪಕ್ಷದಲ್ಲಿ ಉಳಿಯುತ್ತಿರುವವರು ಮತ್ತು ಹೊಸದಾಗಿ ಸೇರ್ಪಡೆಯಾಗುತ್ತಿರುವವರು ಯಾರು? ಬೂತ್ ಮಟ್ಟದಲ್ಲಿಯೂ ಕೆಲಸ ಮಾಡದ ಹೊಸ ಮುಖಗಳನ್ನು ರಾಜಸ್ಥಾನದಿಂದ ಕರೆತಂದು ಪಂಜಾಬ್‌ನಲ್ಲಿ ಹಿರಿಯ ಹುದ್ದೆಗಳನ್ನು ನೀಡಲಾಗುತ್ತಿದೆ. ಅವರಿಗೆ ಬಂಗಲೆ ಮತ್ತು ಕಾರುಗಳನ್ನೂ ಒದಗಿಸಲಾಗುತ್ತಿದೆ. ಸಮರ್ಥಿಸಲಾಗದ ಸಂಗತಿಗಳನ್ನು ನಾನು ಇನ್ನೆಷ್ಟು ದಿನ ಸಮರ್ಥಿಸಿಕೊಳ್ಳಲಿ?” ಎಂದು ಕಕ್ಕರ್ ಪ್ರಶ್ನಿಸಿದರು.

ರಾಹುಲ್ ಗಾಂಧಿ ಬಗ್ಗೆ ಕಕ್ಕರ್ ಮೆಚ್ಚುಗೆ
ಕಾಂಗ್ರೆಸ್ ಪಕ್ಷವನ್ನು ಶ್ಲಾಘಿಸಿದ ಪ್ರಿಯಾಂಕಾ ಕಕ್ಕರ್, ದೆಹಲಿಯನ್ನು ಸುರಕ್ಷಿತ ಮತ್ತು ಪ್ರಗತಿಪರ ನಗರವನ್ನಾಗಿ ರೂಪಿಸುವ ಸಾಮರ್ಥ್ಯ ಕಾಂಗ್ರೆಸ್‌ಗೆ ಮಾತ್ರ ಇದೆ ಎಂದು ಹೇಳಿದರು. ಇದೇ ವೇಳೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯನ್ನು ಪ್ರಶಂಸಿಸಿದ ಅವರು, ರಾಹುಲ್ ಗಾಂಧಿ ದೃಢಸಂಕಲ್ಪದ ನಾಯಕರು ಹಾಗೂ ಕ್ಯಾಮೆರಾಗಳಿಗಾಗಿ ಕಣ್ಣೀರು ಸುರಿಸುವ ವ್ಯಕ್ತಿಯಲ್ಲ ಎಂದು ಹೇಳಿದರು.
ಭಾರತದ ಚುನಾವಣಾ ಆಯೋಗದ (ಇಸಿಐ) ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳ ಕುರಿತಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿಯನ್ನು ಉಲ್ಲೇಖಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ವಿರುದ್ಧ ರಾಹುಲ್ ಗಾಂಧಿ ಆರಂಭಿಸಿರುವ ಅಭಿಯಾನವನ್ನೂ ಅವರು ಶ್ಲಾಘಿಸಿದರು. “ಭಾರತದ ಪರಿಕಲ್ಪನೆಯನ್ನು ಜೀವಂತವಾಗಿಡುವ ಪ್ರಯತ್ನದ ಭಾಗವಾಗಿ ಈ ವಿಚಾರವನ್ನು ಅವರು ಮುಂದಿಟ್ಟಿದ್ದಾರೆ” ಎಂದು ಹೇಳಿದರು.

ಪ್ರಮುಖ ಸುದ್ದಿ :-   ವಿಧಾನಸಭೆ ಚುನಾವಣೆಗೂ ಮುನ್ನ ಪಂಜಾಬ್‌, ಉತ್ತರ ಪ್ರದೇಶಕ್ಕೆ ನೂತನ ರಾಜ್ಯಾಧ್ಯಕ್ಷರನ್ನು ನೇಮಿಸಿದ ಕಾಂಗ್ರೆಸ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement