‘ಸುಂಟರಗಾಳಿ’ ಖ್ಯಾತಿಯ ಹಿರಿಯ ನಟಿ ಲಲಿತಮ್ಮ ನಿಧನ

ಬೆಂಗಳೂರು : ಕನ್ನಡ ಚಿತ್ರರಂಗ, ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಹಲವು ದಶಕಗಳ ಕಾಲದಿಂದ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಹಿರಿಯ ಪೋಷಕ ನಟಿ ಲಲಿತಮ್ಮ (65) ಭಾನುವಾರ (ಅಕ್ಟೋಬರ್ 4) ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ‘ಅಮ್ಮನ ಮಡಿಲು ಟ್ರಸ್ಟ್’ ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೆಲ ತಿಂಗಳ ಹಿಂದೆ ಲಲಿತಮ್ಮ ಅವರಿಗೆ ಪಾರ್ಶ್ವವಾಯು ಆಗಿತ್ತು. ವೃದ್ಧಾಪ್ಯ ಹಾಗೂ ಅನಾರೋಗ್ಯದ ನಡುವೆ ಅವರನ್ನು ಆರೈಕೆ ಮಾಡಲು ಯಾರೂ ಇರಲಿಲ್ಲ. ಹೀಗಾಗಿ ‘ಅಮ್ಮನ ಮಡಿಲು ಟ್ರಸ್ಟ್’ನವರು ಲಲಿತಮ್ಮ ಅವರನ್ನು ಆಶ್ರಮಕ್ಕೆ ಸೇರಿಸಿಕೊಂಡು ಚಿಕಿತ್ಸೆ ಮತ್ತು ಆರೈಕೆ ಮಾಡುತ್ತಿದ್ದರು. ಕಳೆದ ಹತ್ತು ದಿನಗಳಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಆದರೆ ಇಂದು, ಭಾನುವಾರ ಅವರು ಚಿಕಿತ್ಸೆಗೆ ಸ್ಪಂದಿಸದೆಕೊನೆಯುಸಿರು ಎಳೆದಿದ್ದಾರೆ. ಅಮ್ಮನ ಮಡಿಲು ಟ್ರಸ್ಟ್’ನ ಶಶಿಕಲಾ ಅವರು ತಿಳಿಸಿದ್ದಾರೆ.
ಸುಮಾರು ೪೦ ವರ್ಷಗಳಷ್ಟು ಕಾಲ ಕಲಾ ಸೇವೆ ಮಾಡಿದ್ದ ಲಲಿತಮ್ಮ ಅವರು, ರಂಗಭೂಮಿ ಮೂಲಕ ತಮ್ಮ ನಟನಾ ಪಯಣ ಆರಂಭಿಸಿದ್ದರು. 180ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದ ಅವರು, ಬಳಿಕ ಕಿರುತೆರೆ ಮತ್ತು ಸಿನೆಮಾಕ್ಕೂ ಕಾಲಿಟ್ಟಿದ್ದರು. ‘ಚಾಲೆಂಜಿಂಗ್  ದರ್ಶನ್ ಅಭಿನಯದ ‘ಸುಂಟರಗಾಳಿ’ ಚಿತ್ರದಲ್ಲಿ ಖಳನಾಯಕಿ ‘ಸಾರಾಯಿ ಶಾರದೆ’ ಪಾತ್ರ ಮಾಡಿದ್ದ ಅವರಿಗೆ ಇದು ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು.
‘ಜಂಗ್ಲಿ’, ‘ಲೈಫ್ ಇಷ್ಟೇನೆ’, ‘ಪುತ್ರ’, ಬಳಿಕ ‘ಜಾಕಿ’, ‘ವಜ್ರಕಾಯ’  ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ಕಿರುತೆರೆಯಲ್ಲೂ ನಟಿಸಿದ್ದ ಅವರು ‘ರಂಗೋಲಿ’, ‘ಮಾಂಗಲ್ಯ’, ‘ಮಹಾಮಾಯಿ’ ಮುಂತಾದ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement