ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ; ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು : ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದಿನ ಕೆಲ ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೇರಳದ ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಕರಾವಳಿ ಭಾಗದಲ್ಲಿ ಒಂದು ವಾರ ಅಲ್ಲಲ್ಲಿ ಮಳೆಯ ಸಾಧ್ಯತೆಯಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಕೆಲವೆಡೆ ಅಕ್ಟೋಬರ್ 5 ಮತ್ತು 6ರಂದು ಭಾರಿ ಮಳೆಯಾಗಬಹುದು ಮುನ್ಸೂಚನೆ ನೀಡಲಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಅಕ್ಟೋಬರ್ 4ರಿಂದ 9ರವರೆಗೆ ಹಲವು ಕಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡದಲ್ಲಿ ಅ.5ರಿಂದ ಹಗುರದಿಂದ ಸಾಧಾರಣ ಮಳೆಯ ಸಾಧ್ಯತೆಯಿದೆ. ಮುಂದಿನ ಕೆಲ ದಿನಗಳಲ್ಲಿ ಮಳೆಯ ಪ್ರಮಾಣ ಮತ್ತು ಸ್ಥಳೀಯ ಗಾಳಿಯ ಸ್ಥಿತಿಯಲ್ಲಿ ಬದಲಾವಣೆ ಆಗಬಹುದು. ಹೀಗಾಗಿ ಕರಾವಳಿ ಪ್ರದೇಶದಲ್ಲಿ ಬೆಳಿಗ್ಗೆ ಬಿಸಿಲು, ಮಧ್ಯಾಹ್ನ ಮೋಡ, ಬಳಿಕ ಮಳೆ ಎನ್ನುವ ರೀತಿಯ ಹವಾಮಾನ ಇರುವ ಸಾಧ್ಯತೆ ಇದೆ.

ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳು ಹಾಗೂ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಅ.4ರಂದು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಮೈಸೂರು, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಅ.5 ಮತ್ತು 6ರಂದು ಹಾಸನದ ಸಕಲೇಶಪುರ ಭಾಗ, ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗದ ಕರಾವಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ. ಮಲೆನಾಡಿನ ಉಳಿದ ಭಾಗಗಳಲ್ಲಿ ಮೋಡದ ವಾತಾವರಣದ ಜೊತೆಗೆ ಕೆಲವೆಡೆ ತುಂತುರು ಮಳೆಯ ಸಾಧ್ಯತೆಯೂ ಇದೆ. ಅರಬ್ಬಿ ಸಮುದ್ರದ ಗಾಳಿಯ ಪ್ರಭಾವ ಹೆಚ್ಚಾದರೆ ಮತ್ತಷ್ಟು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಪ್ರಮುಖ ಸುದ್ದಿ :-   ಹೊನ್ನಾವರ : ಗೇರುಸೊಪ್ಪ ಶ್ರೀ ಕ್ಷೇತ್ರ ಬಂಗಾರಮಕ್ಕಿಗೆ ಭೇಟಿ ನೀಡಿದ ಮಹಿಳಾ ಕ್ರಿಕೆಟರ್‌ ಸ್ಮೃತಿ ಮಂಧಾನ

ರಾಜ್ಯದ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಅದರಲ್ಲಿಯೂ ಬಾಗಲಕೋಟೆ, ಬೀದರ, ಕಲಬುರಗಿ ಹಾಗೂ ಗದಗ ಮೊದಲಾದ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನ ಒಣ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಹಗುರದಿಂದ ಸಾಧಾರಣ ಮಳೆಯಾದರೂ ಆಗಬಹುದು. ಬಂಗಾಳಕೊಲ್ಲಿಯ ಕಡೆಯಿಂದ ತೇವಾಂಶವುಳ್ಳ ಗಾಳಿಯ ಪ್ರಭಾವ ಹೆಚ್ಚಾದರೆ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲೂ ಮಳೆಯ ವಾತಾವರಣ ರೂಪುಗೊಳ್ಳಬಹುದು. ಆದರೆ ಸದ್ಯಕ್ಕೆ ಯಾವುದೇ ಮುನ್ಸೂಚನೆ ನೀಡಲಾಗಿಲ್ಲ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement