ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ಮಹಿಳಾ ಕ್ರಿಕೆಟ್ ತಂಡದ ನೂತನ ನಾಯಕಿಯಾಗಿ ಸ್ಮೃತಿ ಮಂಧಾನಾ ಅವರನ್ನು ನೇಮಿಸಿದೆ. ಅವರು ಟೆಸ್ಟ್, ಏಕದಿನ ಹಾಗೂ ಟಿ20 ಈ ಮೂರು ಮಾದರಿಗಳಲ್ಲಿಯೂ ಭಾರತದ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ಇದರ ಜೊತೆಗೆ ಮುಂಬರುವ ಜಿಂಬಾಬ್ವೆ ವಿರುದ್ಧದ ಸರಣಿಗಾಗಿ ಭಾರತ ಮಹಿಳಾ ತಂಡದ ಟಿ20 ಮತ್ತು ಏಕದಿನ ಪಂದ್ಯದ ತಂಡಗಳನ್ನು ಕೂಡ ಬಿಸಿಸಿಐ ಪ್ರಕಟಿಸಿದೆ. ತಂಡಗಳ ಘೋಷಣೆಯ ವೇಳೆ ಟಿ20 ಮಾದರಿಯಲ್ಲಿ ಶಫಾಲಿ ವರ್ಮಾ ಅವರನ್ನು ಉಪನಾಯಕಿಯಾಗಿ ನೇಮಿಸಲಾಗಿದ್ದು, ಏಕದಿನ ತಂಡದಲ್ಲಿ ದೀಪ್ತಿ ಶರ್ಮಾ ಅವರಿಗೆ ಉಪನಾಯಕಿಯ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿಸಲಾಗಿದೆ.ನಾಯಕತ್ವದಿಂದ ಕೆಳಗಿಳಿದಿರುವ ಹರ್ಮನ್ಪ್ರೀತ್ ಕೌರ್ ಅವರಿಗೆ ಟಿ20 ಹಾಗೂ ಒಡಿಐ ಎರಡೂ ತಂಡಗಳಲ್ಲಿ ಸ್ಥಾನ ನೀಡಲಾಗಿದೆ. ಅವರ ಪ್ರದರ್ಶನದ ಬಗ್ಗೆ ಯಾವುದೇ ಅನುಮಾನಗಳಿರಲಿಲ್ಲವಾದರೂ, ನಾಯಕತ್ವ ಬದಲಾವಣೆ ಮೂಲಕ ಭಾರತ ಮಹಿಳಾ ಕ್ರಿಕೆಟ್ ತಂಡ ಭವಿಷ್ಯದತ್ತ ಗಮನ ಹರಿಸುತ್ತಿದೆ ಎಂಬ ಸಂದೇಶ ಸ್ಪಷ್ಟವಾಗಿದೆ. ಈ ಬದಲಾವಣೆಯಲ್ಲಿ ಸ್ಮೃತಿ ಮಂಧಾನಾ ಕೇಂದ್ರಬಿಂದುವಾಗಿ ಹೊರಹೊಮ್ಮಿದ್ದಾರೆ.
ನಾಯಕತ್ವದ ಜವಾಬ್ದಾರಿ ವಹಿಸಿಕೊಂಡ ಬಳಿಕ ಸ್ಮೃತಿ ಮಂಧಾನಾ ಅವರು ಬಿಸಿಸಿಐ ಅಧಿಕಾರಿಗಳು, ಆಯ್ಕೆ ಸಮಿತಿ ಸದಸ್ಯರು, ಸಹ ಆಟಗಾರ್ತಿಯರು ಹಾಗೂ ಮಾಜಿ ನಾಯಕಿ ಹರ್ಮನ್ಪ್ರೀತ್ ಕೌರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.ಬಿಸಿಸಿಐ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಮಾತನಾಡಿರುವ ಸ್ಮೃತಿ ಮಂಧಾನಾ, “ಭಾರತ ತಂಡವನ್ನು ಮುನ್ನಡೆಸುವ ಜವಾಬ್ದಾರಿ ದೊರೆತಿರುವುದು ಅತ್ಯಂತ ವಿಶೇಷ ಗೌರವ. ಭಾರತವನ್ನು ಪ್ರತಿನಿಧಿಸುವುದು ನನಗೆ ಸದಾ ಹೆಮ್ಮೆಯ ವಿಷಯವಾಗಿದೆ. ಈಗ ತಂಡದ ನಾಯಕತ್ವ ವಹಿಸುವ ಅವಕಾಶ ದೊರೆತಿರುವುದು ನನ್ನ ಪಾಲಿಗೆ ಅತ್ಯಂತ ಮಹತ್ವದ ಕ್ಷಣ. ನನ್ನ ಮೇಲೆ ವಿಶ್ವಾಸವಿಟ್ಟು ಈ ಜವಾಬ್ದಾರಿ ನೀಡಿದ ಬಿಸಿಸಿಐ, ಆಯ್ಕೆದಾರರು, ನನ್ನ ಸಹ ಆಟಗಾರ್ತಿಯರು ಹಾಗೂ ನನ್ನ ಕ್ರಿಕೆಟ್ ಪಯಣದಲ್ಲಿ ಬೆಂಬಲ ನೀಡಿದ ಎಲ್ಲರಿಗೂ ನಾನು ಕೃತಜ್ಞಳಾಗಿದ್ದೇನೆ” ಎಂದು ಹೇಳಿದ್ದಾರೆ.ಇದೇ ವೇಳೆ ಮಾಜಿ ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ಕೊಡುಗೆಯನ್ನು ಸ್ಮರಿಸಿದ ಅವರು, “ಹರ್ಮನ್ಪ್ರೀತ್ ಹಲವು ವರ್ಷಗಳಿಂದ ಅಪಾರ ಬದ್ಧತೆಯೊಂದಿಗೆ ತಂಡವನ್ನು ಮುನ್ನಡೆಸಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್ನ ಬೆಳವಣಿಗೆಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಈ ಹುದ್ದೆಯ ಜವಾಬ್ದಾರಿ ಎಷ್ಟೊಂದು ದೊಡ್ಡದು ಎಂಬುದು ನನಗೆ ತಿಳಿದಿದೆ. ತಂಡದೊಂದಿಗೆ ಕೆಲಸ ಮಾಡುತ್ತಾ, ಹೊಸದನ್ನು ಕಲಿಯುತ್ತಾ, ಭಾರತೀಯ ಕ್ರಿಕೆಟ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ನನ್ನ ಶ್ರೇಷ್ಠ ಪ್ರಯತ್ನ ನೀಡುತ್ತೇನೆ” ಎಂದು ಹೇಳಿದ್ದಾರೆ.
ಜಿಂಬಾಬ್ವೆ ಸರಣಿಗೆ ಭಾರತ ಮಹಿಳಾ ಟಿ20 ತಂಡ: ಸ್ಮೃತಿ ಮಂಧಾನಾ (ನಾಯಕಿ), ಶಫಾಲಿ ವರ್ಮಾ (ಉಪನಾಯಕಿ), ನಿಕಿ ಪ್ರಸಾದ್, ಹರ್ಮನ್ಪ್ರೀತ್ ಕೌರ್, ಅನುಷ್ಕಾ ಶರ್ಮಾ, ರಿಚಾ ಘೋಷ್ (ವಿಕೆಟ್ಕೀಪರ್), ಜಿ. ಕಮಲಿನಿ (ವಿಕೆಟ್ಕೀಪರ್), ದೀಪ್ತಿ ಶರ್ಮಾ, ಪ್ರೇಮಾ ರಾವತ್, ಶ್ರೀ ಚರಣಿ, ನಂದಿನಿ ಶರ್ಮಾ, ಕ್ರಾಂತಿ ಗೌಡ್, ಅರುಂಧತಿ ರೆಡ್ಡಿ, ಜಿಂತಿಮನಿ ಕಲಿತಾ ಹಾಗೂ ಮಿನ್ನು ಮಣಿ.ಜಿಂಬಾಬ್ವೆ ಸರಣಿಗೆ ಭಾರತ ಮಹಿಳಾ ಏಕದಿನ ತಂಡ : ಸ್ಮೃತಿ ಮಂಧಾನಾ (ನಾಯಕಿ), ಶಫಾಲಿ ವರ್ಮಾ, ಪ್ರತಿಕಾ ರಾವಲ್, ಹರ್ಮನ್ಪ್ರೀತ್ ಕೌರ್, ಹರ್ಲೀನ್ ಡಿಯೋಲ್, ತೇಜಲ್ ಹಸಬ್ನಿಸ್, ದೀಪ್ತಿ ಶರ್ಮಾ (ಉಪನಾಯಕಿ), ರಿಚಾ ಘೋಷ್ (ವಿಕೆಟ್ಕೀಪರ್), ಯಸ್ತಿಕಾ ಭಾಟಿಯಾ (ವಿಕೆಟ್ಕೀಪರ್), ವೈಷ್ಣವಿ ಶರ್ಮಾ, ನಂದಿನಿ ಶರ್ಮಾ, ಶ್ರೀ ಚರಣಿ, ಕ್ರಾಂತಿ ಗೌಡ್, ಸಯಾಲಿ ಸತ್ಘರೆ ಹಾಗೂ ರೇಣುಕಾ ಠಾಕೂರ್.


ನಿಮ್ಮ ಕಾಮೆಂಟ್ ಬರೆಯಿರಿ