ನವದೆಹಲಿ: ಕಸ್ಟಡಿಯಲ್ಲಿದ್ದಾಗ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ ದೀಪ್ಕೆ ಅವರಿಗೆ ಅವರ ಅಜ್ಜಿ ಸಾವಿನ ಸುದ್ದಿಯನ್ನು ತಿಳಿಸಿ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರದ ಸ್ವಗ್ರಾಮಕ್ಕೆ ತೆರಳಲು ನೆರವು ನೀಡುವುದಾಗಿ ತಿಳಿಸಿದ್ದೆವು ಎಂದು ದೆಹಲಿ ಪೊಲೀಸರು ಭಾನುವಾರ ಹೇಳಿದ್ದಾರೆ. ಈ ಕುರಿತು ಪೊಲೀಸರು ಅಧಿಕಾರಿಗಳು ದೀಪ್ಕೆ ಅವರಿಗೆ ಮಾಹಿತಿ ನೀಡುತ್ತಿರುವ ವಿಡಿಯೊ ಬಿಡುಗಡೆ ಮಾಡಿದ್ದಾರೆ.
ಅಕ್ಟೋಬರ್ 10 ರಂದು ವಶದಲ್ಲಿದ್ದಾಗ ಅವರ ಅಜ್ಜಿ ಮೃತಪಟ್ಟ ವಿಷಯವನ್ನು ಸಿಜೆಪಿ ಸಂಸ್ಥಾಪಕ ಅಭಿಜೀತ ಡಿಪ್ಕೆ ಅವರಿಗೆ ತಿಳಿಸಲಾಗಿಲ್ಲ ಎಂದು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಮಾಡಿದ್ದ ಆರೋಪವನ್ನು ತಳ್ಳಿಹಾಕಿರುವ ದೆಹಲಿ ಪೊಲೀಸರು ಈಗ ತಿಳಿಸಿದ್ದಕ್ಕೆ ಪುರಾವೆಯಾಗಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ದೀಪ್ಕೆ ಅವರಿಗೆ ಅಜ್ಜಿ ಸಾವಿನ ಸುದ್ದಿ ಹಾಗೂ ಅಂತ್ಯಕ್ರಿಯೆಯ ಸಮಯವನ್ನು ತಿಳಿಸಲಾಗಿತ್ತು. ಅಲ್ಲದೆ, ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಸ್ವಗ್ರಾಮಕ್ಕೆ ತೆರಳಲು ಅಗತ್ಯ ನೆರವು ನೀಡುವುದಾಗಿ ತಿಳಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ವಿಮಾನದ ವ್ಯವಸ್ಥೆ, ದೂರವಾಣಿ ಕರೆ ಹಾಗೂ ಇತರ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಡುವುದಾಗಿಯೂ ಅಧಿಕಾರಿಗಳು ತಿಳಿಸಿದ್ದರು ಎಂದು ಉಪ ಪೊಲೀಸ್ ಆಯುಕ್ತೆ (ಡಿಸಿಪಿ) ನೇಹಾ ಯಾದವ್ ತಿಳಿಸಿದ್ದಾರೆ.
ಅಜ್ಜಿ ಸಾವಿನ ಮಾಹಿತಿ ದೊರೆತ ತಕ್ಷಣವೇ ಅಧಿಕಾರಿಗಳು ದೀಪ್ಕೆ ಅವರಿಗೆ ಖುದ್ದಿ ಭೇಟಿಯಾಗಿ ವಿಷಯ ತಿಳಿಸಿದ್ದರು. ತಂದೆ-ತಾಯಿ ಜೊತೆ ಮಾತನಾಡಲು ಇಚ್ಛಿಸುತ್ತಾರೆಯೇ ಎಂದೂ ಅವರನ್ನು ಪದೇಪದೇ ಕೇಳಿದ್ದರು. ಆದರೆ, ಪೊಲೀಸರು ನೀಡಿದ ನೆರವನ್ನು ದೀಪ್ಕೆ ನಿರಾಕರಿಸಿದ್ದರು ಎಂದು ಯಾದವ್ ಹೇಳಿದ್ದಾರೆ.
ಅಜ್ಜಿ ಮೃತಪಟ್ಟಿರುವುದನ್ನು ತಿಳಿಸಿ, ಅಂತ್ಯಕ್ರಿಯೆಗೆ ತೆರಳುವ ಅವಕಾಶ ನೀಡಿದಾಗ ದೀಪ್ಕೆ, “ನಾನು ಇಲ್ಲೇ ಇರುತ್ತೇನೆ” ಎಂದು ಹೇಳಿದ್ದಾಗಿ ಪೊಲೀಸರು ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ತಿಳಿಸಲಾಗಿದೆ.
ತಾಯಿಯ ಆರೋಪಕ್ಕೆ ಪೊಲೀಸರ ತಿರುಗೇಟು
ಅಭಿಜೀತ್ ದೀಪ್ಕೆ ಅವರ ಅಜ್ಜಿ ಸಾವಿನ ವಿಷಯವನ್ನು ಮಗನಿಗೆ ತಿಳಿಸಿರುವ ಬಗ್ಗೆ ಪೊಲೀಸರು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಅವರ ತಾಯಿ ಅನಿತಾ ದೀಪ್ಕೆ ಆರೋಪಿಸಿದ್ದರು. ತಮ್ಮ ಮಗನನ್ನು ಸಂಪರ್ಕಿಸಲು ಕುಟುಂಬಕ್ಕೆ ಸಾಧ್ಯವಾಗಿರಲಿಲ್ಲ. ಆತ ಮರಳಬಹುದು ಎಂಬ ನಿರೀಕ್ಷೆಯಲ್ಲಿ ಅಂತ್ಯಕ್ರಿಯೆಯನ್ನೂ ವಿಳಂಬ ಮಾಡಲಾಗಿತ್ತು ಎಂದು ಅವರು ಹೇಳಿದ್ದರು.
ಈ ಆರೋಪಗಳ ಬೆನ್ನಲ್ಲೇ ದೆಹಲಿ ಪೊಲೀಸರು ವಿಡಿಯೊ ಬಿಡುಗಡೆ ಮಾಡಿದ್ದಾರೆ. ದೀಪ್ಕೆ ಅವರಿಗೆ ಅಜ್ಜಿ ಸಾವಿನ ಮಾಹಿತಿ ಹಾಗೂ ಅಂತ್ಯಕ್ರಿಯೆಯ ನಿಗದಿತ ಸಮಯವನ್ನು ತಿಳಿಸಲಾಗಿತ್ತು. ಮಾನವೀಯ ನೆಲೆಯಲ್ಲಿ ಮನೆಗೆ ತೆರಳಲು ಅಗತ್ಯ ನೆರವು ನೀಡುವುದಾಗಿಯೂ ಹೇಳಲಾಗಿತ್ತು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಅಭಿಜೀತ್ ದೀಪ್ಕೆ ಅವರ ತಂದೆಯ ತಾಯಿ ಸಾವಿತ್ರಿಬಾಯಿ ಶಂಕರರಾವ್ ದೀಪ್ಕೆ (85) ಅವರು ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸಂತುಕ್ ಪಿಂಪ್ರಿ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಶನಿವಾರ ಬೆಳಗ್ಗೆ ಸುಮಾರು 11:30ಕ್ಕೆ ಮೃತಪಟ್ಟಿದ್ದರು. ವಯೋಸಹಜ ಆರೋಗ್ಯ ಸಮಸ್ಯೆಗಳು ಹಾಗೂ ದೀರ್ಘಕಾಲದ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು ಎಂದು ವರದಿಯಾಗಿದೆ. ಅವರ ಅಂತ್ಯಕ್ರಿಯೆಯನ್ನು ಭಾನುವಾರ ಬೆಳಗ್ಗೆ 10 ಗಂಟೆಗೆ ನಿಗದಿಪಡಿಸಲಾಗಿತ್ತು.
ಜಂತರ್ ಮಂತರ್ ಪ್ರತಿಭಟನೆಗೆ ತೆರಳುತ್ತಿದ್ದಾಗ ವಶಕ್ಕೆ
ವಿಶೇಷ ಸಮಗ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿತ್ತು. ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮುಂಬೈನಿಂದ ದೆಹಲಿಗೆ ಆಗಮಿಸಿದ್ದ ಅಭಿಜೀತ್ ದೀಪ್ಕೆ, ಪಕ್ಷದ ಸಹ ಸಂಚಾಲಕ ಸೌರವ ದಾಸ್ ಹಾಗೂ ಪಕ್ಷದ ನಾಯಕ ಆಶುತೋಷ ರಾಂಕಾ ಅವರನ್ನು ಅಕ್ಟೋಬರ್ 10ರಂದು ಪೊಲೀಸರು ವಶಕ್ಕೆ ಪಡೆದಿದ್ದರು.
ದೆಹಲಿಯ ಜನಪಥ್ನಲ್ಲಿ ಉದ್ದೇಶಿತ ಧರಣಿ ನಡೆಸಲು ಅನುಮತಿ ನೀಡಿರಲಿಲ್ಲ ಎಂದು ಡಿಸಿಪಿ ನೇಹಾ ಯಾದವ್ ತಿಳಿಸಿದ್ದಾರೆ. ಪ್ರತಿಭಟನೆಯ ಆಯೋಜಕರು ನಿಗದಿತ ಪ್ರಕ್ರಿಯೆಗಳನ್ನು ಪಾಲಿಸದಿರುವುದು, ಹಿಂದಿನ ವರ್ತನೆ ಹಾಗೂ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅನುಮತಿ ನಿರಾಕರಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಇದಲ್ಲದೆ, ದೆಹಲಿಯ ಹಲವು ಪ್ರದೇಶಗಳಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)ಯ ಸೆಕ್ಷನ್ 133ರ ಅಡಿಯಲ್ಲಿ ನಿರ್ಬಂಧಗಳು ಜಾರಿಯಲ್ಲಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ ಈ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಹಾಗೂ ಸ್ಥಳೀಯ ಅಧಿಕಾರಿಗಳ ನಿರ್ದೇಶನಗಳನ್ನು ಪಾಲಿಸಿಲ್ಲ ಎಂದು ಯಾದವ್ ಹೇಳಿದ್ದಾರೆ. ಹಿಂದಿನ ಕಾರ್ಯಕ್ರಮವೊಂದರಲ್ಲಿ ಕಲ್ಲು ತೂರಾಟ, ಬೆಂಕಿ ಹಚ್ಚುವಿಕೆ ಹಾಗೂ ಹಿಂಸಾಚಾರ ನಡೆದಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿತ್ತು ಎಂದೂ ಅವರು ಹೇಳಿದ್ದಾರೆ.
“ನಿಗದಿತ ಪ್ರಕ್ರಿಯೆಗಳನ್ನು ಪಾಲಿಸದಿರುವುದು, ಕಾನೂನು ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಹಿಂದಿನ ನಡವಳಿಕೆ ಹಾಗೂ ಪ್ರಸ್ತುತ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜನಪಥದಲ್ಲಿ ಉದ್ದೇಶಿತ ಧರಣಿ ನಡೆಸಲು ಅನುಮತಿ ನಿರಾಕರಿಸಲಾಗಿದೆ” ಎಂದು ಡಿಸಿಪಿ ನೇಹಾ ಯಾದವ್ ತಿಳಿಸಿದ್ದಾರೆ.
ಬಳಿಕ ಅಭಿಜೀತ್ ದೀಪ್ಕೆ, ಸೌರವ್ ದಾಸ್ ಹಾಗೂ ಆಶುತೋಷ್ ರಾಂಕಾ ಅವರನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ನಂತರ ಷರತ್ತಿನ ಮೇಲೆ ಬಿಡುಗಡೆ ಮಾಡಲಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ