ಸಿಜೆಪಿ ಪ್ರತಿಭಟನೆ : ಬ್ಯಾರಿಕೇಡ್‌ ತೆರವುಗೊಳಿಸಿ, ಇಂಟರ್ನೆಟ್‌ ಸ್ಥಗಿತ ಬೇಡ, ಮೆಟ್ರೋ ಸಂಚಾರ ಎಂದಿನಂತಿರಲಿ ; ಸುಪ್ರೀಂ ಕೋರ್ಟ್‌

ನವದೆಹಲಿ : ಕಾಕ್ರೋಚ್‌ ಜನತಾ ಪಾರ್ಟಿ (CJP) ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಅಳವಡಿಸಲಾಗಿರುವ ಎಲ್ಲ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುವಂತೆ ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್‌ ಭಾನುವಾರ ನಿರ್ದೇಶನ ನೀಡಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಅನಿವಾರ್ಯವಾಗಿರುವ ಸ್ಥಳಗಳನ್ನು ಹೊರತುಪಡಿಸಿ ಉಳಿದೆಲ್ಲ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಬೇಕು. ದೆಹಲಿಯಲ್ಲಿ ಮೆಟ್ರೋ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಹಾಗೂ ಯಾವುದೇ ಕಾರಣಕ್ಕೂ ಇಂಟರ್ನೆಟ್‌ ಸೇವೆಗಳಿಗೆ ಅಡ್ಡಿಪಡಿಸಬಾರದು ಎಂದು ನ್ಯಾಯಾಲಯ ಸೂಚಿಸಿದೆ.
ಭಾನುವಾರವೂ ವಿಶೇಷ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ನಿರ್ದೇಶನಗಳನ್ನು ನೀಡಿದೆ. ಜನರ ಸಂಚಾರವನ್ನು ಸಹಜ ಸ್ಥಿತಿಗೆ ತರಬೇಕು. ತಮ್ಮ ವೃತ್ತಿಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸಲು ಸಾರ್ವಜನಿಕರಿಗೆ ಯಾವುದೇ ರೀತಿಯ ಅಡ್ಡಿಯಾಗಬಾರದು ಎಂದು ನ್ಯಾಯಪೀಠ ಹೇಳಿದೆ. ಅಲ್ಲದೆ, ಶಾಂತಿಯುತವಾಗಿ ಒಂದೆಡೆ ಸೇರುವವರನ್ನು ಕಾನೂನುಬಾಹಿರವಾಗಿ ಬಂಧಿಸಬಾರದು ಎಂದೂ ಸೂಚಿಸಿದೆ.
ಆದರೆ, ಕಾನೂನು ಸುವ್ಯವಸ್ಥೆ ಕಾಪಾಡುವ ಅಗತ್ಯವಿದ್ದಲ್ಲಿ ಸೂಕ್ತ ನಿರ್ಬಂಧಗಳನ್ನು ವಿಧಿಸಲು ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ಈ ಹಿಂದೆ ನೀಡಿದ್ದ ಆದೇಶದ ಹೊರತಾಗಿಯೂ ದೆಹಲಿಯಲ್ಲಿ ನಿರ್ಬಂಧಗಳು ಮುಂದುವರಿದಿರುವುದನ್ನು ಪರಿಗಣಿಸಿದ ನ್ಯಾಯಾಲಯ, ದೆಹಲಿ ಪೊಲೀಸ್‌, ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ದೆಹಲಿ ಮೆಟ್ರೋ ರೈಲು ನಿಗಮಕ್ಕೆ (DMRC) ನೋಟಿಸ್‌ ಜಾರಿಗೊಳಿಸಿದೆ. ಈ ಕುರಿತು ಮಂಗಳವಾರದೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.
ವಿಚಾರಣೆ ವೇಳೆ ದೆಹಲಿ ಪೊಲೀಸರ ಪರ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಮೆಟ್ರೋ ಮತ್ತು ರೈಲು ಸೇವೆಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ ಹಾಗೂ ದೆಹಲಿಯಲ್ಲಿ ಇಂಟರ್ನೆಟ್‌ ಸೇವೆಗಳನ್ನು ಮರುಸ್ಥಾಪಿಸಲಾಗಿದೆ ಎಂದು ಭರವಸೆ ನೀಡಿದ್ದಾರೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ.
ಪ್ರತಿಭಟನೆಯ ಹಕ್ಕು ಮತ್ತು ಪೊಲೀಸ್‌ ನಿರ್ಬಂಧಗಳ ನಡುವಿನ ಕಾನೂನು ವ್ಯಾಪ್ತಿಯನ್ನು ಪ್ರಸ್ತಾಪಿಸಿದ ನ್ಯಾಯಪೀಠ, “ಪೊಲೀಸರು ವಿಧಿಸಿರುವ ನಿರ್ಬಂಧಗಳು ಸಂವಿಧಾನದ 19(2)ನೇ ವಿಧಿಯ ವ್ಯಾಪ್ತಿಗೆ ಎಷ್ಟರಮಟ್ಟಿಗೆ ಒಳಪಡುತ್ತವೆ ಎಂಬುದೇ ಇಲ್ಲಿನ ಪ್ರಶ್ನೆ” ಎಂದು ಹೇಳಿದೆ.
“ಪ್ರತಿಭಟನೆ ನಡೆಸುವ ಹಕ್ಕು ನಿಮಗಿದೆ ಎಂಬುದರಲ್ಲಿ ಯಾವುದೇ ವಿವಾದವಿಲ್ಲ. ಆದರೆ, ಪ್ರತಿಭಟನೆ ನಡೆಸುವ ವಿಧಾನವು ಪೊಲೀಸ್‌ ಕಾಯ್ದೆಯ ನಿಯಮಗಳಿಗೆ ಅನುಗುಣವಾಗಿರಬೇಕು. ಪ್ರತಿಭಟನೆಯ ಹಕ್ಕು ಪೊಲೀಸ್‌ ಕಾಯ್ದೆಗಿಂತ ಮೇಲು ಎಂದು ನೀವು ಪ್ರತಿಪಾದಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಮುಖ ಸುದ್ದಿ :-   3000ಕ್ಕೂ ಹೆಚ್ಚು ಮಂದಿ ಬಿಡುಗಡೆ; ಸಿಜೆಪಿ ನಾಯಕ ಅಭಿಜೀರ ದೀಪ್ಕೆ ಸೇರಿ ಪ್ರಮುಖರು ಇನ್ನೂ ಪೊಲೀಸ್ ವಶದಲ್ಲಿ

ಕಾಕ್ರೋಚ್‌ ಜನತಾ ಪಾರ್ಟಿಯ (CJP) ಸಂಸ್ಥಾಪಕ ಅಭಿಜೀತ್‌ ದೀಪ್ಕೆ, ಪಕ್ಷದ ಸಹ ಸಂಚಾಲಕ ಸೌರವ್‌ ದಾಸ್‌ ಹಾಗೂ ರಾಷ್ಟ್ರೀಯ ವಕ್ತಾರ ಆಶುತೋಷ್‌ ರಾಂಕಾ ಅವರನ್ನು ಬಂಧನಕ್ಕೊಳಪಡಿಸಿದ ಸುಮಾರು 24 ಗಂಟೆಗಳ ಬಳಿಕ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ (SEM) ಬಿಡುಗಡೆ ಮಾಡಿದ್ದರು. ಈ ಬೆಳವಣಿಗೆಯಾದ ಕೆಲವೇ ಗಂಟೆಗಳ ಬಳಿಕ ಸುಪ್ರೀಂ ಕೋರ್ಟ್‌ನ ಈ ನಿರ್ದೇಶನಗಳು ಹೊರಬಿದ್ದಿವೆ.
ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಹಿನ್ನೆಲೆಯಲ್ಲಿ ಈ ಮೂವರನ್ನು ವಶಕ್ಕೆ ಪಡೆಯಲಾಗಿತ್ತು. ಅವರ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಮುಂದಿನ ಒಂದು ವರ್ಷದ ಅವಧಿಯಲ್ಲಿ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟುಮಾಡುವ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಬಾರದು ಎಂಬ ಷರತ್ತಿನ ಮೇರೆಗೆ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ವಿಚಾರಣೆ ಮುಕ್ತಾಯಗೊಳ್ಳುವ ಮೊದಲು ನ್ಯಾಯಮೂರ್ತಿ ಮೋಹನಾ ಅವರು, “ಇಲ್ಲಿ ಹಾಜರಿರುವ ನಿಮ್ಮೆಲ್ಲರಿಗೂ ಸಾರ್ವಜನಿಕರ ಹಿತಾಸಕ್ತಿಯ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ, ನೀವೆಲ್ಲರೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ ಮತ್ತು ಇತರರನ್ನು ಪ್ರಚೋದಿಸುವುದಿಲ್ಲ ಎಂಬ ಭರವಸೆ ನೀಡಬೇಕು” ಎಂದು ಹೇಳಿದರು.
ಪ್ರಕರಣದ ಮುಂದಿನ ವಿಚಾರಣೆ ಮಂಗಳವಾರ ನಡೆಯಲಿದೆ.

ಪ್ರಮುಖ ಸುದ್ದಿ :-   ʼಒಂದು ವರ್ಷ ಶಾಂತಿ ಕದಡುವಂತಿಲ್ಲ’ : ಸಿಜೆಪಿಯ ಅಭಿಜೀತ ದೀಪ್ಕೆ, ಸೌರವ ದಾಸ್, ಅಶುತೋಷ ರಂಕಾಗೆ ಷರತ್ತುಬದ್ಧ ಬಿಡುಗಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement