ವಿಡಿಯೋ| ‘ರಾಹುಲ್‌ ಗಾಂಧಿ ತಳ್ಳಿದ್ದರಿಂದ ಕೆಳಗೆ ಬಿದ್ದೆ ; ಕ್ಯಾಮೆರಾಮನ್‌ಗೂ ನೂಕಿದರು’: ಆಸ್ಪತ್ರೆಗೆ ದಾಖಲಾದ ಗರ್ಭಿಣಿ ಪತ್ರಕರ್ತೆ ಆರೋಪ

ನವದೆಹಲಿ: ಸುಪ್ರೀಂ ಕೋರ್ಟ್‌ ಆವರಣದಲ್ಲಿ ಮಂಗಳವಾರ ಇಂಡಿಯಾ ಮೈತ್ರಿಕೂಟದ ಪ್ರತಿಭಟನಾ ಮೆರವಣಿಗೆಯ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಮ್ಮನ್ನು ತಳ್ಳಿದ್ದಾರೆ ಎಂದು ಆರೋಪಿಸಿರುವ ಗರ್ಭಿಣಿ ಪತ್ರಕರ್ತೆ ರೀಚಾ ಪರಾಶರ, ಆಸ್ಪತ್ರೆಯಲ್ಲಿದ್ದುಕೊಂಡೇ ಘಟನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ. ರಾಹುಲ್‌ ಗಾಂಧಿ ಅವರ ಹೇಳಿಕೆ ಪಡೆಯಲು ತಾನು ಉತ್ಸುಕಳಾಗಿದ್ದೆ. ಆದರೆ, ಅಲ್ಲಿ ನಡೆದ ಘಟನೆಯಿಂದ ಆಘಾತಕ್ಕೊಳಗಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.
“ನಾನೊಬ್ಬ ಪತ್ರಕರ್ತೆ. ಪ್ರತಿಭಟನೆಯ ವರದಿ ಮಾಡುವುದು ನನ್ನ ಕರ್ತವ್ಯ. ನಾನು ಪ್ರತಿಭಟನೆಯ ಸ್ಥಳದಲ್ಲಿ ವರದಿ ಮಾಡುತ್ತಿರಲಿಲ್ಲವಾದರೂ, ಮತ್ತೊಬ್ಬ ವರದಿಗಾರರು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಾನು ಸುಪ್ರೀಂ ಕೋರ್ಟ್‌ ಆವರಣದೊಳಗಿದ್ದೆ. ಅಲ್ಲಿ ಎರಡು ಪ್ರವೇಶ ದ್ವಾರಗಳಿದ್ದವು. ರಾಹುಲ್‌ ಗಾಂಧಿ ಒಂದು ದ್ವಾರದ ಮೂಲಕ ಹೊರಬರಲಿದ್ದರು. ಮತ್ತೊಂದು ದ್ವಾರದಲ್ಲಿ ಅಷ್ಟೊಂದು ಜನಸಂದಣಿ ಇರಲಿಲ್ಲ. ಅವರು ಹೊರಬರಲಿದ್ದ ದ್ವಾರದ ಬಳಿ ನಾನು ನಿಂತಿದ್ದೆ ಎಂದು ಅವರಿ ಹೇಳಿದ್ದಾರೆ.

ಮೈಕ್‌ ಐಡಿ ಹಿಡಿದುಕೊಂಡು ರಾಹುಲ್‌ ಗಾಂಧಿ ಅವರ ಬೈಟ್‌ ಪಡೆಯಲು ಉತ್ಸುಕಳಾಗಿದ್ದೆ. ಅವರು ಹೊರಬಂದಾಗ ಎಲ್ಲರೂ ಆ ದ್ವಾರದ ಬಳಿ ಸೇರಿದ್ದರು” ಎಂದು ರೀಚಾ ಪರಾಶರ್‌ ವಿವರಿಸಿದ್ದಾರೆ.
ತಾನು ರಾಹುಲ್‌ ಗಾಂಧಿ ಅವರಿಗೆ ಯಾವುದೇ ಪ್ರಶ್ನೆ ಕೇಳುತ್ತಿರಲಿಲ್ಲ, ಬದಲಿಗೆ ಅವರ ಹೇಳಿಕೆಯನ್ನು ಮಾತ್ರ ದಾಖಲಿಸಿಕೊಳ್ಳುತ್ತಿದ್ದೆ ಎಂದು ಹೇಳಿರುವ ಅವರು, ಈ ವೇಳೆ ರಾಹುಲ್‌ ಗಾಂಧಿ ತಮ್ಮ ಭುಜವನ್ನು ಹಿಡಿದು ಎಳೆದರು. ಬಳಿಕ ಅವರ ಭದ್ರತಾ ಸಿಬ್ಬಂದಿ ತಳ್ಳಿದ್ದರಿಂದ ತಾನು ಮೆಟ್ಟಿಲುಗಳ ಮೇಲೆ ಬಿದ್ದೆ ಎಂದು ಆರೋಪಿಸಿದ್ದಾರೆ.
“ಇದೆಲ್ಲವೂ ಕೆಲವೇ ಸೆಕೆಂಡುಗಳಲ್ಲಿ ನಡೆಯಿತು. ರಾಹುಲ್‌ ಗಾಂಧಿ ಮುಂದೆ ಸಾಗುತ್ತಿದ್ದಾಗ ನನ್ನ ಭುಜವನ್ನು ಹಿಡಿದು ಎಳೆದರು. ಅವರ ಕೈಯಲ್ಲಿದ್ದ ಬಲವನ್ನು ನಾನು ಅನುಭವಿಸಿದೆ. ಅವರ ಭದ್ರತಾ ಸಿಬ್ಬಂದಿ ನನ್ನನ್ನು ತಳ್ಳಿದರು. ಘಟನೆಯ ವಿಡಿಯೊದಲ್ಲಿ ರಾಹುಲ್‌ ಗಾಂಧಿ ನನ್ನ ಕ್ಯಾಮೆರಾಮನ್‌ಗೆ ಮೊಣಕೈಯಿಂದ ಹೊಡೆಯುತ್ತಿರುವುದು ಕಾಣಿಸುತ್ತದೆ. ಆತ ಕೂಡ ಕೆಳಗೆ ಬಿದ್ದಿದ್ದಾನೆ. ನನ್ನನ್ನು ತಳ್ಳಬೇಡಿ ಎಂದು ನಾನು ಕೂಗುತ್ತಾ ಮನವಿ ಮಾಡಿದೆ. ಆದರೂ ನನ್ನನ್ನು ತಳ್ಳಲಾಯಿತು. ನಾನು ಮೆಟ್ಟಿಲುಗಳ ಮೇಲೆ ಬಿದ್ದೆ. ನನ್ನ ಮೊಬೈಲ್‌ ಫೋನ್‌ನ ಪರದೆಯೂ ಒಡೆದುಹೋಯಿತು” ಎಂದು ರೀಚಾ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಆರು ರಾಜ್ಯಗಳಿಗೆ ರಾಜ್ಯಪಾಲರ ನೇಮಕ ; ಸುಧಾ ಯಾದವ್‌ ಕರ್ನಾಟಕದ ನೂತನ ರಾಜ್ಯಪಾಲರು

ತಾನು ಬಿದ್ದ ಬಳಿಕ ರಾಹುಲ್‌ ಗಾಂಧಿ ತಮ್ಮನ್ನು ತಳ್ಳಿದ್ದಾರೆ ಎಂದು ಹೇಳಿದರೂ, ಅವರ ಬೆಂಬಲಿಗರು ‘ರಾಹುಲ್‌ ಗಾಂಧಿ ಜಿಂದಾಬಾದ್‌’ ಎಂದು ಘೋಷಣೆ ಕೂಗುತ್ತಾ ತನ್ನ ಧ್ವನಿ ಕೇಳಿಸದಂತೆ ಮಾಡಿದರು ಎಂದು ಅವರು ಆರೋಪಿಸಿದ್ದಾರೆ.
ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುವಂತೆ ತಮ್ಮ ಹಿರಿಯ ಪತ್ರಕರ್ತರು ಸೂಚಿಸಿದ್ದರು ಎಂದು ರೀಚಾ ಹೇಳಿದ್ದಾರೆ. ಆದರೆ, ತಾನು ಗರ್ಭಿಣಿ ಎಂಬ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ. ತಮ್ಮ ಸಂಸ್ಥೆಗೂ ಈ ವಿಚಾರವನ್ನು ಬಹಿರಂಗಪಡಿಸಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಆಸ್ಪತ್ರೆಗೆ ದಾಖಲು
ಘಟನೆಯ ಬಳಿಕ ಸ್ವಲ್ಪ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೀಚಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಅವರನ್ನು ದೆಹಲಿಯ ಗಂಗಾರಾಮ್‌ ಆಸ್ಪತ್ರೆಗೆ ದಾಖಲಿಸಲಾಯಿತು.
“ನನ್ನ ಹೊಟ್ಟೆಯಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡಿದ್ದರಿಂದ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿಂದ ಗಂಗಾರಾಮ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಾನು ಗರ್ಭಿಣಿ ಎಂಬುದನ್ನು ಯಾರಿಗೂ ತಿಳಿಸಿರಲಿಲ್ಲ. ನನ್ನ ಸಂಸ್ಥೆಗೂ ಈ ಬಗ್ಗೆ ಹೇಳಿರಲಿಲ್ಲ. ಎನ್‌ಟಿ/ಎನ್‌ಬಿ ಸ್ಕ್ಯಾನ್‌ (NT/NB Scan) ಮಾಡಿಸಿದ ಬಳಿಕ ಈ ವಿಷಯ ತಿಳಿಸಲು ನಿರ್ಧರಿಸಿದ್ದೆ ಎಂದು ಅವರು ಹೇಳಿದ್ದಾರೆ.

ನಾನು ಕೆಳಗೆ ಬಿದ್ದಿದ್ದರಿಂದ ವೈದ್ಯರು ಎಕ್ಸ್‌-ರೇ ಮಾಡಿಸಿಕೊಳ್ಳುವಂತೆ ಸೂಚಿಸಿದರು. ಆಗ ನಾನು ನರ್ಸ್‌ ಒಬ್ಬರಿಗೆ ಗರ್ಭಿಣಿಯಾಗಿರುವ ವಿಷಯ ತಿಳಿಸಿದೆ. ಅವರು ವೈದ್ಯರಿಗೆ ಮಾಹಿತಿ ನೀಡಿದರು. ಬಳಿಕ ನನ್ನ ಎಕ್ಸ್‌-ರೇ ಮಾಡಿಸಲಿಲ್ಲ. ಬದಲಿಗೆ ಅಲ್ಟ್ರಾಸೌಂಡ್‌ ಪರೀಕ್ಷೆಗೆ ಕಳುಹಿಸಲಾಯಿತು. ಪರೀಕ್ಷೆ ನಡೆಸಿದ ಬಳಿಕ ನನಗೆ ವಾಂತಿ ಆರಂಭವಾಯಿತು. ಹೀಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವಂತೆ ಸೂಚಿಸಲಾಯಿತು” ಎಂದು ಅವರು (ANI) ತಿಳಿಸಿದ್ದಾರೆ.
ಘಟನೆಯ ಕುರಿತು ರಾಹುಲ್‌ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, “ಶೇಮ್‌ ಆನ್‌ ಯು, ರಾಹುಲ್‌ ಗಾಂಧಿ” ಎಂದು ಹೇಳಿದ್ದಾರೆ.
“ಅವರು ‘ಸ್ಮ್ಯಾಶ್‌ ಪೇಟ್ರಿಯಾರ್ಕಿ’ (Smash Patriarchy — ಪಿತೃಪ್ರಧಾನ ವ್ಯವಸ್ಥೆಯನ್ನು ಧ್ವಂಸಗೊಳಿಸಿ) ಎಂಬ ಅಭಿಯಾನವನ್ನು ಟ್ರೆಂಡ್‌ ಮಾಡಿದ್ದರು. ಹೀಗೆಯೇ ಪಿತೃಪ್ರಧಾನ ವ್ಯವಸ್ಥೆಯನ್ನು ಧ್ವಂಸಗೊಳಿಸುತ್ತಾರೆಯೇ? ನಾನು ಗರ್ಭಿಣಿಯಾಗಿದ್ದರೆ ಜನಸಂದಣಿಯೊಳಗೆ ಏಕೆ ಹೋದೆ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ನಾನೂ ಒಬ್ಬ ಪತ್ರಕರ್ತೆ. ವರದಿ ಮಾಡುವುದು ನನ್ನ ಕೆಲಸ. ಈಗ ನನ್ನ ಧ್ವನಿ ಇನ್ನಷ್ಟು ಬಲವಾಗಲಿದೆ. ಇಡೀ ದೇಶವೇ ನನ್ನ ಬೆಂಬಲಕ್ಕೆ ನಿಂತಿದೆ” ಎಂದು ಅವರು ಹೇಳಿದ್ದಾರೆ.
ರೀಚಾ ಪರಾಶರ್‌ ಆಸ್ಪತ್ರೆಯಿಂದಲೇ ತಮ್ಮ ಅನುಭವವನ್ನು ವಿವರಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಅವರ ಹೇಳಿಕೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ಪ್ರಮುಖ ಸುದ್ದಿ :-   ಎಸ್‌ಐಆರ್‌ : ರಾಹುಲ್‌ ಗಾಂಧಿ-ಇಂಡಿಯಾ ಮೈತ್ರಿಕೂಟ ನಾಯಕರ ಅರ್ಜಿಯಲ್ಲಿ 14 ಲೋಪ ಪತ್ತೆಹಚ್ಚಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement