ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ವಿಡಿಯೊ ಪ್ರಸಾರ ಮಾಡದಂತೆ ನ್ಯಾಯಾಲಯದ ಪ್ರತಿಬಂಧಕಾದೇಶ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಎರಡು ಆಕ್ಷೇಪಾರ್ಹ ವಿಡಿಯೊ ಪ್ರಸಾರ ಮಾಡದಂತೆ 42 ಮಾಧ್ಯಮ ಸಂಸ್ಥೆಗಳು, ಡಿಜಿಟಲ್ ವೇದಿಕೆಗಳು ಹಾಗೂ ಇತರ ಪ್ರತಿವಾದಿಗಳಿಗೆ ನಿರ್ಬಂಧ ವಿಧಿಸಿ ಬೆಂಗಳೂರಿನ 19ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಮಂಗಳವಾರ ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ಹೊರಡಿಸಿದೆ.
ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಬಿ ಪುಷ್ಪಾಂಜಲಿ ಅವರು ಈ ಆದೇಶ ಹೊರಡಿಸಿದ್ದಾರೆ.
ಸೆಪ್ಟೆಂಬರ್ 27 ಮತ್ತು ಅಕ್ಟೋಬರ್ 2ರಂದು ಪ್ರಕಟಿಸಲಾದ ಎರಡು ವಿಡಿಯೊಗಳನ್ನು ಪ್ರಸಾರ ಮಾಡುವುದು, ಮರುಪ್ರಸಾರ ಮಾಡುವುದು ಅಥವಾ ಇತರ ಯಾವುದೇ ರೀತಿಯಲ್ಲಿ ಪ್ರಸಾರ ಮಾಡುವುದನ್ನು ನ್ಯಾಯಾಲಯ ನಿರ್ಬಂಧಿಸಿದೆ.

ಅಲ್ಲದೆ, ಆ ವಿಡಿಯೊಗಳ ತುಣುಕುಗಳು, ಆಯ್ದ ಭಾಗಗಳು, ಸ್ಕ್ರೀನ್‌ಶಾಟ್‌ಗಳು, ಲಿಪ್ಯಂತರಗಳು ಹಾಗೂ ಸಂಪಾದಿತ ಆವೃತ್ತಿಗಳನ್ನು ಪ್ರಕಟಿಸದಂತೆಯೂ ಪ್ರತಿವಾದಿ ಮಾಧ್ಯಮಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ.
ಸಂಬಂಧಿತ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ವಿಷಯವನ್ನು ತೆಗೆದುಹಾಕುವುದು ಮತ್ತು ಅದಕ್ಕೆ ಪ್ರವೇಶವನ್ನು ನಿರ್ಬಂಧಿಸುವಂತೆ ನಿರ್ದೇಶನ ನೀಡಬೇಕು ಎಂದು ಸಿದ್ದರಾಮಯ್ಯ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ. ಅಲ್ಲದೆ, ವಿವಾದಿತ ವಿಡಿಯೊಗಳು ಮತ್ತು ಸಂಬಂಧಿತ ವಿಷಯವನ್ನು ಭವಿಷ್ಯದಲ್ಲಿ ಪ್ರಕಟಿಸದಂತೆ ಇದಕ್ಕೆ ಶಾಶ್ವತ ತಡೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈಗ ನ್ಯಾಯಾಲವು ಆ ವಿಡಿಯೊಗಳನ್ನು ಪ್ರಸಾರ ಮಾಡದಂತೆ ತಾತ್ಕಾಲಿಕ ಪ್ರತಿಬಂಧಕಾದೇಶದ ಮೂಲಕ ಮಾಧ್ಯಮಗಳನ್ನು ನಿರ್ಬಂಧಿಸಿದ್ದು, ವಿಚಾರಣೆಯನ್ನು ನವೆಂಬರ್ 13ಕ್ಕೆ ಮುಂದೂಡಿದೆ.

ಪ್ರಮುಖ ಸುದ್ದಿ :-   ಕೆಪಿಎಸ್‌ಸಿ ನೇಮಕಾತಿ ಹಗರಣ: ಎಸ್‌ಐಟಿ ತಂಡದಲ್ಲಿ ಬದಲಾವಣೆಗೆ ಸುಪ್ರೀಂ ಕೋರ್ಟ್‌ ಅನುಮತಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement