ಖ್ಯಾತ ಯಕ್ಷಗಾನ ಕಲಾವಿದ ಶ್ರೀಪಾದ ಭಟ್‌ ಥಂಡಿಮನೆ ನಿಧನ

ಶಿರಸಿ: ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಶ್ರೀಪಾದ ಭಟ್‌ ಥಂಡಿಮನೆ (62 ವರ್ಷ) ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಥಂಡಿಮನೆಯವರಾದ ಅವರು ಯಕ್ಷಗಾನದಲ್ಲಿ ನಾಯಕ ಹಾಗೂ ಪ್ರತಿ ನಾಯಕನ ಪಾತ್ರ ಎರಡರಲ್ಲೂ ಹೆಸರುವಾಸಿಯಾಗಿದ್ದರು. ವಿಶೇಷವಾಗಿ ರಾವಣ, ಭೀಮ, ಘಟೋದ್ಗಜ, ಕಂಸ, ಕೌರವ, ಆಂಜನೇಯ, ಸಾಲ್ವ, ದಕ್ಷ, ಈಶ್ವರ, ವೀರಮಣಿ, ದುಷ್ಟಬುದ್ಧಿ, ಮಾಗಧ ಇವೇ ಮೊದಲಾದ ಪಾತ್ರಗಳ ಮೂಲಕ ಖ್ಯಾತಿಗಳಿಸಿದ್ದರು. ಅತ್ಯುತ್ತಮ ವೇಷಗಾರಿಕೆ, ನಿಲುವು, ಅಭಿನಯ, ಅದ್ಭುತ ಪಾತ್ರಚಿತ್ರಣ ಹಾಗೂ ನೃತ್ಯಗಳಿಂದ ತಮ್ಮದೇ ಆದ ಛಾಪು ಮೂಡಿಸಿದ್ದ ಅವರಿಗೆ ಕಂಚಿನ ಕಂಠವೂ ವರದಾನವಾಗಿತ್ತು. ಪೆರ್ಡೂರು, ಸಾಲಿಗ್ರಾಮ ಸೇರಿದಂತೆ ಯಕ್ಷಗಾನದ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು.
ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ನಿಧನಕ್ಕೆ ಯಕ್ಷಗಾನ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement