ಕಾರವಾರ: ಸ್ವದೇಶಿ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಬಹುಉದ್ದೇಶದ ನೌಕೆ ಐಎನ್ಎಸ್ ಸಮರ್ಥಕ್ (INS Samarthak) ಅಕ್ಟೋಬರ್ 16ರಂದು ಕಾರವಾರದ ನೌಕಾನೆಲೆಯಲ್ಲಿ ನಡೆಯುವ ಸಮಾರಂಭದಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿದೆ.
ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಪಾಲ್ಗೊಳ್ಳಲಿದ್ದಾರೆ. ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು, ನೌಕಾಪಡೆಯ ಅಧಿಕಾರಿಗಳು ಹಾಗೂ ಇತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ (Make in India) ಯೋಜನೆಯಡಿ ತಮಿಳುನಾಡಿನ ಕಟ್ಟುಪಳ್ಳಿಯಲ್ಲಿರುವ ನೌಕೆ ನಿರ್ಮಾಣ ಘಟಕದಲ್ಲಿ ಲಾರ್ಸನ್ ಆ್ಯಂಡ್ ಟೂಬ್ರೊ (L&T) ಕಂಪನಿ ಐಎನ್ಎಸ್ ಸಮರ್ಥಕ್ ಅನ್ನು ನಿರ್ಮಿಸಿದೆ. ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿರುವ ನಾಲ್ಕು ಬಹುಉದ್ದೇಶದ ನೌಕೆಗಳಲ್ಲಿ ಇದು ಮೊದಲನೆಯದು.
ಸ್ವದೇಶಿ ನಿರ್ಮಿತ ಈ ನೌಕೆಯ ಸೇರ್ಪಡೆಯಿಂದ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಭಾರತದ ಪ್ರಯತ್ನಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಲಿದೆ. ಹಲವು ಬಗೆಯ ಕಾರ್ಯಾಚರಣೆಗಳಿಗೆ ಬಳಸಬಹುದಾದ ಈ ನೌಕೆ, ಭವಿಷ್ಯದಲ್ಲಿ ಭಾರತೀಯ ನೌಕಾಪಡೆಯ ಕಾರ್ಯಾಚರಣೆಗಳಿಗೆ ನೆರವಾಗಲಿದೆ.
ಕಣ್ಗಾವಲಿನಿಂದ ರಕ್ಷಣಾ ಕಾರ್ಯಾಚರಣೆ ವರೆಗೆ
ಸಮುದ್ರದಲ್ಲಿ ನಿಗಾ ವಹಿಸುವುದು ಮತ್ತು ಗಸ್ತು ತಿರುಗುವುದು ಐಎನ್ಎಸ್ ಸಮರ್ಥಕ್ನ ಪ್ರಮುಖ ಕಾರ್ಯಗಳಾಗಿವೆ. ಕಡಿಮೆ ಪ್ರಮಾಣದ ಸಂಘರ್ಷ ಅಥವಾ ಸವಾಲು ಎದುರಾಗುವ ಕಡಲ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವುದು, ಸಮುದ್ರದಲ್ಲಿ ಟಾರ್ಗೆಟ್ಗಳನ್ನು ಸ್ಥಾಪಿಸುವುದು ಹಾಗೂ ವಿವಿಧ ಪರೀಕ್ಷೆಗಳನ್ನು ನಡೆಸುವುದಕ್ಕೂ ಈ ನೌಕೆಯನ್ನು ಬಳಸಬಹುದು.
ಮಾನವರಹಿತ ಮತ್ತು ಸ್ವಯಂಚಾಲಿತ ತಂತ್ರಜ್ಞಾನ ಬಳಸಿ ಕಾರ್ಯನಿರ್ವಹಿಸುವ ವ್ಯವಸ್ಥೆಗಳಿಗೆ ಇದು ತಾಯಿ ನೌಕೆಯಾಗಿ ನೆರವಾಗಲಿದೆ. ಅಂದರೆ, ಇಂತಹ ವ್ಯವಸ್ಥೆಗಳನ್ನು ಸಾಗಿಸುವುದು ಮತ್ತು ಅವುಗಳ ಕಾರ್ಯಾಚರಣೆಗೆ ಅಗತ್ಯ ಬೆಂಬಲ ನೀಡುವುದು ಈ ನೌಕೆಯ ಮತ್ತೊಂದು ವಿಶೇಷತೆಯಾಗಿದೆ.
ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಪರಿಹಾರ ಕಾರ್ಯಗಳಿಗೆ ಮತ್ತು ಸಂಕಷ್ಟದಲ್ಲಿರುವವರಿಗೆ ನೆರವು ನೀಡುವ ಕಾರ್ಯಗಳಲ್ಲಿಯೂ (HADR) ಐಎನ್ಎಸ್ ಸಮರ್ಥಕ್ ಬಳಸಲ್ಪಡಲಿದೆ. ಅಗತ್ಯವಿದ್ದಾಗ ಹಾಸ್ಪಿಟಲ್ ನೌಕೆಯಾಗಿಯೂ ಕಾರ್ಯನಿರ್ವಹಿಸಬಲ್ಲದು. ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದವರನ್ನು ರಕ್ಷಿಸುವುದು ಹಾಗೂ ನೀರಿನಲ್ಲಿ ಮುಳುಗಿರುವ ವಸ್ತುಗಳನ್ನು ಮೇಲಕ್ಕೆತ್ತುವ ಕಾರ್ಯಾಚರಣೆಗಳಿಗೂ ನೆರವಾಗಲಿದೆ.
ಸ್ವದೇಶಿ ತಂತ್ರಜ್ಞಾನಕ್ಕೆ ಮತ್ತಷ್ಟು ಬಲ
ಈ ನೌಕೆಯಲ್ಲಿ ಭಾರತೀಯ ತಂತ್ರಜ್ಞಾನ ಬಳಸಿ ನಿರ್ಮಿಸಿದ ಸಂವೇದಕಗಳು, ಶಸ್ತ್ರಾಸ್ತ್ರಗಳು ಮತ್ತು ಎಲೆಕ್ಟ್ರಾನಿಕ್ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಸಮುದ್ರದಲ್ಲಿ ಸವಾಲಿನ ಪರಿಸ್ಥಿತಿಗಳಿದ್ದರೂ ಕಾರ್ಯನಿರ್ವಹಿಸುವಂತೆ ಇವುಗಳನ್ನು ರೂಪಿಸಲಾಗಿದೆ. ನೌಕೆಯ ಸೇರ್ಪಡೆಯಿಂದ ಭಾರತೀಯ ನೌಕಾಪಡೆಯ ಕಾರ್ಯಾಚರಣಾ ಸಾಮರ್ಥ್ಯ ಹೆಚ್ಚುವುದರ ಜತೆಗೆ, ರಕ್ಷಣಾ ಉಪಕರಣಗಳ ತಯಾರಿಕೆಯಲ್ಲಿ ಸ್ವದೇಶಿ ತಂತ್ರಜ್ಞಾನದ ಬಳಕೆಯೂ ವಿಸ್ತರಿಸಲಿದೆ.
ನೌಕೆಯ ಲಾಂಛನದಲ್ಲಿ ಸಮುದ್ರದ ಅಲೆಗಳ ಮಧ್ಯದಿಂದ ಮೇಲೇಳುತ್ತಿರುವ ಭಾರತೀಯ ಆನೆಯ ಚಿತ್ರವಿದೆ. ಇದು ಶಕ್ತಿ, ಬುದ್ಧಿವಂತಿಕೆ ಮತ್ತು ಚುರುಕುತನವನ್ನು ಸಂಕೇತಿಸುತ್ತದೆ. “ವಿಜಯವೇ ನಮ್ಮ ಏಕೈಕ ಗುರಿ” ಎಂಬುದು ನೌಕೆಯ ಧ್ಯೇಯವಾಕ್ಯವಾಗಿದೆ.
ನಾಲ್ಕು ನೌಕೆಗಳ ಸರಣಿಯಲ್ಲಿ ಮೊದಲನೆಯದಾದ ಐಎನ್ಎಸ್ ಸಮರ್ಥಕ್ ಸೇರ್ಪಡೆಯಿಂದ ಭಾರತೀಯ ನೌಕಾಪಡೆಗೆ ಮತ್ತೊಂದು ಸ್ವದೇಶಿ ಬಹುಉದ್ದೇಶದ ನೌಕೆ ದೊರೆತಂತಾಗಲಿದೆ. ದೇಶದ ಕಡಲ ಭದ್ರತೆಯ ಅಗತ್ಯಗಳನ್ನು ಪೂರೈಸುವಲ್ಲಿ ಭಾರತೀಯ ನೌಕೆ ನಿರ್ಮಾಣ ಕ್ಷೇತ್ರದ ಪಾತ್ರ ಹೆಚ್ಚುತ್ತಿರುವುದಕ್ಕೂ ಇದು ಸಾಕ್ಷಿಯಾಗಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ