ಬೆಂಗಳೂರು: ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ (ಕೆಪಿಎಂಸಿ) ಅಧ್ಯಕ್ಷೆ ಸೌಮ್ಯಾ ರೆಡ್ಡಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಸುಮಾರು ಎರಡು ವರ್ಷಗಳ ಕಾಲಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ (ಕೆಪಿಎಂಸಿ) ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿರುವ ಅವರು, ತಾವು ಆರಂಭದಲ್ಲಿ ಒಪ್ಪಿಕೊಂಡಿದ್ದ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಇದುವರೆಗೆ ಒಬ್ಬ ಮಹಿಳೆಗೂ ಸಚಿವ ಸ್ಥಾನ ನೀಡದಿರುವುದನ್ನು ತಮ್ಮ ಪತ್ರದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿ ಈ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದ್ದಾರೆ.
2026ರ ಆಗಸ್ಟ್ 20ರಂದು ಅಖಿಲ ಭಾರತ ಮಹಿಳಾ ಕಾಂಗ್ರೆಸ್ (ಎಐಎಂಸಿ) ಅಧ್ಯಕ್ಷೆ ಅಲ್ಕಾ ಲಾಂಬಾ ಅವರಿಗೆ ಉದ್ದೇಶಿಸಿ ಬರೆದಿರುವ ರಾಜೀನಾಮೆ ಪತ್ರದಲ್ಲಿ ಸೌಮ್ಯಾ ರೆಡ್ಡಿ ಅವರು ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಂತೆ ಮನವಿ ಮಾಡಿರುವ ಅವರು, ರಾಜ್ಯ ಸರ್ಕಾರದಲ್ಲಿ ಮಹಿಳೆಯರಿಗೆ ಸಚಿವ ಸ್ಥಾನ ಕಲ್ಪಿಸದಿರುವ ಕುರಿತು ಕಾಂಗ್ರೆಸ್ ಹೈಕಮಾಂಡ್ ಗಮನ ಸೆಳೆಯುವಂತೆಯೂ ಒತ್ತಾಯಿಸಿದ್ದಾರೆ.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಲು ಅವಕಾಶ ದೊರೆತಿದ್ದನ್ನು ಗೌರವ ಮತ್ತು ಸೌಭಾಗ್ಯ ಎಂದು ಬಣ್ಣಿಸಿರುವ ಸೌಮ್ಯಾ ರೆಡ್ಡಿ, ಈ ಅವಧಿಯಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಮಹಿಳೆಯರೊಂದಿಗೆ ನಿಕಟ ಸಂಪರ್ಕ ಸಾಧಿಸಿದ್ದಾಗಿ ಹೇಳಿದ್ದಾರೆ. ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ವಿಚಾರಗಳು ಸೇರಿದಂತೆ ಮಹಿಳೆಯರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಅರಿತುಕೊಳ್ಳುವುದರ ಜತೆಗೆ, ಅವರನ್ನು ಕಾಂಗ್ರೆಸ್ ಪಕ್ಷದ ಸಂಘಟನೆಯೊಳಗೆ ಕರೆತರುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ಮಹಿಳೆಯರ ಬದುಕಿನ ಮೇಲೆ ಬೀರಿರುವ ಪರಿಣಾಮವನ್ನು ಖುದ್ದಾಗಿ ಗಮನಿಸುವ ಅವಕಾಶವೂ ತಮಗೆ ದೊರೆತಿದೆ ಎಂದು ಅವರು ಹೇಳಿದ್ದಾರೆ. ಈ ಯೋಜನೆಗಳು ನೆಲಮಟ್ಟದಲ್ಲಿ ಮಹಿಳಾ ಕ್ರಾಂತಿಯನ್ನೇ ಸೃಷ್ಟಿಸಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
“ನಾನು ಈ ಹುದ್ದೆಯನ್ನು ವಹಿಸಿಕೊಂಡಾಗ ಕೇವಲ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸುವ ಉದ್ದೇಶ ಹೊಂದಿದ್ದೆ. ಈ ಜವಾಬ್ದಾರಿಯನ್ನು ನಿರ್ವಹಿಸುವ ಅವಕಾಶ ದೊರೆತಿದ್ದಕ್ಕೆ ಸಂತೋಷ ಮತ್ತು ಗೌರವವಿದೆ. ವಿಶೇಷವಾಗಿ, ನಮ್ಮ ಪಕ್ಷ ನೀಡಿದ ಐದು ಗ್ಯಾರಂಟಿ ಯೋಜನೆಗಳು ನೆಲಮಟ್ಟದಲ್ಲಿ ಮಹಿಳಾ ಕ್ರಾಂತಿಯನ್ನು ಸೃಷ್ಟಿಸಿರುವುದನ್ನು ನೇರವಾಗಿ ನೋಡುವ ಅವಕಾಶ ನನಗೆ ದೊರೆತಿದೆ” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಚಿವ ಸಂಪುಟದಲ್ಲಿ ಮಹಿಳೆಯರು ಇಲ್ಲ; ಅಸಮಾಧಾನ
ರಾಜ್ಯದಲ್ಲಿ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪಿಸಿರುವ ಸೌಮ್ಯಾ ರೆಡ್ಡಿ, ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಇದುವರೆಗೆ ಒಬ್ಬ ಮಹಿಳೆಗೂ ಸಚಿವ ಸ್ಥಾನ ನೀಡಿಲ್ಲ ಎಂಬುದನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಬೇಕೆಂದು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯನ್ನು ಕೋರಿದ್ದಾರೆ.
“ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಇದುವರೆಗೆ ಒಬ್ಬ ಮಹಿಳಾ ಸಚಿವರೂ ಇಲ್ಲ ಎಂಬ ವಿಚಾರವನ್ನು ಪಕ್ಷದ ನಾಯಕತ್ವದ ಗಮನಕ್ಕೆ ತರುವಂತೆ ಮತ್ತೊಮ್ಮೆ ಮನವಿ ಮಾಡುತ್ತೇನೆ” ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.
ಮಹಿಳೆಯರ ಸಬಲೀಕರಣ ಮತ್ತು ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಕಾಂಗ್ರೆಸ್ ಪಕ್ಷ ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲದಿರುವ ವಿಚಾರವನ್ನು ಸೌಮ್ಯಾ ರೆಡ್ಡಿ ಪ್ರಮುಖವಾಗಿ ಎತ್ತಿದ್ದಾರೆ.
2028, 2029ರ ಚುನಾವಣೆಗಳಲ್ಲಿ ಕೆಲಸ ಮಾಡುವ ಭರವಸೆ
ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಬೆಂಬಲ ನೀಡಿದ ಕಾಂಗ್ರೆಸ್ ಹೈಕಮಾಂಡ್, ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ), ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರು, ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು, ಶಾಸಕರು, ಸಚಿವರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಸೌಮ್ಯಾ ರೆಡ್ಡಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರೂ, ಕಾಂಗ್ರೆಸ್ ಪಕ್ಷದ ಸಿದ್ಧಾಂತ, ಆಶಯ ಮತ್ತು ಕಾರ್ಯಕ್ರಮಗಳಿಗೆ ತಮ್ಮ ಬೆಂಬಲ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 2028ರ ಕರ್ನಾಟಕ ವಿಧಾನಸಭೆ ಚುನಾವಣೆ ಹಾಗೂ 2029ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ನಿಷ್ಠಾವಂತ ಕಾರ್ಯಕರ್ತೆಯಾಗಿ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.
ಅಲ್ಲದೆ, ತಮ್ಮ ಸ್ಥಾನಕ್ಕೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವವರೆಗೆ ತಾವೇ ಅಧ್ಯಕ್ಷೆಯಾಗಿ ಮುಂದುವರಿಯುವುದಾಗಿಯೂ ಸೌಮ್ಯಾ ರೆಡ್ಡಿ ತಿಳಿಸಿದ್ದಾರೆ. “ನೀವು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವವರೆಗೆ ನಾನು ಅಧ್ಯಕ್ಷೆಯಾಗಿ ಮುಂದುವರಿಯುತ್ತೇನೆ” ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ