ನೋಯ್ಡಾ : ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಗ್ರಾಮವೊಂದರಲ್ಲಿ ಶನಿವಾರ ದುರಂತ ಘಟನೆಯೊಂದು ಸಂಭವಿಸಿದ್ದು ಒಂದೇ ಕುಟುಂಬದ ಐವರು ಮನೆಯಲ್ಲೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತರಲ್ಲಿ 3ರಿಂದ 11 ವರ್ಷದೊಳಗಿನ ಮೂವರು ಮಕ್ಕಳು ಸೇರಿದ್ದಾರೆ. ಹಿಂದಿನ ರಾತ್ರಿ ಕುಟುಂಬದ ಸದಸ್ಯರು ನೂಡಲ್ಸ್ ಸೇವಿಸಿದ್ದರೆನ್ನಲಾಗಿದ್ದು, ಫುಡ್ ಪಾಯಿಸನಿಂಗ್ನಿಂದ ಸಾವು ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಸಾವಿಗೆ ನಿಖರವಾದ ಕಾರಣ ಇನ್ನೂ ದೃಢಪಟ್ಟಿಲ್ಲ.
ಮೃತರನ್ನು ಮಹೇಶ (37), ಅವರ ಪತ್ನಿ ಲಲಿತಾ (35) ಹಾಗೂ ಮಕ್ಕಳಾದ ಲಡ್ಡು (11), ಮಿಷ್ಠಿ (7) ಮತ್ತು ಸಾಕ್ಷತ್ (3) ಎಂದು ಗುರುತಿಸಲಾಗಿದೆ.
ಶನಿವಾರ ಬೆಳಗ್ಗೆ ಕುಟುಂಬದ ಐವರು ಮೃತಪಟ್ಟಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಿದೆ. ತಕ್ಷಣ ಸ್ಥಳೀಯ ಪೊಲೀಸರು, ಹಿರಿಯ ಪೊಲೀಸ್ ಅಧಿಕಾರಿಗಳು, ಆಂಬುಲೆನ್ಸ್ ಹಾಗೂ ಆಹಾರ ಸುರಕ್ಷತಾ ಇಲಾಖೆಯ ತಂಡ ಸ್ಥಳಕ್ಕೆ ಧಾವಿಸಿದೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರ ತಂಡ ಮತ್ತು ಕ್ಷೇತ್ರ ಪರಿಶೀಲನಾ ಘಟಕವೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ.
ನೂಡಲ್ಸ್ ಸೇವನೆ
ಮಹೇಶ ಅವರ ತಾಯಿ ಹಾಗೂ ನೆರೆಹೊರೆಯ ನಿವಾಸಿಗಳು ನೀಡಿದ ಮಾಹಿತಿಯ ಪ್ರಕಾರ, ಕುಟುಂಬದ ಸದಸ್ಯರು ಹಿಂದಿನ ರಾತ್ರಿ ನೂಡಲ್ಸ್ ಸೇವಿಸಿದ್ದರು. ಈ ಹಿನ್ನೆಲೆಯಲ್ಲಿ ಆಹಾರ ವಿಷಬಾಧೆಯಿಂದ ಸಾವು ಸಂಭವಿಸಿರಬಹುದು ಎಂಬ ಪ್ರಾಥಮಿಕ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ನೂಡಲ್ಸ್ ಸೇವನೆಗೂ ಐವರ ಸಾವಿಗೂ ಸಂಬಂಧವಿದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಇತರ ವೈಜ್ಞಾನಿಕ ಪರೀಕ್ಷೆಗಳ ಫಲಿತಾಂಶಗಳು ಬಂದ ಬಳಿಕವಷ್ಟೇ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ತನಿಖೆಯ ವೇಳೆ ಸಂಗ್ರಹಿಸಲಾದ ಸಾಕ್ಷ್ಯಗಳು, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ವೈಜ್ಞಾನಿಕ ಪರೀಕ್ಷೆಗಳ ಫಲಿತಾಂಶಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ


ನಿಮ್ಮ ಕಾಮೆಂಟ್ ಬರೆಯಿರಿ