ಜಮ್ಮು: ಕೃತಕ ಬುದ್ಧಿಮತ್ತೆ (ಎಐ) ಸಾಧನಗಳಾದ ಚಾಟ್ಜಿಪಿಟಿ ಮತ್ತು ಕ್ಲಾಡ್ ಬಳಸಿ ದೇಶದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳ ಕುರಿತು ವಿಶ್ಲೇಷಣಾತ್ಮಕ ವರದಿಗಳನ್ನು ಸಿದ್ಧಪಡಿಸಿ, ಚೀನಾದ ಗುಪ್ತಚರ ಏಜೆಂಟರಿಗೆ ಒದಗಿಸಿದ ಆರೋಪದ ಮೇಲೆ ಸೇನಾಧಿಕಾರಿಯೊಬ್ಬರ ಪತ್ನಿ ವಿರುದ್ಧ ಜಮ್ಮು-ಕಾಶ್ಮೀರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಅಧಿಕಾರಿಗಳು ಭಾನುವಾರ ಮಾಹಿತಿ ನೀಡಿದ್ದಾರೆ.
ತೆಲಂಗಾಣ ಮೂಲದ ಆರೋಪಿತ ಮಹಿಳೆ ಉನ್ನತ ಶೈಕ್ಷಣಿಕ ಅರ್ಹತೆ ಹೊಂದಿದ್ದು, 2023ರಲ್ಲಿ ವಿಶ್ವಸಂಸ್ಥೆಯಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದ ಇಂಟರ್ನ್ಶಿಪ್ ಮಾಡಿದ್ದರು ಎಂದು ಹೇಳಲಾಗಿದೆ. ಪ್ರಸ್ತುತ ಸ್ವತಂತ್ರ ಸಂಶೋಧಕಿಯಾಗಿ (ಫ್ರೀಲಾನ್ಸ್ ರಿಸರ್ಚರ್) ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಕರಣ ದಾಖಲಾದ ಬಳಿಕ ಅವರನ್ನು ವಿಚಾರಣೆಗೊಳಪಡಿಸಲಾಗಿದೆಯೇ ಹೊರತು ಬಂಧಿಸಿಲ್ಲ. ತನಿಖಾ ಸಂಸ್ಥೆಗಳೊಂದಿಗೆ ಅವರು ಸಹಕರಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೂಕ್ಷ್ಮ ಭದ್ರತಾ ವಿಚಾರಗಳ ಕುರಿತು ವರದಿ ಸಿದ್ಧಪಡಿಸುವ ಹೊಣೆ
ಜಮ್ಮು-ಕಾಶ್ಮೀರದ ವಾಸ್ತವ ನಿಯಂತ್ರಣ ರೇಖೆ (ಎಲ್ಒಸಿ) ವ್ಯಾಪ್ತಿಯ ಬೆಳವಣಿಗೆಗಳು, ಅರುಣಾಚಲ ಪ್ರದೇಶದ ಪ್ರಮುಖ ಮೂಲಸೌಕರ್ಯ ಯೋಜನೆಗಳು ಹಾಗೂ ಡ್ರೋನ್ಗಳ ನಿಯೋಜನೆ ಸೇರಿದಂತೆ ಸೂಕ್ಷ್ಮ ರಕ್ಷಣಾ, ಭದ್ರತೆ ಮತ್ತು ಭೌಗೋಳಿಕ ರಾಜಕೀಯ ವಿಚಾರಗಳ ಕುರಿತು ವಿಶ್ಲೇಷಣಾತ್ಮಕ ವರದಿಗಳನ್ನು ಸಿದ್ಧಪಡಿಸುವಂತೆ ಮಹಿಳೆಗೆ ಸೂಚಿಸಲಾಗಿತ್ತು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
ಈ ಸಂಬಂಧ ಶುಕ್ರವಾರ ಜಮ್ಮುವಿನ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವರದಿ ಪ್ರಕಾರ, ಗೂಢಚರ್ಯೆ ಹಾಗೂ ಸಂರಕ್ಷಿತ ಅಧಿಕೃತ ಮಾಹಿತಿಯನ್ನು ಅನಧಿಕೃತವಾಗಿ ನಿರ್ವಹಿಸಿದ ಆರೋಪಗಳಿಗೆ ಸಂಬಂಧಿಸಿದ ಅಧಿಕೃತ ರಹಸ್ಯಗಳ ಕಾಯ್ದೆಯ (Official Secrets Act) ಸೂಕ್ತ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರ ಜತೆಗೆ, ಕ್ರಿಮಿನಲ್ ಪಿತೂರಿ ಹಾಗೂ ಭಾರತದ ಸಾರ್ವಭೌಮತ್ವಕ್ಕೆ ವಿರುದ್ಧವಾದ ಅಪರಾಧಗಳಿಗೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಕಲಂಗಳನ್ನೂ ಅನ್ವಯಿಸಲಾಗಿದೆ. ಪ್ರಕರಣದ ತನಿಖೆಯ ನೇತೃತ್ವವನ್ನು ಉಪ ಪೊಲೀಸ್ ಅಧೀಕ್ಷಕರಿಗೆ ವಹಿಸಲಾಗಿದೆ.
ಗುಪ್ತಚರ ಇಲಾಖೆಗೆ ದೊರೆತ ಸುಳಿವಿನ ಮೇರೆಗೆ ಕೇಂದ್ರ ಗುಪ್ತಚರ ಸಂಸ್ಥೆಯ ಸಿಬ್ಬಂದಿ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು. ಅಕ್ಟೋಬರ್ 14ರಂದು ಜಮ್ಮು ತಾವಿ ರೈಲು ನಿಲ್ದಾಣದಲ್ಲಿ ಪಠಾಣ್ಕೋಟ್ಗೆ ತೆರಳುವ ರೈಲು ಹತ್ತಲು ಸಿದ್ಧವಾಗಿದ್ದ ಮಹಿಳೆಯನ್ನು ತಡೆದು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಯಿತು. ಬಳಿಕ ಸಮೀಪದ ಸೇನಾ ನೆಲೆಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ಮಹಿಳೆಯ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ವಿಧಿವಿಜ್ಞಾನ ಪರೀಕ್ಷೆಗಾಗಿ (ಫೊರೆನ್ಸಿಕ್ ಎಕ್ಸಾಮಿನೇಷನ್) ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
2023ರಲ್ಲಿ ಮೇಜರ್ ನನ್ನು ವಿವಾಹವಾಗಿದ್ದ ಮಹಿಳೆ
ಆರೋಪಿತ ಮಹಿಳೆ 2023ರ ಅಕ್ಟೋಬರ್ನಲ್ಲಿ ಭಾರತೀಯ ಸೇನೆಯಲ್ಲಿ ಮೇಜರ್ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರನ್ನು ವಿವಾಹವಾಗಿದ್ದರು.
ಅವರು 2022ರಲ್ಲಿ ಜಿನೀವಾದಲ್ಲಿ ಯುರೋಪಿಯನ್ ಮತ್ತು ಅಂತಾರಾಷ್ಟ್ರೀಯ ಆಡಳಿತ ವಿಷಯದಲ್ಲಿ ಉನ್ನತ ಅಧ್ಯಯನದ ಸ್ನಾತಕೋತ್ತರ ಪದವಿ (ಮಾಸ್ಟರ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಇನ್ ಯುರೋಪಿಯನ್ ಆ್ಯಂಡ್ ಇಂಟರ್ನ್ಯಾಷನಲ್ ಗವರ್ನನ್ಸ್) ಪಡೆದಿದ್ದರು. ಅದಕ್ಕೂ ಮುನ್ನ, 2021ರಲ್ಲಿ ಬೆಂಗಳೂರಿನ ವಿಶ್ವವಿದ್ಯಾಲಯವೊಂದರಿಂದ ಅಂತಾರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದರು.
ಇದಲ್ಲದೆ, ನವದೆಹಲಿಯ ಭೂಯುದ್ಧ ಅಧ್ಯಯನ ಕೇಂದ್ರದಲ್ಲಿ (ಸೆಂಟರ್ ಫಾರ್ ಲ್ಯಾಂಡ್ ವಾರ್ಫೇರ್ ಸ್ಟಡೀಸ್-ಕ್ಲಾಸ್ಸ್) ಆನ್ಲೈನ್ ಇಂಟರ್ನ್ಶಿಪ್ ಮಾಡಿದ್ದರು. ಹಲವು ಸಂಶೋಧನಾ ಲೇಖನಗಳನ್ನೂ ಬರೆದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದ ಪ್ರಜೆ, ಮಲೇಷ್ಯಾದ ಸಲಹಾ ಸಂಸ್ಥೆ ನಿರ್ವಹಿಸುತ್ತಿದ್ದ ವ್ಯಕ್ತಿಯೊಂದಿಗೆ ಸಂಪರ್ಕದ ಆರೋಪ
ವಿಚಾರಣೆ ವೇಳೆ, ವಿಶ್ವಸಂಸ್ಥೆಯಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದ ಸಂದರ್ಭದಲ್ಲಿ ಮಹಿಳೆ ಹಲವು ವಿದೇಶಿ ಪ್ರಜೆಗಳೊಂದಿಗೆ ಸಂಪರ್ಕ ಹೊಂದಿದ್ದ ಸಂಗತಿ ತನಿಖಾಧಿಕಾರಿಗಳ ಗಮನಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ ಚೀನಾದ ಪ್ರಜೆಯೊಬ್ಬರೊಂದಿಗೆ ವಾಟ್ಸ್ಆ್ಯಪ್ ಮೂಲಕ ಸಂಪರ್ಕದಲ್ಲಿದ್ದರು ಎಂಬುದು ತನಿಖಾಧಿಕಾರಿಗಳ ಆರೋಪವಾಗಿದೆ.
ಇದಲ್ಲದೆ, 2024ರಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಮಲೇಷ್ಯಾದ ಪ್ರಜೆಯೊಬ್ಬರೊಂದಿಗೂ ಮಹಿಳೆ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಸಲಹಾ ಸಂಸ್ಥೆಯೊಂದನ್ನು ನಡೆಸುತ್ತಿದ್ದ ಆ ವ್ಯಕ್ತಿ ಚೀನಾದ ಗುಪ್ತಚರ ಸಂಸ್ಥೆಗಳ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ಶಂಕೆಯಿದೆ ಎಂದು ಅವರು ಹೇಳಿದ್ದಾರೆ.
ವಿಚಾರಣೆ ವೇಳೆ, ತಾವು ಸಿದ್ಧಪಡಿಸಿದ ಸಂಶೋಧನಾ ಮಾಹಿತಿಯು ಸಂಪೂರ್ಣವಾಗಿ ಸಾರ್ವಜನಿಕವಾಗಿ ಲಭ್ಯವಿರುವ ಮೂಲಗಳನ್ನು ಆಧರಿಸಿದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಜತೆಗೆ, ಓಪನ್ಎಐ ಅಭಿವೃದ್ಧಿಪಡಿಸಿರುವ ಚಾಟ್ಜಿಪಿಟಿ ಮತ್ತು ಆಂಥ್ರೋಪಿಕ್ ಅಭಿವೃದ್ಧಿಪಡಿಸಿರುವ ಕ್ಲಾಡ್ ಕೃತಕ ಬುದ್ಧಿಮತ್ತೆ ವೇದಿಕೆಗಳ ನೆರವನ್ನೂ ಪಡೆದಿರುವುದಾಗಿ ತಿಳಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ